More

    ನಿರಾಶ್ರಿತರಿಗೆ ಶಾಲೆಯಲ್ಲಿ ಆಶ್ರಯ

    ಮೂಡಿಗೆರೆ: ತಾಲೂಕಿನಲ್ಲಿ ವಾಯು-ವರುಣನ ಆರ್ಭಟ ಮಂಗಳವಾರವೂ ಮುಂದುವರಿದು ಅಲ್ಲಲ್ಲಿ ಭೂ ಕುಸಿತವಾಗಿದ್ದರೆ, ಮನೆಗಳು ನೆಲಸಮವಾಗಿ ಕುಟುಂಬಗಳು ಕಂಗಾಲಾಗಿವೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಂಬಗಳು ಮುರಿದುಬಿದ್ದು ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಕಾಫಿ ತೋಟಗಳಲ್ಲಿ ಕೆಲಸಕ್ಕೆ ಅಡ್ಡಿಯಾಗಿದೆ.

    ಹೆಸಗಲ್ ಗ್ರಾಮದ ಸಣ್ಣಯ್ಯ, ಕೋಳೂರಿನ ನೇತ್ರಾ, ಚಿನ್ನಿಗಾ ಕೆಂಚಯ್ಯ, ನಾಗಲಾಪುರದ ರತ್ನಮ್ಮ, ಮೇಕನಗದ್ದೆಯ ಜಾನಕಮ್ಮ, ಅಂಗಡಿ ಗ್ರಾಮದ ಸಿದ್ದಮ್ಮ, ಹೆಸಗೋಡಿನ ಕರಿಯ, ಬೊಮ್ಮನಹಳ್ಳಿಯ ಗಿರೀಶ್ ಸಣ್ಣಯ್ಯ ಅವರ ಮನೆಗಳು ನೆಲಸಮವಾಗಿದ್ದು ನಿರಾಶ್ರಿತ ಕುಟುಂಬಗಳು ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆದಿವೆ. ಇನ್ನೂ ಕೆಲ ಕುಟುಂಬಗಳು ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿವೆ.

    ಕಮ್ಮರಗೋಡಿ ಎಸ್ಟೇಟ್, ಕಚ್ಚೇಹಳ್ಳಿ, ಚಂದ್ರಾಪುರ, ಕಣಚೂರು, ಮಾಕೋನಹಳ್ಳಿ ಕಾಫಿ ತೋಟಗಳಲ್ಲಿ ಮರಗಳು ಬಿದ್ದು ಗಿಡಗಳು ನೆಲಕಚ್ಚಿದ್ದರೆ, ಉದುಸೆ, ದಿಣ್ಣೆಕೆರೆ, ಕನ್ನೇಹಳ್ಳಿ, ಮನಾಲ್, ಅಂತೂರು, ಲೋಕವಳ್ಳಿ, ತತ್ಕೋಳದಲ್ಲಿ ಬಾಳೆತೋಟವನ್ನು ಗಾಳಿ ಆಪೋಶನ ತೆಗೆದುಕೊಂಡಿದೆ.

    ನಾಟಿಗೆ ಸಿದ್ಧವಾಗಿದ್ದ ಭತ್ತದ ಗದ್ದೆಗಳು ಜಲಾವೃತವಾಗಿ ಸಸಿಗಳು ನೀರುಪಾಲಾಗಿವೆ. ನದಿ ಸಾಲಿನಲ್ಲಿರುವ ಉಗ್ಗೆಹಳ್ಳಿ, ಅಣಜೂರು, ಬೆಟ್ಟದಮನೆ, ಚಕ್ಕುಡುಗೆಯ ಭತ್ತದ ಗದ್ದೆಗಳಲ್ಲಿ ಮರಳು ಶೇಖರಣೆಗೊಂಡು ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ.

    ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಜನರೇಟರ್​ಗೂ ಡೀಸೆಲ್ ಇಲ್ಲದೆ ಮೊಬೈಲ್ ಟವರ್​ಗಳ ಕಾರ್ಯ ಸ್ಥಗಿತಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts