More

    ನಿಧಿ ಶೋಧದ ಆರು ಮಂದಿ ಕಳ್ಳರ ಸೆರೆ  -ಜಗಳೂರು ಪೊಲೀಸರ ಕಾರ್ಯಾಚರಣೆ 

    ದಾವಣಗೆರೆ: ರಸ್ತೆಹೋಕರನ್ನು ತಡೆದು ದರೋಡೆಗೆ ಯತ್ನಿಸಿದ್ದ ಹಾಗೂ ದೇವಸ್ಥಾನದಲ್ಲಿ ನಿಧಿಗಾಗಿ ಶೋಧ ನಡೆಸುತ್ತಿದ್ದ ಆರು ಮಂದಿ ಕಳ್ಳರನ್ನು ಜಗಳೂರು ಠಾಣೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.
    ಜಗಳೂರು ನಿವಾಸಿ ಪಿ. ಕಲ್ಲೇಶಿ, ದಾವಣಗೆರೆ ಅಜಾದ್‌ನಗರದ ದಿವಾನ್‌ಸಾಬ್ ಜಾವೀದ್, ಹುಬ್ಬಳ್ಳಿಯ ಮಲ್ಲಿಕಾರ್ಜುನ ಆಲಿಯಾಸ್ ಮಲ್ಲೇಶಿ, ಹನುಮಂತ ಸೋಪಾನಿ ಪವಾರ್, ಅಮೀರ್‌ಖಾನ್ ಪಠಾಣ್, ಇಳಕಲ್ ನಿವಾಸಿ ಮುರ್ತಾಜಾಸಾಬ್ ಗೋಲಂದಾಜ್ ಬಂಧಿತ ಆರೋಪಿಗಳು.
    ಶನಿವಾರ ಮಧ್ಯರಾತ್ರಿ, ಜಗಳೂರು ತಾಲೂಕು ಲಿಂಗಣ್ಣನಹಳ್ಳಿ ಗ್ರಾಮದ ರಸ್ತೆ ಬದಿಯ ನಿರ್ಜನ ಪ್ರದೇಶದಲ್ಲಿ ಅನುಮಾಸ್ಪದವಾಗಿ ಕಾರೊಂದು ನಿಂತಿತ್ತು. ಗಸ್ತು ಪೊಲೀಸರು ಕಾರಿನ ಬಳಿ ಬರುತ್ತಿದ್ದಂತೆ ಹೊರಗೆ ನಿಂತಿದ್ದ ಇಬ್ಬರು ಏಕಾಏಕಿ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಪೊಲೀಸರು ಬೆನ್ನುಹತ್ತಿ ಹಿಡಿದಿದ್ದಾರೆ.
    ಈ ಇಬ್ಬರೂ ಆರೋಪಿಗಳನ್ನು ಕರೆತರುವವರೆಗೆ ಕಾರಿನ ಡೋರ್ ತೆರೆಯದಂತೆ ಪಿಎಸ್‌ಐ ಜೀಪ್‌ನ ಚಾಲಕ ಸಮಯಪ್ರಜ್ಞೆ ಮೆರೆದಿದ್ದು, ಕಾರಿನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆಯಲಾಯಿತು. ವಿಚಾರಣೆ ಬಳಿಕ ರಸ್ತೆಯಲ್ಲಿ ದರೋಡೆಗೆ ಹೊಂಚು ಹಾಕುತ್ತಿರುವುದಾಗಿಯೂ, ಪುರಾತನ ದೇವಸ್ಥಾನಗಳನ್ನು ಪತ್ತೆ ಮಾಡಿ ನಿಧಿಗಾಗಿ ಶೋಧ ನಡೆಸಲು ಬಂದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
    ಬಿದರಕೆರೆ-ಸಂತೆ ಮುದ್ದಾಪುರ ಗ್ರಾಮಗಳ ಮಧ್ಯದ ಆಂಜನೇಯಸ್ವಾಮಿ ಗುಡಿ ಎದುರಿನ ಬಸವಣ್ಣ ದೇವಸ್ಥಾನದಲ್ಲಿ ಬಸವಣ್ಣಮೂರ್ತಿಯನ್ನು ಕಿತ್ತು ಪಕ್ಕದಲ್ಲಿರಿಸಿದ್ದ ಕಳ್ಳರು ನಿಧಿಗಾಗಿ ಶೋಧನೆ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ.
    ಆರೋಪಿತರಿಂದ ಒಂದು ಕಾರು, ಕಬ್ಬಿಣದ ಸುತ್ತಿಗೆ, ಹ್ಯಾಂಡ್‌ಗ್ಲೌಸ್, ಕಟಿಂಗ್ ಪ್ಲೇಯರ್, ಕಬ್ಬಿಣದ ಪ್ಲಾಟ್ ಚಿಸೆಲ್, ಸುರ್‌ಸುರ್‌ಬತ್ತಿ. ಖಾರದ ಪುಡಿ ಪಾಕೆಟ್‌ಗಳು, 3 ಮೊಬೈಲ್, ಟಾರ್ಚ್, ರೇಡಿಯಂ ಕಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದ್ದು ಪ್ರಕರಣ ದಾಖಲಾಗಿದೆ.
    ಜಗಳೂರು ಠಾಣೆ ಪಿಐ ಶ್ರೀನಿವಾಸರಾವ್, ಪಿಎಸ್‌ಐ ಎಸ್.ಡಿ.ಸಾಗರ್ ಹಾಗೂ ಅವರ ಸಿಬ್ಬಂದಿ ಕಾರ್ಯಾಚರಣೆಗೆ ಎಸ್ಪಿ ಡಾ.ಕೆ.ಅರುಣ್ ಶ್ಲಾಘಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts