More

    ನಿರಂತರವಾಗಿ ತಾಲೂಕು ಅಭಿವೃದ್ಧಿಗೆ ಕ್ರಮ

    ಕೆ.ಆರ್.ನಗರ: ಯಾವುದೇ ಸಮಾಜಕ್ಕೂ ತಾರತಮ್ಯ ಮಾಡದೆ ನಿರಂತರವಾಗಿ ತಾಲೂಕಿನಲ್ಲಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಆದರೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.


    ತಾಲೂಕಿನ ಅಡುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಳಿಗೆಕೆರೆ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.


    ಸರ್ಕಾರದಲ್ಲಿ ಹಣ ಇಲ್ಲದಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತಂದು ಅಭಿವೃದ್ಧಿ ಮಾಡುತ್ತಲೇ ಇದ್ದರೂ ಏನು ಮಾಡಿಲ್ಲ ಎಂದು ಆರೋಪಿಸುತ್ತಿದ್ದಾರೆ. ಈಗಾಗಲೇ ಗ್ರಾಮದ ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವ ಜತೆಗೆ ನಾಲೆಗೆ ಲೈನಿಂಗ್ ಮಾಡಲು ಭೂಮಿಪೂಜೆ ನೆರವೇರಿಸಿದ್ದೇನೆ. ದೇವಸ್ಥಾನಗಳು, ಸಮುದಾಯ ಭವನಕ್ಕೆ ಅನುದಾನ ಸೇರಿದಂತೆ ಗ್ರಾಮದ ಸಮಗ್ರ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಿದ್ದೇನೆ ಎಂದು ತಿಳಿಸಿದರು.


    ಅಡಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ನದಿಯಿಂದ ಕುಡಿಯುವ ನೀರು ಸರಬರಾಜಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಜಲ ಜೀವನ್ ಮೀಷನ್ ಯೋಜನೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಮನೆ ಮನೆಗೆ ಕೊಳಾಯಿ ಹಾಗೂ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ. ಅರ್ಹರಿಗೆ ವಸತಿ ಯೋಜನೆಯಡಿ ಮನೆ ನೀಡುತ್ತೇನೆ ಎಂದು ಭರವಸೆ ನೀಡಿದರು.

    ಅಕ್ರಮ ಮದ್ಯ ತಡೆಗೆ ಆಗ್ರಹ: ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದಾಗಿ ಮದ್ಯ ವ್ಯಸನಿಗಳ ಹಾವಳಿ ಹೆಚ್ಚಾಗಿ ಕುಟುಂಬಗಳಲ್ಲಿ ಕಲಹ ನಡೆಯುತ್ತಿದೆ. ಈ ಬಗ್ಗೆ ಅಬಕಾರಿ ಇಲಾಖೆಗೆ ಎಷ್ಟೇ ಹೇಳಿದರು ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದರು.


    ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅಕ್ರಮ ಮಾರಾಟ ನಿಲ್ಲಿಸಬೇಕು. ಮತ್ತೊಮ್ಮೆ ಗ್ರಾಮಕ್ಕೆ ಭೇಟಿ ನೀಡಿದಾಗ ದೂರು ಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕರು ಎಚ್ಚರಿಕೆ ನೀಡಿದರು.


    ನಂತರ ದೊಡ್ಡಕೊಪ್ಪಲು, ಕಾರ್ಗಳ್ಳಿಕೊಪ್ಪಲು, ಅಡಗೂರು ಹಾಗೂ ಮಾರಗೌಡನಹಳ್ಳಿ ಗ್ರಾಮಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಮನಸ್ವಿನಿ, ವೃದ್ಧಾಪ್ಯ ವೇತನ, ಮಾಸಾಶನ ಮಂಜೂರಾತಿ ಪತ್ರ ವಿತರಿಸಲಾಯಿತು. ಗಳಿಗೆಕೆರೆ ಗ್ರಾಮದಲ್ಲಿ ಹಾಗೂ ಅಡಗೂರು ಬಡಾವಣೆಯ ಪರಿಶಿಷ್ಟ ಸಮುದಾಯದ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದರು.


    ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ತಾಪಂ ಮಾಜಿ ಸದಸ್ಯ ನಾಗಣ್ಣ, ಗ್ರಾಪಂ ಅಧ್ಯಕ್ಷೆ ಶಿವರಾಜಮ್ಮ, ಉಪಾಧ್ಯಕ್ಷ ರಾಜನಾಯಕ, ಸದಸ್ಯರಾದ ಉಮೇಶ್ ಬಾಬು, ಕುಮಾರಿ, ಸಣ್ಣಸ್ವಾಮಿ, ಮಾಜಿ ಸದಸ್ಯರಾದ ಸತೀಶ್, ಕೃಷ್ಣನಾಯಕ, ಮುಖಂಡರಾದ ನಟರಾಜ್, ಇಂದ್ರೇಶ, ಕುಮಾರಶೆಟ್ಟಿ, ತಹಸೀಲ್ದಾರ್ ಎಸ್.ಸಂತೋಷ್, ಇಒ ಎಚ್.ಕೆ.ಸತೀಶ್, ಹಾರಂಗಿ ವಿಭಾಗದ ಇಇ ಈರಣ್ಣನಾಯಕ, ಎಇಇ ಗರುರಾಜ್, ಜಿಪಂ ಎಇಇ ವಿನುತ್, ಪಿಡಬ್ಲ್ಯೂಡಿ ಎಇಇ ವಿಜಯಕುಮಾರ್, ಎಇ ಸಿದ್ದೇಶ್ವರ ಪ್ರಸಾದ್, ಪಶುವೈದ್ಯಧಾಕಾರಿ ಡಾ.ಮಮಜುನಾಥ್, ಟಿಎಸ್‌ಡಬ್ಲ್ಯೂ ಎಸ್.ಎಂ.ಅಶೋಕ್‌ಕುಮಾರ್, ವೃತ್ತನಿರೀಕ್ಷ ಎಂ.ಆರ್.ಲವ, ವಲಯ ಅರಣ್ಯಾಧಿಕಾರಿ ರಶ್ಮಿ, ಪಿಡಿಒ ಸ್ವಾಮಿನಾಯಕ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts