More

    ನಿರ್ಭೀತ ಮತದಾನ ಪ್ರಜಾಪ್ರಭುತ್ವಕ್ಕೆ ಬಲ – ನ್ಯಾಯಾಧೀಶೆ ರಾಜೇಶ್ವರಿ ಹೇಳಿಕೆ -ಮತದಾನ ಜಾಗೃತಿ ಕಾರ್ಯಕ್ರಮ

    ದಾವಣಗೆರೆ: ನಿರ್ಭೀತಿಯಿಂದ ಮತ ಚಲಾಯಿಸುವ ಮೂಲಕ, ದೇಶದ ಪ್ರಜಾಪ್ರಭುತ್ವದ ಮೌಲ್ಯವನ್ನು ವೃದ್ಧಿಸಬೇಕಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ ಹೇಳಿದರು.
    ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ವಕೀಲರ ಸಂಘದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಪ್ರತಿಯೊಬ್ಬ ಭಾರತೀಯನೂ ಕೂಡ ತಪ್ಪದೇ ಮತದಾನ ಮಾಡಬೇಕಿದೆ. ನ್ಯಾಯಸಮ್ಮತವಾದ ಚುನಾವಣೆಗಳು ಪ್ರಜೆಗಳಲ್ಲಿ ನೆಮ್ಮದಿಯ ನಾಳೆಗಳನ್ನು ತರಬಲ್ಲದು ಎಂದು ಆಶಯ ವ್ಯಕ್ತಪಡಿಸಿದರು. ನಂತರ ಎಲ್ಲ ವಕೀಲರಿಗೆ ಮತದಾನ ಜಾಗೃತಿ ಪ್ರತಿಜ್ಞಾ ವಿಧಿ ಬೋಧಿಸಿದರು.
    ಹಿರಿಯ ಸಿವಿಲ್ ನ್ಯಾಯಾಧೀಶ ಶಿವಪ್ಪ ಜಿ.ಸಲಗರೆ ಮಾತನಾಡಿ, ದೇಶದ ಸುಭದ್ರತೆ, ಸುರಕ್ಷತೆಗೆ ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡುವ ಮತದಾನದ ಹಕ್ಕನ್ನು ಪ್ರತಿಯೊಬ್ಬರೂ ಸಮರ್ಥವಾಗಿ ಚಲಾಯಿಸಬೇಕು. ನಮ್ಮ ಆಯ್ಕೆ ತಪ್ಪಾದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಅರ್ಥ ಕಳೆದುಕೊಳ್ಳುತ್ತದೆ ಎಂದರು.
    ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ್ ಮಾತನಾಡಿ, ಮತದಾನ ಪ್ರಕ್ರಿಯೆ ಒಂದು ದಿನಕ್ಕೆ ಸೀಮಿತವಾದುದಲ್ಲ. ಪ್ರತಿ ಭಾರತೀಯನೂ ಜಾತಿ-ಮತ, ಧರ್ಮಗಳ ಬೇಧವಿಲ್ಲದೆ, ಬಡವ-ಬಲ್ಲಿದನೆಂಬ ಅಂತರಗಳಿಲ್ಲದೇ ಚಲಾಯಿಸಬಹುದಾದ ಅಮೂಲ್ಯ ಹಕ್ಕನ್ನು ಭಾರತ ಸಂವಿಧಾನ ನೀಡಿದೆ ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್ ಮಾತನಾಡಿ, ಇತ್ತೀಚಿನ ಚುನಾವಣೆಗಳಲ್ಲಿ ಬಹುಸಂಖ್ಯಾತರು ಹಕ್ಕನ್ನು ಚಲಾಯಿಸುತ್ತಿಲ್ಲ. ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನ ಹೊಂದಿರುವ ಭಾರತದ ಪ್ರಜಾಪ್ರಭುತ್ವ ಮುಂದಿನ ದಿನಗಳಲ್ಲಿ ಅರ್ಥವನ್ನು ಕಳೆದುಕೊಳ್ಳಬಹುದು. ಕಡ್ಡಾಯ ಮತ ಚಲಾಯಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕಿದೆ ಎಂದರು.
    ಕಾರ್ಯಕ್ರಮದಲ್ಲಿ ಸ್ಥಳೀಯ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ವಕೀಲರು ಮತ್ತು ನ್ಯಾಯಾಲಯಗಳ ಮುಖ್ಯ ಆಡಳಿತಾಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು. ಹಿರಿಯ ವಕೀಲ ಎಂ.ಎನ್.ಆಂಜನೇಯ ಪ್ರಾರ್ಥಿಸಿದರು. ವಕೀಲರ ಸಂಘದ ಸಹಕಾರ್ಯದರ್ಶಿ ಎ.ಎಸ್.ಮಂಜುನಾಥ್ ಸ್ವಾಗತಿಸಿದರು. ಕಾರ್ಯದರ್ಶಿ ಎಸ್.ಬಸವರಾಜ ಕಾರ್ಯಕ್ರಮ ನಿರೂಪಿಸಿದರೆ, ಕಾರ್ಯಕಾರಿ ಸಮಿತಿ ಸದಸ್ಯ ವಾಗೀಶ್ ಕಟ್ಟಿಗೆಹಳ್ಳಿ ಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts