More

    ನಾವು ನವೆಂಬರ್ ಕನ್ನಡಿಗರಾಗಬಾರದು, ಶಾಸಕ ನಿಸರ್ಗ ನಾರಾಯಣಸ್ವಾಮಿ ಕರೆ, ದೇವನಹಳ್ಳಿಯಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನ

    ದೇವನಹಳ್ಳಿ: ನಾವು ನವೆಂಬರ್ ಕನ್ನಡಿಗರಾಗದೇ ವರ್ಷ ಪೂರ್ತಿ ಕನ್ನಡಿಗರಾಗಿಯೇ ಬದುಕಬೇಕು. ನಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿ ಕನ್ನಡತನ ಮೆರೆಯಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಕರೆ ನೀಡಿದರು.

    66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಕ್ಕಾಗಿ ನಾವು ಅಭಿಯಾನದಡಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ದೇವನಹಳ್ಳಿಯ ಐತಿಹಾಸಿಕ ಕೋಟೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸಾಮೂಹಿಕ ಕನ್ನಡ ಗೀತೆಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಿಧಾನಸಭೆಯಲ್ಲಿ ಹಲವು ಶಾಸಕರು, ಸಚಿವರು ಮಾತನಾಡುವ ಆರಂಭದಲ್ಲಿಯೇ ಆಂಗ್ಲಭಾಷೆಯ ಉದ್ಗಾರ ತೆಗೆಯುತ್ತಾರೆ, ಇದು ನಿಲ್ಲಬೇಕು. ವಿಧಾನಸಭೆಯಲ್ಲಿ ಪ್ರತಿ ಜನಪ್ರತಿನಿಧಿಯೂ ಕಡ್ಡಾಯವಾಗಿ ಕನ್ನಡದಲ್ಲೆ ಸಂವಹನ ನಡೆಸುವಂತೆ ಶಾಸನ ಸಭೆಯಲ್ಲಿ ನಿಯಮ ರೂಪಿಸಬೇಕು ಎಂದು ಒತ್ತಾಯಿಸಿದರು.

    ರಾಜ್ಯದಲ್ಲಿ ಕನ್ನಡ ಉಳಿಯಬೇಕಾದರೆ ಪ್ರತಿಯೊಬ್ಬರೂ ಕನಿಷ್ಠ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಓದಬೇಕು ಎಂದು ಅಭಿಪ್ರಾಯಪಟ್ಟರು.

    ಆಂಗ್ಲ ಭಾಷೆ ವ್ಯಾಮೋಹಕ್ಕೆ ಒಳಗಾಗದೇ ಕನ್ನಡ ಉಳಿಸುವುದು, ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು, ಕನ್ನಡಕ್ಕಾಗಿ ನಾವು ಅಭಿಯಾನ ಒಂದು ದಿನಕ್ಕೆ ಸೀಮಿತವಾಗದೇ, ರಾಜ್ಯದ ಮೂಲೆ-ಮೂಲೆಗಳಲ್ಲಿ ಪ್ರತಿಧ್ವನಿಸಬೇಕು, ಕನ್ನಡ ಭಾಷೆಯಲಿಯೇ ವ್ಯವಹರಿಸುವಂತಾಗಬೇಕು ಎಂದು ಹೇಳಿದರು.

    ಶಿಕ್ಷಕರು ಕನ್ನಡ ಭಾಷೆಯನ್ನು ಹೆಚ್ಚು ಬಳಸುವ ಮೂಲಕ ಮಕ್ಕಳಲ್ಲಿ ಕನ್ನಡದ ಬಗ್ಗೆ ಒಲವು ಮೂಡಿಸಬೇಕು. ಕನ್ನಡದಲ್ಲಿ ಅಧ್ಯಯನ ನಡೆಸಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ರಿಯಾಯಿತಿ ನೀಡಿ, ಉನ್ನತ ಶಿಕ್ಷಣಕ್ಕೆ ನೆರವಾಗಬೇಕು ಎಂದು ತಿಳಿಸಿದರು.

    ಹೊರಗಿನವರಿಗೂ ಕನ್ನಡ ಕಲಿಸಿ: ಎಲ್ಲರೂ ಕನ್ನಡ ಭಾಷೆಯಲ್ಲಿ ವ್ಯವಹರಿಸುವುದರೊಂದಿಗೆ ಹೊರ ರಾಜ್ಯದಿಂದ ಬಂದು ರಾಜ್ಯದಲ್ಲಿ ನೆಲೆಸಿರುವವರಿಗೂ ಕನ್ನಡ ಕಲಿಸುವ ಕೆಲಸವಾಗಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಕರೆ ನೀಡಿದರು.
    ಆಂಗ್ಲ ಭಾಷಾ ವ್ಯಾಮೋಹಕ್ಕೆ ಒಳಗಾಗದೆ ದೈನಂದಿನ ಜೀವನದಲ್ಲಿ ಕನ್ನಡ ಭಾಷೆ ಬಳಕೆಯಾಗಬೇಕು ಹಾಗೂ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ನೀಡಬೇಕು ಎಂದು ಹೇಳಿದರು.

    ಇಂಗ್ಲಿಷ್ ಪುಸ್ತಕ ಹರಿದುಹಾಕುತ್ತಿದ್ದರು!: ನನ್ನ ತಂದೆ ಅಪ್ಟಟ ಕನ್ನಡ ಪ್ರೇಮಿಯಾಗಿದ್ದರು. ನಾನು ಇಂಗ್ಲಿಷ್ ಪುಸ್ತಕ ಹಿಡಿದುಕೊಂಡರೆ ಅದನ್ನು ಹರಿದು ಹಾಕುತ್ತಿದ್ದರು. ಕನ್ನಡದ ಪುಸ್ತಕಗಳನ್ನು ಓದುವಂತೆ ತಿಳಿಹೇಳುತ್ತಿದ್ದರು ಎಂದು ಪುರಸಭೆ ಅಧ್ಯಕ್ಷೆ ರೇಖಾ ಹೇಳಿದರು. ನಾನು ಮಾತನಾಡುವಾಗ ಅಂಗ್ಲ ಪದ ಬಳಕೆಯನ್ನು ಸಾಧ್ಯವಾದಷ್ಟು ತಡೆಯುತ್ತೇನೆ ಎಂದರು.

    ಹಾಡುಗಳ ರಸದೌತಣ: ಶಾಸಕ ನಿಸರ್ಗ ನಾರಾಯಣಸ್ವಾಮಿ ‘ನಾವಾಡುವ ನುಡಿಯೇ ಕನ್ನಡನುಡಿ’ ಗಾಯನದ ಮೂಲಕ ಚಪ್ಪಾಟೆ ಗಿಟ್ಟಿಸಿದರೆ, ಅಧ್ಯಕ್ಷೆ ರೇಖಾ ‘ಕೇಳಿಸದೇ ಕಲ್ಲುಕಲ್ಲಿನಲಿ’ ಹಾಡಿನ ಮೂಲಕ ಗಮನ ಸೆಳೆದರು ‘ಜೇನಿನ ಹೊಳೆಯೋ ಹಾಲಿನ ಮಳೆಯೋ’ ಗಾಯದ ಮೂಲಕ ಜಿಲ್ಲಾಧಿಕಾರಿಗಳು ಸಾರ್ವಜನಿಕರನ್ನು ರಂಜಿಸಿದರು. ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ ಮತ್ತು ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಗೀತೆಗಳು ಕಾರ್ಯಕ್ರಮಕ್ಕೆ ಕಳೆಕಟ್ಟಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts