More

    ನೀತಿ ರೂಪಿಸಿದರಷ್ಟೇ ಸಾಲದು, ಅನುದಾನ ಕೊಡಿ: ಪ್ರೊ.ಜಿ.ಹೇಮಂತಕುಮಾರ್

    ಮೈಸೂರು: ಶಿಕ್ಷಣ ನೀತಿಯನ್ನು ರೂಪಿಸಿದರಷ್ಟೇ ಸಾಲದು. ಅದಕ್ಕೆ ತಕ್ಕಂತೆ ಅನುದಾನ ಮತ್ತು ಮೂಲಸೌಕರ್ಯವನ್ನು ಕಲ್ಪಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಹೇಳಿದರು.


    ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆ ಮತ್ತು ಮೈಸೂರು ವಿವಿ ಹಳೇ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ವಿದ್ಯಾರ್ಥಿಗಳು, ಬೋಧಕರಿಗೆ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020ರ (ಎನ್‌ಇಪಿ)ಅನುಷ್ಠಾನಕ್ಕೆ ಸಂಬಂಧಿಸಿದ ಕಾರ್ಯಾಗಾರದಲ್ಲಿ ಮಾತನಾಡಿದರು.
    ನೂತನ ಶಿಕ್ಷಣ ನೀತಿ ಜಾರಿಗೆ ಹೆಚ್ಚಿನ ಅನುದಾನ ನೀಡಬೇಕು. ಇದರೊಂದಿಗೆ ಶಿಕ್ಷಣ, ಕಲಿಕಾ ಮತ್ತು ಬೋಧಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಆಗ ಮಾತ್ರ ಶಿಕ್ಷಣದ ಗುಣಮಟ್ಟವೂ ವೃದ್ಧಿಯಾಗಲಿದೆ ಎಂದರು.


    ನೂತನ ಶಿಕ್ಷಣ ನೀತಿಯಲ್ಲೇ ಜಿಡಿಪಿ ಶೇ.5ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕೆಂದು ಹೇಳಲಾಗಿದೆ. ಇದು ಕಾರ್ಯರೂಪಕ್ಕೆ ಬರಬೇಕು. ಇಷ್ಟು ಪ್ರಮಾಣದ ಅನುದಾನ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಬಳಕೆ ಆಗಬೇಕು. ಇಲ್ಲವಾದರೆ, ಹೊಸ ಶಿಕ್ಷಣ ನೀತಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತೊಡಕಾಗಲಿದೆ ಎಂದು ಅಭಿಪ್ರಾಯಿಸಿದರು.


    ಸ್ನಾತಕ ಪದವಿಯ ಮೂರು ವಿಷಯ ಸಂಯೋಜನೆಯನ್ನು (ಕಾಂಬಿನೇಷನ್) ಹೊಸ ಶಿಕ್ಷಣ ನೀತಿ ಪ್ರಕಾರ 2 ಐಚ್ಛಿಕ ವಿಷಯಗಳಿಗೆ ಇಳಿಕೆ ಮಾಡಲಾಗಿದೆ. ಇದು ಕಾರ್ಯಒತ್ತಡ ಮತ್ತು ದಾಖಲಾತಿ ಪ್ರಮಾಣ ಕಡಿಮೆ ಮಾಡುವ ಆತಂಕ ಸೃಷ್ಟಿಸಿದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕೋರ್ಸ್‌ನಲ್ಲಿ ಯಾವುದಾದರೊಂದು ವಿಷಯ ಆಯ್ಕೆ ಮಾಡಿಕೊಳ್ಳುವ ಬಹುಶಿಸ್ತೀಯ ಕೋರ್ಸ್ ಕೂಡ ಗೊಂದಲ ಉಂಟು ಮಾಡಿದೆ. ಈ ಬಗ್ಗೆ ಅರಿವು ಮೂಡಿಸಿ ವಿದ್ಯಾರ್ಥಿಗಳ ಮನೋಭಾವ ಪರಿವರ್ತನೆ ಮಾಡಬೇಕಿದೆ ಎಂದರು.


    ವೇದಿಕೆ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, ಹೊಸ ಶಿಕ್ಷಣ ನೀತಿಯನ್ನು ಅಳವಡಿಕೆ ಮಾಡಿಕೊಂಡು ಒಂದೂವರೆ ವರ್ಷವಾದರೂ ವಿದ್ಯಾರ್ಥಿಗಳಿಗೆ ಇನ್ನೂ ಅಂಕಪಟ್ಟಿ ನೀಡಿಲ್ಲ. ಒಂದು ವರ್ಷ ಕಲಿತು ಹೊರಹೋಗುವ ವಿದ್ಯಾರ್ಥಿಗಳು ಮುಂದೇನು ಮಾಡಬೇಕು ಎಂದು ಪ್ರಶ್ನಿಸಿದರು.


    ಬೋಧಕರು, ಲ್ಯಾಬ್, ಮೂಲಸೌಕರ್ಯವಿಲ್ಲದೆ ಶಿಕ್ಷಣ ನೀತಿಯನ್ನು ಹೇಗೆ ಜಾರಿ ಮಾಡಬೇಕು? ಅತಿಥಿ ಉಪನ್ಯಾಸಕರಿಂದ ಇದರ ಅನುಷ್ಠಾನ ಸಾಧ್ಯವೇ? ಇದನ್ನು ಕಾರ್ಯರೂಪಕ್ಕೆ ತರುವುದು ತಾಪತ್ರೆಯಾಗಿದೆ ಎಂದರು.


    ಅರೆ ಬರೆದ ಸ್ಥಿತಿಯಲ್ಲೇ ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗಿದೆ. ಈ ಕುರಿತು ಅನೇಕ ದೂರುಗಳಿವೆ. ನೀತಿಯಲ್ಲಿರುವ ಲೋಪದೋಷಗಳ ಕುರಿತು ಕುಲಪತಿಗಳು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಅನುದಾನ ಕಡಿತ ಸೇರಿದಂತೆ ಇನ್ನಿತರ ಸಮಸ್ಯೆಗಳು ಎದುರಾಗಲಿವೆ ಎಂಬ ಕಾರಣಕ್ಕೆ ಅವರೆಲ್ಲ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಹೇಳಿದರು.


    ಇದು ಉತ್ತಮ ಶಿಕ್ಷಣ ನೀತಿ. ಆದರೆ, ಪರಿಣಾಮಕಾರಿಯಾಗಿ ಜಾರಿ ಮಾಡದಿದ್ದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲ್ಲ. ಹೀಗಾಗಿ, ಈ ಕುರಿತು ಚರ್ಚಿಸಲು ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ವ್ಯಕ್ತವಾಗುವ ಸಾಧಕ-ಬಾಧಕ, ಅಭಿಪ್ರಾಯಗಳನ್ನು ಕ್ರೋಡೀಕರಣ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.


    ವಿಶ್ರಾಂತ ಕುಲಪತಿಗಳಾದ ಪ್ರೊ.ಎಸ್.ಎನ್.ಹೆಗ್ಡೆ, ಡಾ.ಎನ್.ಎಸ್.ರಾಮೇಗೌಡ, ಮೈವಿವಿ ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಪ್ರೊ.ಎಸ್.ಶ್ರೀಕಂಠಸ್ವಾಮಿ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts