More

    ನೆರೆ ಸಂತ್ರಸ್ತರು ಮತ್ತೆ ಅತಂತ್ರ

    ಕಾರವಾರ : ಕರೊನಾ ಮಹಾಮಾರಿಯು ಜಿಲ್ಲೆಯ ನೆರೆ ಸಂತ್ರಸ್ತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

    ಕಳೆದ ವರ್ಷ ಆಗಸ್ಟ್ ಹಾಗೂ ಸೆಪ್ಟೆಂಬರ್​ನಲ್ಲಿ ಬಂದ ಮಹಾಮಳೆ ಸಂದರ್ಭದಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 2713, ನಗರ ಭಾಗದಲ್ಲಿ 415 ಸೇರಿ ಒಟ್ಟು 3128 ಮನೆಗಳಿಗೆ ಹಾನಿಯಾಗಿತ್ತು. ಹಾನಿಯ ಆಧಾರದ ಮೇಲೆ ಕೆಟಗರಿ ನಿರ್ಧಾರ ಮಾಡಿ ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದೆ.

    ಇದರಲ್ಲಿ 62 ಮನೆಗಳು ಮಾತ್ರ ಸಂಪೂರ್ಣವಾಗಿ ಕಟ್ಟಿ ಮುಗಿದಿವೆ. 30 ಮನೆಗಳು ಛಾವಣಿ ಹಂತದಲ್ಲಿವೆ. 187 ಮನೆಗಳ ಗೋಡೆ ನಿರ್ಮಾಣ ಕಾರ್ಯ ನಡೆದಿದೆ. 521 ಮನೆಗಳು ತಳಪಾಯ ಹಂತದಲ್ಲಿವೆ. ಇನ್ನೂ ಹಲವು ಮನೆಗಳ ರಿಪೇರಿ ಕಾರ್ಯ ನಡೆಯಬೇಕಿದೆ.

    ನಿರ್ಮಾಣ ಕಾಮಗಾರಿ ಚುರುಕುಗೊಳ್ಳುವ ಹೊತ್ತಿಗೆ ಲಾಕ್​ಡೌನ್​ನಿಂದ ಕಾರ್ಯಗಳು ಸ್ಥಗಿತವಾಗಿವೆ.

    ಇಷ್ಟು ದಿನ ಮರಳಿನ ಸಮಸ್ಯೆ ಇತ್ತು. ಇನ್ನೇನು ಮರಳು ಸಿಕ್ಕಿತು ಎನ್ನುವಾಗ ಕಾರ್ವಿುಕರು ಸಿಗದಂಥ ಪರಿಸ್ಥಿತಿ ಉಂಟಾಗಿದೆ. ಇನ್ನು ನೀರಿನ ತುಟಾಗ್ರತೆಯ ಆತಂಕವಿದೆ. ಇನ್ನೊಂದೇ ತಿಂಗಳಲ್ಲಿ ಮಳೆಗಾಲವೂ ಶುರುವಾಗಲಿದೆ. ಇದರಿಂದ ಮನೆ ನಿರ್ಮಾಣ ಮುಗಿಸುವುದು ಯಾವಾಗ ಎಂಬ ದುಗುಡ ನಿರಾಶ್ರಿತರಲ್ಲಿ ಮನೆ ಮಾಡಿದೆ.

    ಜಿಲ್ಲೆಯಲ್ಲಿ 195 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು,ಸರ್ಕಾರದಿಂದ 5 ಲಕ್ಷ ರೂ. ನೀಡುವ ಭರವಸೆ ಸಿಕ್ಕಿದೆ. 690 ಮನೆಗಳಿಗೆ ಶೇ. 25ರಿಂದ 75ರವರೆಗೆ ಹಾನಿಯಾಗಿದ್ದು, ಇವುಗಳಿಗೆ 1 ಲಕ್ಷ ರೂ. ಪರಿಹಾರ ನೀಡುವ ಭರವಸೆ ಸಿಕ್ಕಿದೆ. ಈ ಎಲ್ಲ ಮನೆಗಳ ಪುನರ್​ನಿರ್ವಣ ಕಾರ್ಯ ನಡೆಯುತ್ತಿದೆ. 2243 ಮನೆಗಳಿಗೆ ಶೇ. 25 ಕ್ಕಿಂತ ಕಡಿಮೆ ಹಾನಿಯಾಗಿದ್ದು, ಅವುಗಳಿಗೆ 25 ಸಾವಿರ ರೂ. ಪರಿಹಾರ ಅಬಿಡುಗಡೆ ಮಾಡಲಾಗಿದೆ.

    ಮುಗಿಯುತ್ತಿದೆ ಬಾಡಿಗೆ ಅವಧಿ: ಸಂಪೂರ್ಣ ಮನೆ ಕಳೆದುಕೊಂಡ 65 ಕುಟುಂಬಗಳಿಗೆ ಸರ್ಕಾರ ಬಾಡಿಗೆ ಮನೆಯಲ್ಲಿರಲು ಅವಕಾಶ ನೀಡಿದೆ. ಅವರಿಗೆ ಪ್ರತಿ ತಿಂಗಳು 5 ಸಾವಿರ ರೂ.ನಂತೆ 10 ತಿಂಗಳಿಗೆ ಬಾಡಿಗೆ ನೀಡುವುದಾಗಿ ಸರ್ಕಾರ ತಿಳಿಸಿದೆ. ಈ ಮೇ ತಿಂಗಳಿಗೆ ಸರ್ಕಾರದ ಬಾಡಿಗೆ ಮುಕ್ತಾಯವಾಗಲಿದೆ.

    ಆಗ ಮರಳು ಸರಿಯಾಗಿ ಸಿಕ್ಕಿರ್ಲಿಲ್ಲ. ಈಗ ನೀರು ಕಡಿಮೆಯಾಗ್ತಿದೆ. ವಾರದಿಂದ ಲಾಕ್​ಡೌನ್ ಇರುವುದರಿಂದ ಕಾರ್ವಿುಕರೂ ಬಂದಿಲ್ಲ. ಮತ್ತೆ ಲಾಕ್​ಡೌನ್ ಮುಂದುವರಿದರೆ, ಮಳೆಗಾಲಕ್ಕೂ ನಮ್ಮ ಮನೆಯ ಕನಸು ನನಸಾಗುವ ಲಕ್ಷಣ ಕಾಣುತ್ತಿಲ್ಲ.

    ಚಂದ್ರಹಾಸ ಹರಿಕಂತ್ರ, ನೆರೆ ಸಂತ್ರಸ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts