More

    ನೆರೆವು ಕನ್ನ 18 ಕೋಟಿಗೂ ಅಧಿಕ?

    ಪರಶುರಾಮ ಕೆರಿ ಹಾವೇರಿ

    ಜಿಲ್ಲೆಯ ರೈತರಿಗೆ ಅತಿವೃಷ್ಟಿ ಹಾಗೂ ನೆರೆಯಿಂದ ಹಾಳಾದ ಬೆಳೆಗಳಿಗೆ ಸರ್ಕಾರದಿಂದ ಬಿಡುಗಡೆಯಾಗಿದ್ದ 202 ಕೋಟಿ ರೂ. ಮೊತ್ತದಲ್ಲಿ ಅಂದಾಜು 18.17 ಕೋಟಿ ರೂಪಾಯಿಗೂ ಹೆಚ್ಚು ಹಣ ಅನರ್ಹರ ಪಾಲಾಗಿರುವ ಸಂಶಯ ವ್ಯಕ್ತವಾಗಿದೆ.

    ನೆರೆ ಪರಿಹಾರದಲ್ಲಾದ ಅಕ್ರಮದ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಮೇಲ್ನೋಟಕ್ಕೆ ಇಷ್ಟು ಮೊತ್ತದ ಹಣ ಅನರ್ಹರ ಪಾಲಾಗಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಪರಿಹಾರ ವಿತರಣೆಯಲ್ಲಿನ ಗೋಲ್ಮಾಲ್ ಕುರಿತು ‘ವಿಜಯವಾಣಿ’ ಫೆ. 8ರಿಂದ ಸರಣಿ ವರದಿಗಳ ಮೂಲಕ ಸರ್ಕಾರದ ಗಮನ ಸೆಳೆದಿತ್ತು. ಅದರಂತೆ ಜಿಲ್ಲೆಯ ಏಳು ತಾಲೂಕುಗಳಲ್ಲಿ ತಹಸೀಲ್ದಾರ್, ಗ್ರಾಮ ಲೆಕ್ಕಾಧಿಕಾರಿ, ಡಾಟಾ ಎಂಟ್ರಿ ಆಪರೇಟರ್ ಸೇರಿ ಇನ್ನಿತರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಇದೀಗ ಪೊಲೀಸ್ ತನಿಖೆಯೂ ಪ್ರಗತಿಯಲ್ಲಿದ್ದು, ನೆರೆ ಅಕ್ರಮ ಅಗೆದಷ್ಟು ಆಳವಾಗಿ ಕಾಣುತ್ತಿದೆ. ಭಾರಿ ಪ್ರಮಾಣದ ಗೋಲ್ಮಾಲ್ ನಡೆದಿರುವುದು ಬಹಿರಂಗವಾಗುತ್ತಿದೆ.

    ನೆರೆ, ಅತಿವೃಷ್ಟಿಯಿಂದಾದ ಬೆಳೆ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ಬಿಡುಗಡೆಯಾಗಿದ್ದು, ಅದರ ವಿತರಣೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಈಗಾಗಲೇ ಸಾಬೀತಾಗಿದೆ. ಅದರ ಆಧಾರದ ಮೇಲೆ ಈಗಾಗಲೇ ಗ್ರಾಮಲೆಕ್ಕಾಧಿಕಾರಿ, ಗ್ರಾಮ ಸಹಾಯಕರು ಸೇರಿ 7 ಜನರನ್ನು ಬಂಧಿಸಲಾಗಿದೆ.

    ಜಿಲ್ಲೆಯ ಏಳು ತಾಲೂಕುಗಳಲ್ಲಿ ಬೆಳೆ ಹಾನಿ ಪರಿಹಾರದ ಗೋಲ್ಮಾಲ್ ತನಿಖೆ ಚುರುಕುಗೊಂಡಿದ್ದರೂ ಇದುವರೆಗೆ ಎಷ್ಟು ಮೊತ್ತದ ಹಣ ಅನರ್ಹರ ಪಾಲಾಗಿದೆ ಎಂಬುದು ಖಚಿತವಾಗಿಲ್ಲ. ಆದರೆ, ‘ವಿಜಯವಾಣಿ’ಗೆ ಬಲ್ಲ ಮೂಲಗಳಿಂದ ದೊರೆತಿರುವ ಮಾಹಿತಿ ಪ್ರಕಾರ 18.17 ಕೋಟಿ ರೂ. ಪರಿಹಾರದ ಹಣ ಬೇರೆಯವರ ಪಾಲಾಗಿದೆ ಎಂದು ತಿಳಿದುಬಂದಿದೆ.

    ಅಕ್ರಮ ಪತ್ತೆ ಹೇಗೆ? : ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಯಮದ ಪ್ರಕಾರ ಒಬ್ಬ ರೈತನ ಗರಿಷ್ಠ 4 ಎಕರೆ 38 ಗುಂಟೆಗೆ ಮಾತ್ರ ಪರಿಹಾರ ನೀಡಬಹುದು. ಆದರೆ, ಜಿಲ್ಲೆಯಲ್ಲಿ ಅದಕ್ಕಿಂತ ಹೆಚ್ಚಿನ ಜಮೀನಿನಲ್ಲಿ ಬೆಳೆ ನಷ್ಟವಾಗಿದೆ ಎಂದು ತೋರಿಸಿ ಅದನ್ನು ಮತ್ತಾರದೋ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಈ ರೀತಿಯ 1,605 ಪ್ರಕರಣಗಳನ್ನು ಈವರೆಗೆ ಜಿಲ್ಲೆಯಲ್ಲಿ ಪತ್ತೆ ಹಚ್ಚಲಾಗಿದೆ. ಅದಕ್ಕೆ ಸಂಬಂಧಿಸಿದಂತೆ 18.17 ಕೋಟಿ ರೂ. ಪರಿಹಾರ ಅನರ್ಹರ ಪಾಲಾಗಿದೆ. ಬೆಳೆ ನಷ್ಟ ಸಮೀಕ್ಷೆ ನಡೆಸಿ ಅದನ್ನು ತಂತ್ರಾಂಶದಲ್ಲಿ ಅಳವಡಿಸುವ ವೇಳೆಯೇ ಬೇರೆಯವರ ಬ್ಯಾಂಕ್ ಖಾತೆ ಸಂಖ್ಯೆ ತೋರಿಸಲಾಗಿದೆ. ಈ ಮೂಲಕ ಕಂದಾಯ ಇಲಾಖೆ ನೌಕರರೇ ನೇರವಾಗಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಹಾವೇರಿ ತಾಲೂಕಿನಲ್ಲಿ 48 ಗ್ರಾಮ ಲೆಕ್ಕಾಧಿಕಾರಿಗಳಲ್ಲಿ 18 ಜನರು ಈ ರೀತಿಯಲ್ಲಿ ಅಕ್ರಮ ಎಸಗಿರುವುದು ಕಂಡುಬಂದಿದೆ. ಜಿಲ್ಲೆಯಲ್ಲಿ ಒಟ್ಟು 291 ಗ್ರಾಮ ಲೆಕ್ಕಾಧಿಕಾರಿಗಳಿದ್ದು, ಅವರಲ್ಲಿ 100ಕ್ಕೂ ಅಧಿಕ ಗ್ರಾಮ ಲೆಕ್ಕಾಧಿಕಾರಿಗಳು ಅಕ್ರಮ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. 7 ಕಡೆಗಳಲ್ಲಿ ಸರ್ಕಾರಿ ಭೂಮಿಗೂ ಪರಿಹಾರ ಕೊಡಲಾಗಿದೆ ಎಂದು ತಿಳಿದುಬಂದಿದೆ.

    ಪೊಲೀಸ್ ತನಿಖೆ ವಿಳಂಬ: ಕಂದಾಯ ಇಲಾಖೆ ಅಧಿಕಾರಿಗಳು ನಡೆಸಿದ ಪರಿಶೀಲನೆಯ ವೇಳೆಯಲ್ಲಿ ಅಕ್ರಮ ಪತ್ತೆಯಾಗಿತ್ತು. ಇದು ಕ್ರಿಮಿನಲ್ ಪ್ರಕರಣವಾಗಿದ್ದರಿಂದ ಪೊಲೀಸ್ ತನಿಖೆಗೆ ವಹಿಸಲಾಗಿದೆ. ಆಯಾ ತಾಲೂಕಿನ ಪ್ರಕರಣಗಳ ತನಿಖೆಯನ್ನು ಸ್ಥಳೀಯ ಸಿಪಿಐಗಳು ಮಾಡುತ್ತಿದ್ದಾರೆ. ಕಳೆದೊಂದು ತಿಂಗಳಿನಿಂದ ಈ ತನಿಖೆ ನಡೆಯುತ್ತಿದ್ದು, ಬೆರಳೆಣಿಕೆಯಷ್ಟು ಜನರನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ 100ಕ್ಕೂ ಅಧಿಕ ಗ್ರಾಮಲೆಕ್ಕಾಧಿಕಾರಿಗಳು ಇದರಲ್ಲಿ ಶಾಮೀಲಾಗಿರುವ ಸಂಶಯವಿದ್ದು, ಈವರೆಗೆ ನಾಲ್ವರು ಗ್ರಾಮಲೆಕ್ಕಾಧಿಕಾರಿಗಳನ್ನು ಮಾತ್ರ ವಶಕ್ಕೆ ಪಡೆಯಲಾಗಿದೆ. ಹೀಗಾಗಿ ಪೊಲೀಸ್ ತನಿಖೆ ವಿಳಂಬವಾಗುತ್ತಿದೆ ಎಂಬ ಆರೋಪವೂ ರೈತರಿಂದ ಕೇಳಿ ಬರತೊಡಗಿದೆ.

    ಜಿಲ್ಲೆಯಲ್ಲಿ ಕಳೆದ ಮುಂಗಾರು ಹಂಗಾಮಿನಲ್ಲಿ 3.71 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ನೆರೆಯಿಂದ 3.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಂದರೆ, ಶೇ. 83.60ರಷ್ಟು ಪ್ರದೇಶದಲ್ಲಿನ ಬೆಳೆ ಹಾನಿಯಾಗಿತ್ತು. ಒಟ್ಟು 1.52 ಲಕ್ಷ ರೈತರ ಬೆಳೆ ನಷ್ಟವಾಗಿರುವ ಕುರಿತು ತಂತ್ರಾಂಶದಲ್ಲಿ ಅಳವಡಿಸಲಾಗಿತ್ತು. ಇದುವರೆಗೆ ಶಿಗ್ಗಾಂವಿ ತಾಲೂಕಿಗೆ 38.58 ಕೋಟಿ, ಸವಣೂರು ತಾಲೂಕಿಗೆ 31.82 ಕೋಟಿ, ಹಾನಗಲ್ಲ ತಾಲೂಕಿನ ರೈತರಿಗೆ 41.55 ಕೋಟಿ, ಹಾವೇರಿ ತಾಲೂಕಿಗೆ 45.14 ಕೋಟಿ, ಬ್ಯಾಡಗಿ ತಾಲೂಕಿಗೆ 9.54 ಕೋಟಿ, ಹಿರೇಕೆರೂರು ತಾಲೂಕಿಗೆ 3.97, ರಾಣೆಬೆನ್ನೂರ ತಾಲೂಕಿಗೆ 27.02 ಕೋಟಿ, ರಟ್ಟಿಹಳ್ಳಿ ತಾಲೂಕಿಗೆ 4.35 ಕೋಟಿ ಸೇರಿ 202 ಕೋಟಿ ರೂ. ಪರಿಹಾರ ವಿತರಣೆಯಾಗಿದೆ.

    ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ಆಗಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಷ್ಟು ಪ್ರಮಾಣದಲ್ಲಿ ಪರಿಹಾರ ಅನರ್ಹರ ಪಾಲಾಗಿದೆ ಎಂದು ಈಗಲೇ ನಿಖರವಾಗಿ ಗೊತ್ತಾಗುವುದಿಲ್ಲ. ತನಿಖೆಯಲ್ಲಿ ಎಲ್ಲವೂ ಹೊರಬರಲಿದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು. ಸರ್ಕಾರದ ಹಣವನ್ನು ಮರಳಿಸಲೇಬೇಕು. ಕೆಲ ಗ್ರಾಮ ಲೆಕ್ಕಾಧಿಕಾರಿಗಳು ಬೇಕಾಬಿಟ್ಟಿ ಅಕ್ರಮದಲ್ಲಿ ತೊಡಗಿರುವುದು ಕಂಡುಬಂದಿದೆ. ಎಲ್ಲವನ್ನೂ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದು ನಿಶ್ಚಿತ.

    | ಕೃಷ್ಣ ಬಾಜಪೈ, ಜಿಲ್ಲಾಧಿಕಾರಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts