More

    ನೇಮಕಾತಿಗೆ ತಡೆ ಕೈಬಿಡಲು ಆಗ್ರಹ

    ಕಲಬುರಗಿ: ಕೋವಿಡ್-19 ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ವೃಂದ ಹಾಗೂ ಹಿಂಬಾಕಿ ಹುದ್ದೆಗಳನ್ನು ಭರ್ತಿ ಮಾಡದಂತೆ ಸರ್ಕಾರ ಹೊರಡಿಸಿದ ಆದೇಶ ರದ್ದುಗೊಳಿಸಬೇಕು ಎಂದು ಮಾಜಿ ಸಚಿವರಾದ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
    ಸಿಎಂ ಬಿ.ಎಸ್ .ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಪತ್ರ ಬರೆದ ಅವರು, ಸುತ್ತೋಲೆ ರದ್ದುಪಡಿಸಿ ನೇಮಕಾತಿಗೆ ಅನುಮತಿಸಿ ಮರು ಆದೇಶಿಸುವಂತೆ ಒತ್ತಾಯಿಸಿದ್ದಾರೆ.
    ಈ ಭಾಗದ ರಾಜಕೀಯ ನಾಯಕರ, ಹಿರಿಯ ಧುರೀಣರ, ಸಂಘಟನೆಗಳ ಅವಿರತ ಹೋರಾಟದ ಫಲವಾಗಿ ಅಭಿವೃದ್ಧಿವಂಚಿತ ಕಲ್ಯಾಣ ಕರ್ನಾಟಕದ ಸಮಗ್ರ ಪ್ರಗತಿಗೆ ಸಂವಿಧಾನದ 371(ಜೆ) ಜಾರಿಗೆ ತರಲಾಗಿದೆ. ಕಾಂಗ್ರೆಸ್ ಸರ್ಕಾರವಿದ್ದಾಗ ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಕಲ್ಯಾಣ ಕರ್ನಾಟಕ ಹುದ್ದೆಗಳ ಭರ್ತಿಗೆ ಇದ್ದ ಆರ್ಥಿಕ ಇಲಾಖೆ ನಿಬಂಧನೆಗಳಿಗೆ ವಿನಾಯಿತಿ ನೀಡಿ ಸುಮಾರು 50 ಸಾವಿರ ಹುದ್ದೆ ಭರ್ತಿಗೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ಯುವ ಸಮುದಾಯದವರ ಭಾವನೆಗೆ ವಿರುದ್ಧವಾಗಿ ಹೊರಟಿದೆ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    ಕರೊನಾ ಸಂಕಷ್ಟದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುವ ನೆಪವೊಡ್ಡಿ ಈ ಭಾಗದ ಹುದ್ದೆಗಳ ನೇರ ನೇಮಕಾತಿಗೆ ಮಾತ್ರ ತಡೆ ಒಡ್ಡಿರುವುದು 371(ಜೆ) ವಿಧಿ ಮೂಲ ಉದ್ದೇಶಕ್ಕೆ ಧಕ್ಕೆ ತಂದಂತಾಗಿದೆ. ಹೈಕವನ್ನು ಕಲ್ಯಾಣ ಕರ್ನಾಟಕ ನಾಮಕರಣ ಮಾಡಿ ನಂತರ ನಿರ್ಲಕ್ಷಿಸಿದ ಕ್ರಮವನ್ನು ಟೀಕಿಸಿದ್ದಾರೆ.
    ಈ ಭಾಗದ ನಿರುದ್ಯೋಗಿಗಳಿಗೆ ಹುದ್ದೆಗಳ ನೇಮಕಾತಿಗೆ ಬ್ರೇಕ್ ಹಾಕುವ ಆದೇಶ ಹೊರಡಿಸುವ ಮೂಲಕ ಅನ್ಯಾಯ ಎಸಗಲಾಗಿದೆ. ಹೆಸರು ಬದಲಾವಣೆ ಮಾಡಿದರೆ ಅಭಿವೃದ್ಧಿಯಾಗದು, ಅಸಮತೋಲನೆಗೆ ಒಳಗಾಗಿರುವ ಈ ಭಾಗದವರಿಗೆ ಉದ್ಯೋಗ ಕಲ್ಪಿಸಿದರೆ ಮಾತ್ರ ಅಭಿವೃದ್ಧಿ ಆಗಲಿದೆ ಎಂಬುದನ್ನು ಸಿಎಂ ಅರಿತುಕೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ಕುಟುಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts