More

    ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ.50 ರಿಯಾಯಿತಿ

    ಬೆಳಗಾವಿ: ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡ ಪಾವತಿಸಲು ಸರ್ಕಾರ ಶೇ.50 ರಿಯಾಯಿತಿ ನೀಡಿದ್ದು, ಸಾರ್ವಜನಿಕರು ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್ ಎಸ್.ಎ. ಹೇಳಿದರು.

    ನಗರದ ಹೊಸ ನ್ಯಾಯಾಲಯ ಸಂಕೀರ್ಣದ ಕಾನ್ಫರೆನ್ಸ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ಬಾರಿಗೆ ಅನ್ವಯವಾಗುವಂತೆ ನೀಡಿರುವ ಈ ರಿಯಾಯಿತಿಯು ಫೆ.11ರ ಒಳಗೆ ಇತ್ಯರ್ಥಪಡಿಸಿಕೊಂಡು ದಂಡ ಪಾವತಿಸುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗಲಿದೆ. ಹಾಗಾಗಿ, ಸಾರ್ವಜನಿಕರು ಯಾವುದಾದರೂ ಸಂಚಾರ ನಿಯಮ ಉಲ್ಲಂಘನೆಯ ದಂಡವು ಬಾಕಿ ಇದ್ದಲಿ,್ಲ ಕೂಡಲೇ ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.

    ಮೂರು ವರ್ಷಗಳ ಅವಧಿಯಲ್ಲಿ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಇ-ಚಲನ್‌ನಲ್ಲಿ ದಾಖಲಾಗಿರುವ 6.28 ಲಕ್ಷ ಪ್ರಕರಣಗಳಿಂದ 26 ಕೋಟಿ ರೂ. ದಂಡ ಪಾವತಿ ಬಾಕಿ ಉಳಿದಿದೆ. ಇಂತಹ
    ಪ್ರಕರಣಗಳನ್ನು ಇತ್ಯರ್ಥಪಡಿಸಲು ಸರ್ಕಾರವು ಸಾರ್ವಜನಿಕರಿಗೆ ಒಳ್ಳೆಯ ಅವಕಾಶ ಕಲ್ಪಿಸಿಕೊಟ್ಟಿದೆ. ಫೆ.11ರ ವರೆಗೆ ಮಾತ್ರ ಅವಕಾಶವಿರುತ್ತದೆ ಎಂದು ತಿಳಿಸಿದರು.

    ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಮಾತನಾಡಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯಾಧ್ಯಕ್ಷರ ಮನವಿಯಂತೆ ವಾಹನದ ಮಾಲೀಕರು ಬಾಕಿ ಉಳಿಸಿಕೊಂಡಿರುವ ಸಂಚಾರ ನಿಯಮ ಉಲ್ಲಂಘನೆಗಳ ದಂಡದ ಮೊತ್ತಗಳಿಗೆ ಸರ್ಕಾರ ಶೇ.50 ರಿಯಾಯಿತಿ ನೀಡಿ ಆದೇಶಿಸಿದೆ. ನಾಗರಿಕರು ಬಾಕಿ ಉಳಿಸಿಕೊಂಡಿರುವ ದಂಡದ ವಿವರವನ್ನು ಕ್ಯಾಂಪ್ ಪ್ರದೇಶದಲ್ಲಿರುವ ಸಂಚಾರ ನಿರ್ವಹಣೆ ಕೇಂದ್ರ, ಕರ್ನಾಟಕ ಒನ್ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು. ಅಲ್ಲದೆ, ದಂಡ ಪಾವತಿಸಲು ಬೆಳಗಾವಿ ಒನ್ ಕೇಂದ್ರಗಳಲ್ಲಿ, ಸಂಚಾರ ನಿರ್ವಹಣೆ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.

    ಈಗಾಗಲೇ ಸಂಚಾರ ನಿಯಮ ಉಲ್ಲಂಘನೆಗಳ ದಂಡ ಮೊತ್ತ ಬಾಕಿ ಉಳಿಸಿಕೊಂಡಿರುವ ವಾಹನದ ಮಾಲೀಕರ ಮೊಬೈಲ್‌ಗಳಿಗೆ ಸಂದೇಶ ಹೋಗಿದೆ. ಫೆ.11ರ ಒಳಗಾಗಿ ದಂಡ ಪಾವತಿಸುವವರಿಗೆ ಮಾತ್ರ ಶೇ.50 ರಿಯಾಯಿತಿ ಸೌಲಭ್ಯ ಸಿಗಲಿದೆ. ದಂಡ ಪಾವತಿಸಲು ಮಾಹಿತಿ ಕೊರತೆ ಉಂಟಾದರೆ, ಕೂಡಲೇ ಸ್ಥಳೀಯ ಸಂಚಾರಿ ಪೊಲೀಸರಿಂದ ಮಾಹಿತಿ ಪಡೆದು ದಂಡ ಪಾವತಿಸಿ ರಶೀದಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು. ನಗರದಲ್ಲಿ ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಇತ್ಯರ್ಥಪಡಿಸಲು ವಿಶೇಷ ಕಾರ್ಯಚರಣೆ ನಡೆಸಲಾಗುತ್ತಿದೆ. ಆದರೆ, ಪರ್ಯಾಯ ಮಾರ್ಗಗಳು ಇಲ್ಲದಿರುವ ಕಾರಣ ಸಮಸ್ಯೆಗಳು ಇತ್ಯರ್ಥವಾಗುತ್ತಿಲ್ಲ. ನಗರದ ಹೊರವಲಯದಲ್ಲಿ ರಿಂಗ್ ರೋಡ್ ನಿರ್ಮಾಣಗೊಂಡ ಬಳಿಕ ನಗರದಲ್ಲಿ ಸಂಚಾರ ದಟ್ಟಣೆಗೆ ಪರಿಹಾರ ಸಿಗಲಿದೆ ಎಂದು ಹೇಳಿದರು.

    ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಇ-ಚಲನ್‌ನಲ್ಲಿ ಯಾವುದೇ ದಂಡ ಬಾಕಿ ಪ್ರಕರಣಗಳು ಇಲ್ಲ. ಈ ಎಲ್ಲ ಪ್ರಕರಣಗಳನ್ನು ಸಮಯಕ್ಕೆ ಸರಿಯಾಗಿ ಇತ್ಯರ್ಥಪಡಿಸಲಾಗಿದೆೆ. ಗ್ರಾಮೀಣ ಪ್ರದೇಶದಲ್ಲಿ ಸಂಚಾರ ಉಲ್ಲಂಘನೆ ಪ್ರಕರಣಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ.
    | ಡಾ.ಸಂಜೀವ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಜಿಲ್ಲೆಯಲ್ಲಿ ಫೆ.11ರಂದು ನಡೆಯಲಿರುವ ಲೋಕ್ ಅದಾಲತ್‌ಗಾಗಿ ಸುಮಾರು 21 ಸಾವಿರ ಪ್ರಕರಣಗಳ್ನು ಗುರುತಿಸಲಾಗಿದೆ. ಈ ಹಿಂದೆ ನಡೆದಿರುವ ಲೋಕ್ ಅದಾಲತ್‌ಗಳಲ್ಲಿ ಸುಮಾರು 14 ಸಾವಿರ ಪ್ರಕರಣ ಇತ್ಯರ್ಥಪಡಿಸಲಾಗಿದೆ. ಸಾರ್ವಜನಿಕರಿಗೆ ಇಂತಹ ಲೋಕ್ ಅದಾಲತ್ ಸದುಪಯೋಗಪಡಿಸಿಕೊಳ್ಳಬೇಕು.
    | ಮುಸ್ತಫಾ ಹುಸೇನ್ ಎಸ್.ಎ., ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts