More

    ನೇಹಾ ಹತ್ಯೆ ಪ್ರಕರಣ ತನಿಖೆ ಸಿಬಿಐಗೆ ವಹಿಸಲು ಎಬಿವಿಪಿ ಒತ್ತಾಯ

    ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಇದರಿಂದ ಲವ್​ಜಿಹಾದ್​ನಲ್ಲಿ ಇನ್ನೂ ಎಷ್ಟು ಹೆಣ್ಣು ಮಕ್ಕಳು ಸಿಲುಕಿದ್ದಾರೆ ಎಂಬುದು ಬೆಳಕಿಗೆ ಬರಲಿದೆ ಎಂದಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ ಕಾರ್ಯದರ್ಶಿ ಸಚಿನ ಕುಳಗೇರಿ, ಘಟನೆ ಖಂಡಿಸಿ ಏ. 20ರಂದು ಬೆಳಗ್ಗೆ 10 ಗಂಟೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ಯೆಗೆ ವೈಯಕ್ತಿಕ ಕಾರಣ ಹಾಗೂ ಆಕಸ್ಮಿಕ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಒತ್ತಾಯಿಸಿದರು.

    ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಹತ್ಯೆಯನ್ನು ಖಂಡಿಸಬೇಕು. ಒಂದು ಕೋಮಿನ ಮತಗಳಿಗಾಗಿ ಇಲ್ಲದ ಹೇಳಿಕೆ ನೀಡಬಾರದು. ತನಿಖೆಗೆ ಪೊಲೀಸರಿಗೆ ಮುಕ್ತ ಅವಕಾಶ ನೀಡಲಿ ಎಂದು ಒತ್ತಾಯಿಸಿದರು.

    ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಅದಕ್ಕಾಗಿ ಎನ್​ಕೌಂಟರ್ ಕಾನೂನು ಜಾರಿಗೊಳಿಸಲಿ ಎಂದು ಮನವಿ ಮಾಡಿದರು.

    ನೇಹಾಳ ಹತ್ಯೆಯ ನಂತರ ಫಯಾಜ್ ಆಕೆಯ ತಾಯಿಯ ಮೇಲೂ ಹಲ್ಲೆ ಮಾಡಿದ್ದ. ಆಕೆಯನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದರು ಎಂಬ ಅಧಿಕಾರಿಗಳ ಮಾತುಗಳು ಸತ್ಯಕ್ಕೆ ದೂರವಾದದ್ದು. ಇಂತಹ ಸುಳ್ಳು ಹೇಳಿಕೆಯನ್ನು ನೀಡುವ ಮೂಲಕ ತನಿಖೆಯ ದಾರಿ ತಪ್ಪಿಸಬಾರದು ಎಂದು ಹೇಳಿದರು.

    ಈ ಘಟನೆಯಿಂದ ವಿದ್ಯಾರ್ಥಿನಿಯರು ಭಯಪಡಬಾರದು. ಕಾಲೇಜು ಆಡಳಿತ ಮಂಡಳಿಗಳು ಹಾಗೂ ಪೊಲೀಸರು ಭಯಮುಕ್ತ ವಾತಾವರಣ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪೊಲೀಸರು ಕಾಲೇಜುಗಳ ಕ್ಯಾಂಪಸ್​ಗಳಲ್ಲಿ ಮಫ್ತಿನಲ್ಲಿ ತಿರುಗಾಡಬೇಕು ಹಾಗೂ ಶಂಕಾಸ್ಪದರ ಬಗ್ಗೆ ವಿಚಾರಣೆ ನಡೆಸಬೇಕು ಎಂದರು.

    ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವುದು ಶಿಕ್ಷಣ ಪಡೆಯಲು. ಅದನ್ನು ಬಿಟ್ಟು, ಪ್ರೀತಿ-ಪ್ರೇಮದ ಬಗ್ಗೆ ವ್ಯಾಮೋಹ ಬಿಡಬೇಕು ಎಂದು ಸಲಹೆ ನೀಡಿದರು.

    ಪರಿಷತ್​ನ ಶಿವಾನಿ ಶೆಟ್ಟಿ, ಸುಶೀಲ ಡಿ. ಹಾಗೂ ಅರುಣ ಅಮರಗೋಳ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts