More

    ನೂತನ ಶಿಕ್ಷಣ ನೀತಿ ಜಾರಿಗೆ ರಾಜ್ಯ ಸರ್ಕಾರದಿಂದ ಅಗತ್ಯ ಸಿದ್ಧತೆ

    ಚಿಂತಾಮಣಿ: ಕೇಂದ್ರ ಸರ್ಕಾರದ ಕ್ರಾಂತಿಕಾರಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವಥ್‌ನಾರಾಯಣ್ ಹೇಳಿದರು.

    ನಗರದ ಕೆ.ಎಂ.ದೊಡ್ಡಪಿಳ್ಳಪ್ಪ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಇಂದಿನ ಹಾಗೂ ಭವಿಷ್ಯದ ಶೈಕ್ಷಣಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಹಲವು ದಶಕಗಳ ಬಳಿಕ ಕೇಂದ್ರ ಸರ್ಕಾರವು ರಾಷ್ಟ್ರೀಯ ಸಮಗ್ರ ಶಿಕ್ಷಣ ನೀತಿಯನ್ನು ರೂಪಿಸಿದೆ. ಈ ನಿಟ್ಟಿನಲ್ಲಿ ಸರ್ವರಿಗೂ ಗುಣಮಟ್ಟದ ಶಿಕ್ಷಣೆಕ್ಕೆ ಆದ್ಯತೆ ನೀಡಲಾಗುವುದು. ಇದು ಸುಸ್ಥಿರ, ಸಮಾನತೆ ಸಮಾಜವನ್ನು ನಿರ್ಮಿಸುವಲ್ಲಿ ಸಹಕಾರಿಯಾಗಲಿದೆ ಎಂದರು.

    ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಕರೊನಾ ಸೋಂಕು ನಿಯಂತ್ರಣದಲ್ಲಿ ಉತ್ತಮ ನಿರ್ವಹಣೆ, ಗಡಿ ಭಾಗಗಳಲ್ಲಿನ ಯುದ್ದದ ಉದ್ವಿಗ್ನ ಪರಿಸ್ಥಿತಿ, ಆರ್ಥಿಕ ನೀತಿ ಸೇರಿ ಆಡಳಿತಾತ್ಮಕ ವಿಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸಮರ್ಥ ಕೇಂದ್ರ ಸರ್ಕಾರದ ಮೇಲಿನ ಜನರ ವಿಶ್ವಾಸ ಹೆಚ್ಚಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಪೈಪೋಟಿಯಾಗಿ ಸಮಸ್ಯೆಗಳನ್ನು ಎದುರಿಸುತ್ತ ಭಾರತ ಪ್ರಬಲ ರಾಷ್ಟ್ರವಾಗಿ ರೂಪುಗೊಳ್ಳುವುದರತ್ತ ಸಾಗುತ್ತಿದೆ ಎಂದರು.

    ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅನರ್ಹರನ್ನು ಸೇರಿಸಲಾಗಿದೆ. ಈ ಮೂಲಕ ಕಳ್ಳ ಮತಗಳನ್ನು ಹಾಕಿಸಿಕೊಂಡು ಗೆಲ್ಲಲು ಕೆಲವರು ಮುಂದಾಗಿದ್ದು ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ಸಂಸದ ಎಸ್.ಮುನಿಸ್ವಾಮಿ ಎಚ್ಚರಿಸಿದರು.
    ಚುನಾವಣೆಯಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಯ ಗೆಲುವಿನಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬಹುದು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

    ಸಂಸದ ಪಿ.ಸಿ.ಮೋಹನ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಸತ್ಯನಾರಾಯಣ ಮಹೇಶ್, ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ.ಗೌಡ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts