More

    ನಿಗದಿತ ಸಮಯಕ್ಕೆ ಸಾಲ ಮರುಪಾವತಿ ಮಾಡಿ

    ಕೆ.ಆರ್.ನಗರ: 2021-22 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕರ ಪತ್ತಿನ ಸಹಕಾರ ಸಂಘ 4.78 ಕೋಟಿ ಸಾಲ ನೀಡಿದ್ದು 16 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ.ಎನ್.ಲೋಕೇಶ್ ತಿಳಿಸಿದರು.


    ಪಟ್ಟಣದ ಬಸವೇಶ್ವರ ಬಡಾವಣೆ ಗಿರಿಜಮ್ಮ ಬಳೆ ಬಸವರಾಜಪ್ಪ ಧರ್ಮಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕರ ಪತ್ತಿನ ಸಹಕಾರ ಸಂಘದ 12ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 1506 ಷೇರುದಾರರನ್ನು ಹೊಂದಿರುವ ನಮ್ಮ ಸಂಘ, ಈ ಸಾಲಿನಲ್ಲಿ 75.23 ಲಕ್ಷ ರೂ. ಷೇರು ಬಂಡವಾಳ ಹೊಂದಿದೆ. 4.95 ಕೋಟಿ ರೂ. ವ್ಯವಹಾರ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಸಾಲಗಾರರು ನಿಗದಿತ ಸಮಯದಲ್ಲಿ ಸಾಲ ಮರುಪಾವತಿ ಮಾಡಬೇಕು ಎಂದು ಮನವಿ ಮಾಡಿದರು.


    ನಮ್ಮ ಸಂಘದಲ್ಲಿ ಇ-ಸ್ಟಾಂಪಿಂಗ್ ಸೌಲಭ್ಯವಿದ್ದು ಸದಸ್ಯರು ಹಾಗೂ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಆರ್‌ಟಿಸಿ(ಪಹಣಿ) ಪ್ರತಿಯನ್ನು ತೆಗೆದುಕೊಳ್ಳುವ ಸೌಲಭ್ಯವೂ ಇದ್ದು, ಇದರ ಸೌಲಭ್ಯ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.


    ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಮಹೇಶ್ ಮಾತನಾಡಿ, ನಮ್ಮ ಸಂಸ್ಥೆಯ ಸಿಬ್ಬಂದಿ ಎರಡು ಸಹಕಾರಿ ಸಂಘಗಳನ್ನು ಸ್ಥಾಪಿಸಿಕೊಂಡು ಶ್ರಮವಹಿಸಿ ಅಭಿವೃದ್ಧಿ

    ಮಾಡುತ್ತಾ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಂತಸ ತರಿಸಿದೆ.ಎಲ್ಲರು ಸದಸ್ಯತ್ವ ಪಡೆದುಕೊಂಡು ಇದರ ಅನುಕೂಲ ಪಡೆದುಕೊಳ್ಳಿ ಎಂದು ಕರೆ ನೀಡಿದರು.

    ಕೆನರಾ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ಮಾತನಾಡಿದರು. ಸಂಘದ ಸಂಪೂರ್ಣ ವಹಿವಾಟು ಮತ್ತು ಇತರೆ ಕಾರ್ಯಚಟುವಟಿಕೆಗಳನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎನ್.ಮಂಜುನಾಥ್ ಮಂಡಿಸಿದರು. ಷೇರುದಾರ ಸದಸ್ಯರ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಗೌರವಾಧ್ಯಕ್ಷ ಕೆ.ಎಸ್.ಗಣೇಶ್, ಉಪಾಧ್ಯಕ್ಷ ಎಂ.ಎನ್.ಅರುಣ, ನಿರ್ದೇಶಕರಾದ ಎಸ್.ನಂಜಪ್ಪ, ಎಂ.ಮಧುರ, ಆರ್.ಕೃಷ್ಣೇಗೌಡ, ಡಿ.ಶಿವಣ್ಣ, ಡಿ.ಶಿವಪ್ರಕಾಶ್, ಕೆ.ಎನ್.ಪ್ರಸನ್ನಕುಮಾರ್, ಶಂಕರ, ಎಸ್.ಎಂ.ಶಾಂತಕುಮಾರ, ಬಿ.ಕೆ.ರವಿ, ಜಿ.ಎಲ್.ಅಕ್ಷಯ ಸೇರಿದಂತೆ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts