More

    ನೂತನ ಬಸ್ ನಿಲ್ದಾಣಕ್ಕೆ ಪಂಪಾಪತಿ ಹೆಸರಿಡಿ- ಎಐಟಿಯುಸಿ ಸಭೆಯಲ್ಲಿ ಮುಖಂಡರ ಒತ್ತಾಯ  

    ದಾವಣಗೆರೆ: ನಗರದ ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಪಂಪಾಪತಿ ಅವರ ಹೆಸರಿಡಬೇಕು ಎಂದು ಕಾರ್ಮಿಕ ಮುಖಂಡ ಡಾ.ಸಿದ್ದನಗೌಡ ಪಾಟೀಲ್ ಒತ್ತಾಯಿಸಿದರು.
    ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾ ಸಮಿತಿಯಿಂದ ನಗರದ ಅಶೋಕ ರಸ್ತೆಯ ಪಂಪಾಪತಿ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಚಿಂತನ-ಮಂಥನ ಸಭೆಯಲ್ಲಿ ಮಾತನಾಡಿದರು.
    ನಗರದ ಕಲ್ಯಾಣ ಮಂಟಪಗಳು, ಬ್ಯಾಂಕ್‌ಗಳು, ಶಿಕ್ಷಣ ಸಂಸ್ಥೆಗಳು ಹಾಗೂ ರಸ್ತೆಗಳಿಗೆ ಹಲವಾರು ಉದ್ಯಮಿಗಳ ಹೆಸರನ್ನಿಡಲಾಗಿದೆ. ಬಸ್ ನಿಲ್ದಾಣಕ್ಕೆ ಪಂಪಾಪತಿ ಅವರ ಹೆಸರಿಟ್ಟರೆ ದುಡಿಯುವ ವರ್ಗದ ಜನರ ಇತಿಹಾಸ ನಾಡಿನ ಜನರಿಗೆ ತಿಳಿಯಲಿದೆ ಎಂದು ಹೇಳಿದರು.
    ಉದ್ಯಮ ಕೇಂದ್ರಿತ ನಗರದಲ್ಲಿ ಕಾರ್ಮಿಕರನ್ನು ಸಂಘಟಿಸಿದ ಪಂಪಾಪತಿ ಮೊದಲಾದ ನಾಯಕರು ಚಳವಳಿಗಳ ಮೂಲಕ ಕಾರ್ಮಿಕರಿಗೆ ಸೌಲಭ್ಯ ದೊರಕಿಸುವ ಜತೆಗೆ ಒಂದು ರಾಜಕೀಯ ಶಕ್ತಿ ನೀಡಿದರು. ನಗರಸಭೆ ಆಡಳಿತ ಚುಕ್ಕಾಣಿ ಹಿಡಿದು ನಿವೇಶನ ಹಾಗೂ ವಸತಿ ಕಲ್ಪಿಸಿ ನಗರಕ್ಕೆ ಹೊಸ ರೂಪ ನೀಡಿದರಲ್ಲದೆ ಶ್ರಮಜೀವಿಗಳು ಘನತೆಯಿಂದ ಬದುಕುವ ವಾತಾವರಣ ನಿರ್ಮಿಸಿದರು ಎಂದು ಸ್ಮರಿಸಿದರು.
    ಪತ್ರಕರ್ತ ಬಿ.ಎನ್.ಮಲ್ಲೇಶ್ ಮಾತನಾಡಿ, ನಗರದ ಯಾವುದೇ ಒಂದು ಬಡಾವಣೆ, ಪಾರ್ಕ್, ರಸ್ತೆಗಳಿಗೂ ಪಂಪಾಪತಿ ಅವರ ಹೆಸರನ್ನಿಡಲಾಗಿಲ್ಲ. ಅವರ ಹೋರಾಟದ ಫಲವಾಗಿ ನಿರ್ಮಾಣಗೊಂಡ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕಾದರೂ ಪಂಪಾಪತಿ ಅವರ ಹೆಸರನ್ನಿಡಬೇಕು. ಇದಕ್ಕೆ ಯಾರೂ ವಿರೋಧ ಮಾಡುವುದಿಲ್ಲ ಎಂದರು.
    ನಿವೃತ್ತ ಪ್ರಾಚಾರ್ಯ ಡಾ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಪಂಪಾಪತಿ ಅವರು ಜಾತಿವಾದಿ ಹಾಗೂ ವರ್ಗವಾದಿ ಕಸವನ್ನು ಗುಡಿಸಿದ ದಾವಣಗೆರೆ ನೆಲದಲ್ಲಿ ಕಮ್ಯುನಿಸ್ಟ್ ಬೇರುಗಳು ಆಳಕ್ಕೆ ಹೋಗಿದ್ದು ಇಂದಿಗೂ ಹೋರಾಟದ ಪಟ್ಟುಗಳು ಉಳಿದಿವೆ. ಮತ್ತೆ ಇಲ್ಲಿ ಕೆಂಬಾವುಟ ಹಾರಿಸಬೇಕು ಎಂದು ತಿಳಿಸಿದರು.
    ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ನವ ಕರ್ನಾಟಕ ಪ್ರಕಾಶನದ ಪ್ರೇಮ್‌ಚಂದ್, ಸತೀಶ್ ಅರವಿಂದ್, ಕಟ್ಟಡ ಕಾರ್ಮಿಕ ಸಂಘಟನೆ ಜಿಲ್ಲಾಧ್ಯಕ್ಷ ವಿ.ಲಕ್ಷ್ಮಣ್, ನರೇಗ ರಂಗನಾಥ್, ಗುಡಿಹಳ್ಳಿ ಹಾಲೇಶ್ ಇತರರು ಇದ್ದರು. ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಜಿ.ಉಮೇಶ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts