More

    ನೇಗಿಲೋಣಿ ಯುವಕನ ಕುಟುಂಬಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರ ಸಾಂತ್ವನ

    ಹೊಸನಗರ: ಗುಂಡೇಟಿಗೆ ಬಲಿಯಾದ ತಾಲೂಕಿನ ನೇಗಿಲೋಣಿಯ ಯುವಕ ಅಂಬರೀಷ್ ಪ್ರಕರಣವನ್ನು ಡಿವೈಎಸ್ಪಿ ರ‌್ಯಾಂಕಿಂಗ್ ಅಧಿಕಾರಿಯಿಂದ ತನಿಖೆ ಮಾಡಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ.
    ಶುಕ್ರವಾರ ರಾತ್ರಿ ಅಂಬರೀಷ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವರು, ಮನೆಗೆ ಭೇಟಿ ನೀಡಲು ವಿಳಂಬವಾಗಿದ್ದಕ್ಕೆ ಅನ್ಯಥಾ ಭಾವಿಸಬೇಡಿ ಎಂದರು.
    ಮೃತ ಅಂಬರೀಷನ ತಂದೆ ಸಿದ್ದನಾಯ್ಕ, ತಾಯಿ, ಸಹೋದರಿ ಅಮಿತಾ ಮತ್ತು ಸಹೋದರ ಅಭಿಷೇಕ್ ಅವರು ಈ ಸಾವಿನಲ್ಲಿ ಹಲವು ಅನುಮಾನಗಳಿವೆ ಎಂದು ಸಚಿವರ ಗಮನಕ್ಕೆ ತಂದರು. ಗುಂಡೇಟು ಪ್ರಕರಣದ ಹಲವು ಮಾಹಿತಿಗಳನ್ನು ಸಚಿವರಿಗೆ ತಿಳಿಸಿ ಕಂಬನಿ ಮಿಡಿದರು. ಈವರೆಗಿನ ತನಿಖೆಯಿಂದ ನ್ಯಾಯ ಸಿಗಲು ಸಾಧ್ಯವಿಲ್ಲ. ಮರು ತನಿಖೆ ಮಾಡಿ ಸಾವಿನ ಸತ್ಯ ಹೊರ ಬರಬೇಕು. ಆಗ ಮಾತ್ರ ಮೃತನ ಆತ್ಮಕ್ಕೆ ಗೌರವ ಸಿಕ್ಕಂತಾಗುತ್ತದೆ ಎಂದು ಅಳಲು ತೋಡಿಕೊಂಡರು. ಅಲ್ಲದೆ ಪ್ರಕರಣ ನಡೆದ ದಿನ ನಮ್ಮ ಗ್ರಾಮದಲ್ಲೇ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ. ಆದರೂ ಅಂದು ಮನೆಗೆ ಭೇಟಿ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಆಗ ಕುಟುಂಬಸ್ಥರ ಎದುರಲ್ಲೇ ಶಿವಮೊಗ್ಗ ಎಸ್ಪಿ ಲಕ್ಷ್ಮೀಪ್ರಸಾದ್‌ಗೆ ಕರೆ ಮಾಡಿದ ಸಚಿವರು, ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡರು. ಈವರೆಗೆ ಆಗಿರುವ ತನಿಖೆ ಬಗ್ಗೆ ಕುಟುಂಬದವರಿಗೆ ಸಮಾಧಾನವಿಲ್ಲ. ಅಲ್ಲದೆ ಸಾಕಷ್ಟು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಡಿವೈಎಸ್ಪಿ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಸಿ, ತಂದೆ ತಾಯಿ ಹೇಳಿಕೆ ಪಡೆಯಿರಿ. ತಗುಲಿದ ಗುಂಡು ಯಾವ ಕೋವಿಯಿಂದ ಸಿಡಿದಿದೆ. ಆ ಕೋವಿ ಯಾವುದು ಮತ್ತು ಯಾರದ್ದು ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಲಿ. ತಪ್ಪಿತಸ್ಥರು ಯಾರೇ ಇದ್ದರು ಕೂಡ ಶಿಕ್ಷೆಗೆ ಒಳಪಡಬೇಕು ಎಂದು ಸಚಿವರು ಸೂಚಿಸಿದರು.
    ತಪ್ಪು ತಿಳಿಯಬೇಡಿ: ಘಟನೆ ನಡೆದ ದಿನದಂದು ಅಂಡಗದೋದೂರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಆ ಹೊತ್ತಿಗೆ ಮಾಹಿತಿ ಲಭ್ಯ ಇರಲಿಲ್ಲ. ಬಳಿಕ ಆನಂದಪುರ ಮುರುಘಾ ಮಠದಲ್ಲಿ ಪೂರ್ವ ನಿಗದಿತ ಸೇನಾ ನೇಮಕಾತಿ ತರಬೇತಿ ಕಾರ್ಯಕ್ರಮವಿತ್ತು. ಅಲ್ಲದೇ ಮೊಮ್ಮಗನ ಆರೋಗ್ಯದಲ್ಲಿ ಏರುಪೇರಾಗಿ ಶಿವಮೊಗ್ಗ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ಹೀಗಾಗಿ ತುರ್ತಾಗಿ ತೆರಳಿದೆ. ಗ್ರಾಮದಲ್ಲಿದ್ದಾಗ ಯುವಕನೋರ್ವ ರಾತ್ರಿ ಹೋದವನು ವಾಪಸ್ ಬಂದಿಲ್ಲ ಎಂಬಷ್ಟೇ ಮಾಹಿತಿ ಇತ್ತು. ಇಲ್ಲಿ ನಡೆದ ಗುಂಡೇಟು ಪ್ರಕರಣ ತಿಳಿಯುವ ಹೊತ್ತಿಗೆ ಬೆಂಗಳೂರಿನಲ್ಲಿದ್ದೆ. ವಿಷಯ ತಿಳಿದ ಕೂಡಲೆ ಎರಡು ದಿನದಲ್ಲಿ ಭೇಟಿ ನೀಡುವುದಾಗಿ ತಿಳಿಸಿದ್ದೆ. ಈ ಬಗ್ಗೆ ತಪ್ಪು ತಿಳಿಯ ಬೇಡಿ ಎಂದು ಕುಟುಂಬದವರಲ್ಲಿ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts