More

    ನೆರೆಯಲ್ಲಿ ಕೊಚ್ಚಿ ಹೋದ ಪರಿಹಾರ

    ಸುಭಾಸ ಧೂಪದಹೊಂಡ ಕಾರವಾರ

    ಪ್ರಕೃತಿ ವಿಕೋಪಕ್ಕೆ ಉತ್ತರ ಕನ್ನಡ ಮತ್ತೆ ತತ್ತರಗೊಳ್ಳುತ್ತಿದೆ. ಜನರು ತಮ್ಮ ಮನೆ, ಬೆಳೆ ಕಳೆದುಕೊಂಡು ಸಂತ್ರಸ್ತರಾಗುತ್ತಿದ್ದಾರೆ. ಆದರೆ, ಇವರಿಗೆ ಸರ್ಕಾರ ಭರವಸೆ ನೀಡಿದಂತೆ ಹಿಂದಿನ ವರ್ಷಗಳ ಹಾನಿಯ ಪರಿಹಾರವನ್ನೇ ಇದುವರೆಗೂ ಸರಿಯಾಗಿ ಸಂದಾಯ ಮಾಡಿಲ್ಲ. ಈ ಬಾರಿಯಾದರೂ ನೆರವಿಗೆ ಬಂದೀತೇ ಎಂಬ ಪ್ರಶ್ನೆ ಕಾಡತೊಡಗಿದೆ.

    2019 ರಲ್ಲಿ ಉತ್ತರ ಕನ್ನಡದಲ್ಲಿ ಭಾರಿ ಪ್ರವಾಹ ಬಂದಿತ್ತು. 2020 ರಲ್ಲೂ ನೆರೆ ಜಿಲ್ಲೆಯವರಿಗೆ ನರಕ ತೋರಿಸಿದೆ. ಮತ್ತೆ ಈ ಬಾರಿಯೂ ಮಳೆಗಾಲಕ್ಕೂ ಮುಂಚೆ ತೌಕ್ತೆ ಚಂಡ ಮಾರುತ ಕರಾವಳಿಗರನ್ನು ತಲ್ಲಣಿಸಿದೆ. ತೌಕ್ತೆಯಿಂದ 153 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 22 ಮನೆಗಳಿಗೆ ಗಂಭೀರ ಸ್ವರೂಪದ ಹಾನಿ ಸಂಭವಿಸಿದೆ. ನೂರಾರು ಮನೆಗಳಿಗೆ ನೀರು ನುಗ್ಗಿದೆ. ನೀರು ನುಗ್ಗಿದ ಹಾಗೂ ಹಾನಿಯಾದ ಮನೆಗಳಿಗೆ ಪ್ರಾಥಮಿಕವಾಗಿ 10 ಸಾವಿರ ರೂ. ಪರಿಹಾರ ನೀಡಲಾಗುವುದು. ನಂತರ ಮನೆ ಮರುನಿರ್ವಣಕ್ಕೆ ಸಮೀಕ್ಷೆ ನಡೆಸಿ ಹಂತ, ಹಂತವಾಗಿ ಸಹಾಯಧನ ಒದಗಿಸಲಾಗುವುದು ಎಂದು ಸೋಮವಾರ ಜಿಲ್ಲೆಗೆ ಭೇಟಿ ನೀಡಿದ ಕಂದಾಯ ಸಚಿವ ಆರ್.ಅಶೋಕ ಭರವಸೆ ನೀಡಿದ್ದಾರೆ. ಭರವಸೆ ಎಷ್ಟರ ಮಟ್ಟಿಗೆ ಈಡೇರಲಿದೆ ಎಂಬುದು ಜನರ ಅನುಮಾನ.

    ಮನೆಗೆ ಸಿಕ್ಕಿಲ್ಲ ಪೂರ್ಣ ಪರಿಹಾರ: 2020ರಲ್ಲಿ ಗಂಗಾವಳಿ, ಅಘನಾಶಿನಿ ಹಾಗೂ ಗುಂಡಬಾಳ ನದಿಗಳ ವ್ಯಾಪ್ತಿಯಲ್ಲಿ ಪ್ರವಾಹ ಬಂದಿತ್ತು. ನೀರು ನುಗ್ಗಿ ಹಾನಿಯಾದ 1547 ಮನೆಗಳಿಗೆ ಮೊದಲ ಹಂತದಲ್ಲಿ 10 ಸಾವಿರ ರೂ. ತುರ್ತು ಪರಿಹಾರ ನೀಡಲಾಗಿದೆ. ಅಲ್ಪ ಹಾನಿಯಾದ 969 ಮನೆಗಳಿಗೆ ತಲಾ 50 ಸಾವಿರ ರೂ., ಭಾಗಶಃ ಹಾನಿಯಾದ 157 ಮನೆಗಳ ರಿಪೇರಿಗೆ ತಲಾ 3 ಲಕ್ಷ ರೂ., ಸಂಪೂರ್ಣ ಹಾನಿಯಾದ 13 ಮನೆಗಳ ಮರುನಿರ್ವಣಕ್ಕೆ ತಲಾ 5 ಲಕ್ಷ ರೂ. ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಎಲ್ಲ ಸೇರಿ ಸುಮಾರು 10 ಕೋಟಿಗೂ ಅಧಿಕ ಸಹಾಯಧನವನ್ನು ಸರ್ಕಾರ ಭರಿಸಬೇಕಿತ್ತು. ಆದರೆ, ಇದುವರೆಗೆ 4.42 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ.

    ಬಂದಿದ್ದು ಬೆಳೆ ಪರಿಹಾರ ಮಾತ್ರ: ಕಳೆದ ವರ್ಷ ಅತಿವೃಷ್ಟಿಯಿಂದ 1086 ಹೆಕ್ಟೇರ್​ನಷ್ಟು ಕೃಷಿ ಬೆಳೆಗೆ 499 ಹೆಕ್ಟೇರ್​ನಷ್ಟು ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ ಎಂದು ಎಂದು ಜಿಲ್ಲಾಡಳಿತ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಿತ್ತು. ಎನ್​ಡಿಆರ್​ಎಫ್ ಮಾರ್ಗಸೂಚಿಯಂತೆ ಕೃಷಿ ಬೆಳೆಗೆ ಪ್ರತಿ ಹೆಕ್ಟೇರ್​ಗೆ 6800 ರೂ, ತೋಟಗಾರಿಕೆ ಬೆಳೆಗೆ ಪ್ರತಿ ಹೆಕ್ಟೇರ್​ಗೆ 18 ಸಾವಿರ ರೂ.(ಬಾಳೆ ಮುಂತಾದ ಅಲ್ಪಕಾಲಿಕ ಬೆಳೆಗೆ 13 ಸಾವಿರ ರೂ.)ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗಿದೆ. ಒಟ್ಟು 3176 ರೈತರಿಗೆ ಒಟ್ಟು 10.21 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಪರಿಹಾರ ತಂತ್ರಾಂಶ ಮಾಹಿತಿ ನೀಡುತ್ತದೆ.

    2019ರ ಸಹಾಯ ಧನವೇ ಬಂದಿಲ್ಲ:
    2019ರ ಭಾರಿ ನೆರೆಯ ಸಂದರ್ಭದಲ್ಲಿ ಜಿಲ್ಲೆಯ 380 ಮನೆಗಳಿಗೆ ತೀವ್ರ ಹಾನಿಯಾಗಿತ್ತು. ಆದರೆ, ಇದುವರೆಗೆ 293 ಮನೆಗಳಿಗೆ ಮಾತ್ರ ಪೂರ್ಣ ಪರಿಹಾರ ನೀಡಲಾಗಿದೆ. ಅಲ್ಪ ಹಾನಿಯಾದ 100 ಮನೆಗಳ ಪೈಕಿ 18 ಮನೆಗಳಿಗೆ ಮಾತ್ರ ಪೂರ್ಣ ಸಹಾಯಧನ ಮಂಜೂರಾಗಿದೆ. 75 ರಷ್ಟು ಅನಧಿಕೃತ ಮನೆಗಳಿಗೂ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದ ಸರ್ಕಾರ, ಮೊದಲ ಕಂತಿನ 1 ಲಕ್ಷ ರೂ. ನೀಡಿ ನಂತರ ಹಣ ಬಿಡುಗಡೆ ಮಾಡದೆ ಕೈಕೊಟ್ಟಿದೆ. ಸರ್ಕಾರ ನಂಬಿಕೊಂಡು ಫೌಂಡೇಶನ್ ಹಾಕಿದವರು ಸಂಕಷ್ಟಕ್ಕೊಳಗಾಗಿದ್ದಾರೆ.

    324 ಕೋಟಿ ಸರ್ಕಾರಿ ಆಸ್ತಿ ಹಾನಿ: ಕಳೆದ ಸಾರಿ ಭಾರಿ ಮಳೆಗೆ ಜಿಲ್ಲೆಯಲ್ಲಿ 324 ಕೋಟಿ ರೂ. ಸರ್ಕಾರಿ ಆಸ್ತಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ವರದಿ ಕಳಿಸಿತ್ತು. ಆದರೆ, ಈ ವರ್ಷ ಮಾರ್ಚ್ ಅಂತ್ಯದ ಹೊತ್ತಿಗೆ 21 ಕೋಟಿ 40 ಲಕ್ಷ ರೂ.ಗಳನ್ನು ಮಾತ್ರ ಸಿವಿಲ್ ಕಾಮಗಾರಿಗಳಿಗಾಗಿ ನೀಡಲಾಗಿದೆ.

    ಕೊಳೆ ರೋಗಕ್ಕೆ ಪರಿಹಾರವಿಲ್ಲ:
    ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಡಕೆ ಕೊಳೆಯಿಂದ ಆದ ಹಾನಿಗೂ ಸರ್ಕಾರ ಪರಿಹಾರ ನೀಡಿತ್ತು. ಇತ್ತೀಚಿನ 3 ವರ್ಷದಿಂದಲೂ ಅಡಕೆ ಹಾಗೂ ಕಾಳು ಮೆಣಸು ಬೆಳೆಗಾರರು ಕೊಳೆಯಿಂದ ಆದ ಹಾನಿಗೆ ಪರಿಹಾರ ಕೇಳುತ್ತಲೇ ಇದ್ದಾರೆ. ತೋಟಗಾರಿಕೆ ಇಲಾಖೆಯೂ ಹಾನಿಯ ಅಂದಾಜು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದೆ. ಆದರೆ, ಸರ್ಕಾರ ಪರಿಹಾರ ಮಾತ್ರ ಮರೀಚಿಕೆಯಾಗಿದೆ. 2020 ರ ಮಳೆಗಾಲದಲ್ಲಿ ಉಂಟಾದ ಕೊಳೆಯಿಂದ 11939 ಹೆಕ್ಟೇರ್ ಅಡಕೆ ಬೆಳೆ ಕೊಳೆಯಿಂದ 73.99 ಕೋಟಿ ರೂ. ಹಾನಿಯಾಗಿದೆ. 689 ಕಾಳು ಮೆಣಸಿನ ಕ್ಷೇತ್ರಕ್ಕೆ ಕೊಳೆ ಆವರಿಸಿ 2.75 ಕೋಟಿ. ರೂ. ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಿತ್ತು. ಸರ್ಕಾರದ ಮಾರ್ಗಸೂಚಿಯಂತೆ 4.87 ಕೋಟಿ ರೂ. ಪರಿಹಾರ ಮೊತ್ತ ಬೇಕಾಗುತ್ತದೆ ಎಂದು ವರದಿ ಸಲ್ಲಿಸಲಾಗಿತ್ತು.

    ಪ್ರಕೃತಿ ವಿಕೋಪದಿಂದ ಹಾನಿಯಾದವರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣದ ಕೊರತೆ ಇಲ್ಲ. ಪರಿಹಾರ ನೀಡುವಲ್ಲಿ ವ್ಯತ್ಯಯವಾದರೆ ಅಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು.
    ಆರ್.ಅಶೋಕ ಕಂದಾಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts