More

    ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತ

    ಚಿಂಚೋಳಿ (ಕಲಬುರಗಿ)
    ತಾಲೂಕಿನಲ್ಲಿ ಸೋಮವಾರ ತಡರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸಾಮಾನ್ಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

    ತಗ್ಗು ಪ್ರದೇಶದ ಜಮೀನುಗಳಲ್ಲಿ ನೀರು ನಿಂತಿದ್ದು, ಕಬ್ಬು, ಸೋಯಾ, ಹೆಸರು, ಉದ್ದು, ತೊಗರಿ ಇತ್ಯಾದಿ ಬೆಳೆಗಳು ಬಹುತೇಕ ಜಲಾವೃತಗೊಂಡಿವೆ. ಅವಳಿ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಸಿಸಿ ರಸ್ತೆಗಳಿಲ್ಲದೆ ಕೆಸರು ಗದ್ದೆಯಾಗಿ ಮಾರ್ಪಟ್ಟಿವೆ. ಚರಂಡಿಗಳು ತುಂಬಿ ರಸ್ತೆಯುದ್ದಕ್ಕೂ ನೀರು ಆವರಿಸಿಕೊಂಡಿದೆ. ಚರಂಡಿ ಸ್ವಚ್ಛತೆಗೆ ಪುರಸಭೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

    ಚಿಂಚೋಳಿ ವಲಯದಲ್ಲಿ 45.8 ಮಿಮೀ, ಕುಂಚಾವರಂ 60, ಚಿಮ್ಮನಚೋಡ 30.2, ಐನಾಪುರ 15.2, ಸುಲೇಪೇಟ ವಲಯದಲ್ಲಿ 44 ಮಿಮೀ ಮಳೆಯಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ವೀರಶೆಟ್ಟಿ ರಾಠೋಡ್ ತಿಳಿಸಿದ್ದಾರೆ.

    ಸುಲೇಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ಜಟ್ಟೂರ ಗ್ರಾಮದ ಕಾಗಿಣಾ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.

    ಸೂರು ಕಳೆದುಕೊಂಡವರಿಗೆ ತಲಾ ರು.10 ಸಾವಿರ ಪರಿಹಾರ
    ಒಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ತಾಲೂಕಿನಲ್ಲಿ 185 ಮನೆ ಕುಸಿದಿದ್ದು, ಸಂತ್ರಸ್ತರ ಖಾತೆಗೆ ಆರ್ಟಿಜಿಎಸ್ ಮೂಲಕ ತಲಾ 10 ಸಾವಿರ ರೂ. ಜಮೆ ಮಾಡಲಾಗಿದೆ. ಇದೀಗ ಬೆಳೆ ಹಾನಿ ಕುರಿತು ಕೃಷಿ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸವೇ ನಡೆದಿದ್ದು, ಪ್ರತಿ ರೈತ ಸಂಪರ್ಕದಡಿ ವಲಯವಾರು ಪ್ರತ್ಯೇಕ ವರದಿ ತಯಾರಿಸಿ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದು ತಹಸೀಲ್ದಾರ್ ಅಂಜುಮ್ ತಬಸ್ಸುಮ್ ತಿಳಿಸಿದರು. ಇನ್ನು ಸೋಮವಾರ, ಮಂಗಳವಾರದ ಮಳೆಯಿಂದಾಗಿ ಮಿರಿಯಾಣದ ಮೋನಚಾರಿ ಅವರ ಮನೆ ಬಿದ್ದಿದ್ದು, ಗ್ರೇಡ್-2 ತಹಸೀಲ್ದಾರ್ ವೆಂಕಟೇಶ ದುಗ್ಗನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರವಿಕುಮಾರ ಚಿಟ್ಟಾ, ಪಿಡಿಒ ಗುರುನಾಥ ರಾಠೋಡ್, ಶಿವಾಜಿ ರಾಠೋಡ್, ಗ್ರಾಪಂ ಸದಸ್ಯ ಪಾಂಡು ಗೊಲ್ಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts