More

    ನೈಜ ಫಲಾನುಭವಿಗಳಿಗೆ ಪರಿಹಾರ ಒದಗಿಸಿ

    ಹಾವೇರಿ: ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾದವರಿಗೆ ಬೆಳೆ ಹಾಗೂ ಮನೆ ಪರಿಹಾರ ವಿತರಣೆಯಲ್ಲಿ ಲೋಪ ಎಸಗಿದ ಅಧಿಕಾರಿಗಳನ್ನು ಗುರುತಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು. ಅಕ್ರಮ ನಡೆಸಿದವರನ್ನು ಜೈಲಿಗೆ ಕಳಿಸಬೇಕು ಎಂದು ಜಿಪಂ ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿದರು.

    ನಗರದ ಜಿಪಂ ಸಭಾಭವನದಲ್ಲಿ ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ ಜಿಪಂ ಸಾಮಾನ್ಯ ಸಭೆಯ ಆರಂಭದಲ್ಲಿಯೇ ಸದಸ್ಯರು ನೆರೆ ಪರಿಹಾರದ ಅಕ್ರಮದ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

    ಆಗ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಬೇಕಿದ್ದ ಕಂದಾಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿರಲಿಲ್ಲ. ಹೀಗಾಗಿ ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ, ಸಿಇಒ ರಮೇಶ ದೇಸಾಯಿ ಅವರು ಜಿಲ್ಲಾಧಿಕಾರಿ ಕೃಷ್ಣ ಭಾಜಪೈ ಅವರಿಗೆ ಕರೆ ಮಾಡಿ ಸಭೆಗೆ ಬರುವಂತೆ ಮನವಿ ಮಾಡಿದರು. ಅವರ ಬದಲಾಗಿ ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಸಭೆಗೆ ಬಂದರು. ಆನಂತರ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿ ಸೇರಿ ಜಿಲ್ಲೆಯಲ್ಲಿ ನಡೆದಿರುವ ಅಕ್ರಮಗಳನ್ನು ತಿಳಿಸಿ ಅಸಮಾಧಾನ ಹೊರಹಾಕಿದರು.

    ಸದಸ್ಯರಾದ ವಿರೂಪಾಕ್ಷಪ್ಪ ಕಡ್ಲಿ, ಎಸ್.ಕೆ. ಕರಿಯಣ್ಣನವರ, ಕೊಟ್ರೇಶಪ್ಪ ಬಸೇಗಣ್ಣಿ, ಶಿವರಾಜ ಹರಿಜನ, ಸಿದ್ದರಾಜ ಕಲಕೋಟಿ, ಶಿವರಾಜ ಅಮರಾಪುರ, ರಮೇಶ ದುಗ್ಗತ್ತಿ, ಏಕನಾಥ ಭಾನುವಳ್ಳಿ, ಮಂಗಳಗೌರಿ ಪೂಜಾರ, ಮಾಲತೇಶ ಸೊಪ್ಪಿನ ಮಾತನಾಡಿ, ಪರಿಹಾರ ವಿತರಣೆಯಲ್ಲಾದ ಲೋಪ, ತಹಸೀಲ್ದಾರ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ. ಆದರೆ, ನೈಜ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಪರಿಹಾರ ವಿತರಣೆಗೆ ಸೂಕ್ತ ಕ್ರಮ ವಹಿಸಿ ಎಂದು ಒತ್ತಾಯಿಸಿದರು.

    ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಪ್ರತಿಕ್ರಿಯಿಸಿ, ಅತಿವೃಷ್ಟಿ ಹಾಗೂ ನೆರೆಯಿಂದ ಜಿಲ್ಲೆಯಲ್ಲಾದ ಬೆಳೆ, ಮನೆ ಹಾನಿ ಪರಿಹಾರ ಹಣ ಒದಗಿಸಲು ಸರ್ಕಾರದ ಮಾರ್ಗಸೂಚಿಯಂತೆ ಅಧಿಕಾರಿಗಳ ತಂಡ ರಚಿಸಿ ಸರ್ವೆ ಮಾಡಿಸಲಾಗಿದೆ. ದೃಢೀಕರಣದೊಂದಿಗೆ ಸಂತ್ರಸ್ತರ ವಿವರವನ್ನು ಸಾಫ್ಟ್​ವೇರ್ ಮೂಲಕ ಅಪ್​ಲೋಡ್ ಮಾಡಲು ಸೂಚಿಸಲಾಗಿತ್ತು. ಇದಕ್ಕಾಗಿ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ತಹಸೀಲ್ದಾರರನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿತ್ತು. ಮಾಹಿತಿ ಗಣಕೀಕರಣಕ್ಕೆ ಗ್ರಾಮ ಲೆಕ್ಕಾಧಿಕಾರಿಗಳು, ತಹಸೀಲ್ದಾರರಿಗೆ ಲಾಗಿನ್ ಪಾಸ್​ವರ್ಡ್​ಗಳನ್ನು ನೀಡಲಾಗಿತ್ತು. ಬೆಳೆ ಹಾನಿ ಫಲಾನುಭವಿಗಳ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಹಾಗೂ ಬೆಳೆ ಪಹಣಿ ದಾಖಲೆಗಳನ್ನು ಪರಿಶೀಲಿಸಿ ದಾಖಲೆಗಳನ್ನು ದೃಢೀಕರಿಸಿ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಹಂತದಲ್ಲಿ ಒಂದು ಆಧಾರ್ ಕಾರ್ಡ್​ಗೆ ಕೇವಲ 4.38 ಎಕರೆ ಜಮೀನಿಗೆ ಪರಿಹಾರ ಪಡೆಯಲು ಅವಕಾಶವಿತ್ತು. ಆದರೆ, ಕೆಲವು ರೈತರದು 10ರಿಂದ 15 ಎಕರೆಗೂ ಹೆಚ್ಚು ಬೆಳೆ ಹಾನಿಯಾದ ಕಾರಣ ಸಾಫ್ಟ್​ವೇರ್​ನಲ್ಲಿ ನಾಲ್ಕಕ್ಕಿಂತ ಹೆಚ್ಚು ಎಕರೆ ಒಬ್ಬ ಫಲಾನುಭವಿಗಳ ಹೆಸರಿಗೆ ಸ್ವೀಕರಿಸದ ಕಾರಣ ಇದನ್ನೇ ಬಳಸಿಕೊಂಡು ಬೇರೆಬೇರೆ ಆಧಾರ್ ಕಾರ್ಡ್​ಗಳ ಹೆಸರಿಗೆ ನೋಂದಾಯಿಸಿ ಕೆಲವರು ತಪ್ಪು ಎಸಗಿದ್ದಾರೆ. ಇಂತಹ 18 ಪ್ರಕರಣಗಳನ್ನು ಪತ್ತೆ ಹಚ್ಚಿ ಅಮಾನತು ಮಾಡಲಾಗಿದೆ ಎಂದರು.

    ಪ್ರತಿ ಖಾತೆಯನ್ನೂ ಪರಿಶೀಲಿಸಲಾಗುತ್ತಿದೆ. ಪರಿಹಾರ ವಿತರಣೆಯಲ್ಲಿ ಮೇಲ್ನೋಟಕ್ಕೆ ತಪ್ಪು ಕಂಡುಬಂದ ಪ್ರಕರಣಗಳ ತನಿಖೆಯನ್ನು ಪೊಲೀಸ್ ಇಲಾಖೆಗೆ ನೀಡಲಾಗಿದೆ. ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹೂಡಲಾಗಿದೆ. ತನಿಖೆಯಿಂದ ತಪ್ಪಿತಸ್ಥರು ಹೊರಬರುತ್ತಾರೆ. ಅಂಥವರ ಮೇಲೆ ಕಾನೂನಿನಡಿ ಕ್ರಮ ಕೈಗೊಳ್ಳಲಾಗುತ್ತದೆ. ಮನೆ, ಬೆಳೆ ಹಾನಿ ಪರಿಹಾರ ಸಂಬಂಧಿಸಿದ ದೂರುಗಳ ಸ್ವೀಕಾರಕ್ಕಾಗಿ ತಾಲೂಕುವಾರು ಸಭೆ ನಡೆಸಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಲಾಗಿದೆ. ಅವುಗಳ ಆಧಾರದಡಿ ಅಧಿಕಾರಿಗಳ ತಂಡ ರಚಿಸಿ ಸ್ಥಳ ತನಿಖೆ ನಡೆಸಲಾಗುತ್ತದೆ. ಸಾಧ್ಯವಾದರೆ ನಾನೂ ಸ್ಥಳಗಳಿಗೆ ಹೋಗಿ ಪರಿಶೀಲಿಸುತ್ತೇನೆ. ತಪ್ಪಿಸ್ಥತರಿಗೆ ಶಿಕ್ಷೆಯಾಗಲಿದೆ. ಸಮೀಕ್ಷೆಯಿಂದ ಕೈಬಿಟ್ಟು ಹೋದ ಹಾಗೂ ಪರಿಹಾರದಿಂದ ವಂಚಿತರಾದವರ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ತಿಳಿಸಿದರು.

    ಮುಖ್ಯಮಂತ್ರಿ ಜತೆಗೆ ರ್ಚಚಿಸುವೆ

    ಮನೆ ಪರಿಹಾರ ವಿತರಣೆಯಲ್ಲಿ ಬಡವರಿಗೆ ಅನ್ಯಾಯವಾಗಿದೆ. ಪೂರ್ಣ ಮನೆ ಬಿದ್ದರೂ ಸಿ ವರ್ಗಕ್ಕೆ ಸೇರಿಸಲಾಗಿದೆ. ಎ, ಬಿ ಹಾಗೂ ಸಿ ಎಂದು ವರ್ಗೀಕರಿಸುವ ಕ್ರಮದಲ್ಲಿಯೇ ಲೋಪವಾಗಿದೆ. ಅಸಹಾಯಕರು, ಬಡವರ ಮನೆಗಳು ಪೂರ್ಣವಾಗಿ ಬಿದ್ದರೂ ಆ ಫಲಾನುಭವಿಗಳ ಮನೆಗಳನ್ನು ಸಿ ವರ್ಗಕ್ಕೆ ಸೇರ್ಪಡೆಗೊಳಿಸಿ ವಂಚಿಸಲಾಗಿದೆ. ಇಂತಹ ಲೋಪಗಳನ್ನು ಸರಿಪಡಿಸಲು ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ. ಎಲ್ಲರಿಗೂ 5 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ನಾನು ಮುಖ್ಯಮಂತ್ರಿಗಳೊಂದಿಗೆ ರ್ಚಚಿಸುತ್ತೇನೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts