More

    ನಿವೇಶನ ಪ್ರಕರಣಕ್ಕೆ ಶೀಘ್ರ ಮುಕ್ತಿ

    ಶಿವಮೊಗ್ಗ: ಮಲ್ಲಿಗೇನಹಳ್ಳಿ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕೈಬಿಡುವಂತೆ ಲೋಕಾಯುಕ್ತ ಬಳಿ ಮನವಿ ಮಾಡಿದ್ದು, ಶೀಘ್ರವೇ ಪ್ರಕರಣ ಬಗೆಹರಿಯುವ ವಿಶ್ವಾಸವಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ತಿಳಿಸಿದರು.

    ಮಂಗಳವಾರ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಜಪೇಯಿ ಬಡಾವಣೆ ಸಮಸ್ಯೆ ಬಗೆಹರಿಸುವ ಸಂಬಂಧ ಅಡ್ವೋಕೇಟ್ ಜನರಲ್​ಅವರೊಂದಿಗೆ ಮಾತನಾಡಿದ್ದು, ಅವರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

    ಬಡಾವಣೆಯಲ್ಲಿ ನಿವೇಶನ ಹಂಚಿಕೆ ಸಂಬಂಧ ಒಬ್ಬರು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ನಿವೇಶನ ಹಂಚಿಕೆಯಲ್ಲಿ ಯಾವುದೆ ಅಕ್ರಮವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಅನೇಕರಿಗೆ ಇಲ್ಲಿ ಮನೆ ನಿರ್ವಿುಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರಕರಣ ಕೈಬಿಡುವ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಹೇಳಿದರು.

    ತಿಂಗಳಲ್ಲಿ ಬದಲಾವಣೆ: ಎರಡು ದಿನಗಳ ಶಿವಮೊಗ್ಗ ಭೇಟಿ ಸಂದರ್ಭ ಹಲವು ಕಾಮಗಾರಿ ವೀಕ್ಷಿಸಿದ್ದೇನೆ. ಇನ್ನೊಂದು ತಿಂಗಳಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ಬದಲಾವಣೆ ಕಾಣಬೇಕು. ಮುಂದಿನ ಭೇಟಿ ಸಂದರ್ಭ ಮತ್ತೊಮ್ಮೆ ಎಲ್ಲ ಕಡೆಯೂ ಪರಿಶೀಲಿಸುತ್ತೇನೆ. ಗುಣಮಟ್ಟದ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವರು ತಿಳಿಸಿದರು.

    ಪುರಲೆಯಲ್ಲಿ ನಿರ್ವಿುಸುತ್ತಿರುವ ಯುಜಿಡಿ ಟ್ರೀಟ್​ವೆುಂಟ್ ಪ್ಲಾಂಟ್ ಕೆಲಸ ಶೇ.80ರಷ್ಟು ಮುಗಿದಿದೆ. ಉಪಕರಣ ಜೋಡಣೆ ಮಾತ್ರ ಬಾಕಿಯಿದೆ. ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ನೆಹರು ಕ್ರೀಡಾಂಗಣದ ಹೊರ ಭಾಗದಲ್ಲಿ ಮೊದಲ ಮಹಡಿಯಲ್ಲಿ ಹಾಕಿ ಅಂಕಣ ನಿರ್ವಿುಸಲು ಮುಂದಾಗಿರುವುದಕ್ಕೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಜಿಲ್ಲಾ ಸಚಿವರು ಹಾಗೂ ಲೋಕಸಭಾ ಸದಸ್ಯರು ರ್ಚಚಿಸಿ ತೀರ್ವನಿಸುತ್ತಾರೆ ಎಂದರು.

    ಎಲ್ಲೆಲ್ಲಿ, ಏನೇನು? ಕಾಮಗಾರಿ: ಬೊಮ್ಮನಕಟ್ಟೆ ಕೆರೆಯನ್ನು ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಲಕ್ಷ್ಮೀ ಟಾಕೀಸ್ ಬಳಿ ರಸ್ತೆಯಲ್ಲಿ ನೀರು ನಿಲ್ಲುವುದನ್ನು ತಪ್ಪಿಸಲು ಕಾಂಕ್ರಿಟ್ ಚರಂಡಿ ನಿರ್ವಿುಸಲು ಸೂಚಿಸಲಾಗಿದೆ. ಸ್ವಾಮಿ ವಿವೇಕಾನಂದ ಬಡಾವಣೆಯ ಕ್ರೀಡಾ ಸಂಕೀರ್ಣದಲ್ಲಿ ತೆರೆದ ಜಿಮ್ೆ ಮೇಲ್ಛಾವಣಿ ನಿರ್ವಿುಸಲು ಸ್ಥಳೀಯರು ಮನವಿ ಮಾಡಿದ್ದಾರೆ. ಇದಕ್ಕೆ ಪ್ರಸಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಸಚಿವರು ತಿಳಿಸಿದರು.

    ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts