More

    ನೀರಾವರಿ ಯೋಜನೆಗಳು ರೈತರನ್ನು ತಲುಪಲಿ  – ಶಿವಮೂರ್ತಿ ಶ್ರೀ ಆಶಯ – ಬಾವಿಹಾಳ್ ಕರಿಯಮ್ಮ ದೇಗುಲ ಉದ್ಘಾಟನೆ 

    ದಾವಣಗೆರೆ : ನೀರಾವರಿ ಯೋಜನೆಗಳು ರೈತರಿಗೆ ಹೆಚ್ಚು ತಲುಪಬೇಕು. ಜಿಲ್ಲೆಯ ಇನ್ನೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆಗಬೇಕಿದೆ ಎಂದು ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶಿಸಿದರು.
    ತಾಲೂಕಿನ ಬಾವಿಹಾಳ್ ಗ್ರಾಮದ ಶ್ರೀ ಕರಿಯಮ್ಮ ದೇವಿ ದೇವಸ್ಥಾನದ ಉದ್ಘಾಟನೆ ಹಾಗು ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಭರಮಸಾಗರ ಹಾಗೂ ಜಗಳೂರು ಭಾಗದ ಕೆರೆಗಳಿಗೆ ನೀರಾವರಿ ಆಗದಿದ್ದರೆ ಅಲ್ಲಿನ ರೈತರು ಈ ವರ್ಷ ಬರಕ್ಕೆ ಉಳಿಯುತ್ತಿರಲಿಲ್ಲ. ಈಗಾಗಲೆ ಬರ ಆವರಿಸಿದ್ದು, ರೈತರ ಪಾಡು ಹೇಳತೀರದಾಗಿದೆ. ನೀರಾವರಿ ಯೋಜನೆಗೆ ಸರ್ಕಾರಗಳು ಆಸಕ್ತಿ ತೋರಿಸಿ ಸಹಕರಿಸಿವೆ ಎಂದು ಹೇಳಿದರು.
    ಯುವಕರು ಊರ ಮುಂದಿನ ಮದ್ಯದಂಗಡಿಗೆ ಹೋಗಿ ಹಾಳಾಗುವ ಬದಲು ಗ್ರಾಮದೊಳಗಿನ ಗುಡಿಗೆ ಹೋಗಿ ದೇವರನ್ನು ಆರಾಧಿಸುವುದು ಲೇಸು. ಮದ್ಯಪಾನದಿಂದ ಜೀವನ ಹಾಳಾಗಲಿದೆ ಎಂದು ತಿಳಿಸಿದರು.
    ಉಳ್ಳವರು ಶಿವಾಲಯವ ಮಾಡುವರು ಎಂಬ ವಚನದಲ್ಲಿ ಬಸವಣ್ಣನವರು ಟೀಕಿಸಿದ್ದು ದೇವಾಲಯಗಳನ್ನಲ್ಲ. ದೇಗುಲಕ್ಕೆ ಹೋಗುವಾಗ ಸ್ನಾನ ಮಾಡಿ, ಚಪ್ಪಲಿ ಹೊರಗಿರಿಸಿ ಹೋಗುತ್ತೇವೆ. ಅದೇ ಪವಿತ್ರತೆಯನ್ನು ನಮ್ಮ ಶರೀರ ಮತ್ತು ಮನಸ್ಸಿನಲ್ಲಿ ಕಾಪಾಡಿಕೊಳ್ಳ್ಳಬೇಕು ಎಂಬುದನ್ನು ಅವರು ಸೂಚ್ಯವಾಗಿ ಹೇಳಿದ್ದಾರೆ ಎಂದು ವಿವರಿಸಿದರು.
    ಹದಗೆಟ್ಟ ರಸ್ತೆ- ಮಾಜಿ ಶಾಸಕರಿಗೆ ತರಾಟೆ
    ಸಿರಿಗೆರೆ- ಬಾವಿಹಾಳ್ ಮಾರ್ಗದ ರಸ್ತೆ ಹದಗೆಟ್ಟಿದ್ದಕ್ಕೆ ಸಿಟ್ಟಿಗೆದ್ದ ಶ್ರೀಗಳು ಹಿಂದಿನ ಶಾಸಕ ಪ್ರೊ. ಲಿಂಗಣ್ಣ ಅವರನ್ನು ತರಾಟೆಗೆ ತಗೆದುಕೊಂಡರು. ನೀವು ಶಾಸಕರಾಗಿದ್ದಾಗ ಈ ರಸ್ತೆಯಲ್ಲಿ ಓಡಾದಿದ್ದೀರಾ? ಐದು ವರ್ಷ ಶಾಸಕರಾಗಿದ್ದರೂ ರಸ್ತೆ ದುರಸ್ತಿಯಾಗದಿರುವುದು ಸರಿಯಲ್ಲ. 1.85 ಕೋಟಿ ರೂ. ಮೀಸಲಿದ್ದರೂ ಕೆಲಸ ಮಾಡದಿದ್ದರೆ ಇಂಜಿನಿಯರ್ ವಿರುದ್ಧ ಏಕೆ ಕ್ರಮ ಕೈಗೊಳ್ಳಲಿಲ್ಲ? ಎಂದೂ ವೇದಿಕೆಯಲ್ಲಿ ಪ್ರಶ್ನಿಸಿದರು.
    ಸರ್ಕಾರದ ಅನುದಾನದಲ್ಲಿ ಮೂರು ತಿಂಗಳೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ನೂತನ ಶಾಸಕ ಬಸವಂತಪ್ಪ ಅವರಿಗೆ ಸ್ವಾಮೀಜಿ ತಾಕೀತು ಮಾಡಿದರು. ಗ್ರಾಮೀಣ ರಸ್ತೆಗಳು ಸುಧಾರಿಸಬೇಕಿದೆ. ಜನರಿಗೆ ಅಗತ್ಯ ರಸ್ತೆ, ಮೂಲ ಸೌಕರ್ಯ ಒದಗಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ಅವರಲ್ಲಿ ಸಾಮಾಜಿಕ ಕಳಕಳಿ ಹಾಗೂ ಬದ್ಧತೆ ಇರಬೇಕು ಎಂದೂ ಕಿವಿಮಾತು ಹೇಳಿದರು.
    ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ 5 ಕೋಟಿ ರೂ. ಅನುದಾನದಲ್ಲಿ ಬಾವಿಹಾಳ್ ಗ್ರಾಮದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಜನರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.
    ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಪ್ರೊ.ಎನ್.ಲಿಂಗಣ್ಣ, ಬಾವಿಹಾಳ್ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಆಶಾ ನಾಗರಾಜ್, ಸದಸ್ಯರಾದ ಕಲ್ಲೇಶಪ್ಪ, ಮೀನಾಕ್ಷಮ್ಮ, ಅಕ್ಕಮ್ಮ, ಮುಖಂಡರಾದ ನೀಲಕಂಠಪ್ಪ, ಮರುಳಸಿದ್ದಪ್ಪ, ರುದ್ರಪ್ಪ, ಬಸವರಾಜಪ್ಪ, ರತ್ನಮ್ಮ. ಮುಖಂಡ ಬಾವಿಹಾಳ್ ಕುಮಾರ್ ಇತರರಿದ್ದರು.

    ನಂಬಿಕೆ ಟೀಕೆ ಸಂವಿಧಾನಬಾಹಿರ
    ಇತ್ತೀಚೆಗೆ ಗಣಪತಿ ಪೂಜೆ ಮಾಡಬಾರದು ಎಂಬ ಗೊಂದಲ ಶುರುವಾಗಿದೆ. ಗಣಪತಿ ಪೂಜೆ ನಮ್ಮ ಸಂಸ್ಕೃತಿಯಲ್ಲ, ಕಾಲ್ಪನಿಕ ಎಂಬುದಾಗಿ ಕೆಲವರು ಹೇಳಿದ್ದಾರೆ. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ತಿಳಿಸಿದಂತೆ ಎಲ್ಲರಿಗೂ ತಾವು ನಂಬಿದ ದೇವರನ್ನು ಪೂಜಿಸುವ ಸ್ವಾತಂತ್ರೃ ಕಲ್ಪಿಸಲಾಗಿದೆ. ಈ ನಂಬಿಕೆಯನ್ನು ಟೀಕಿಸುವುದು ಸಂವಿಧಾನಬಾಹಿರ.
    ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts