More

    ನಾವಿದ್ದ ಕೇತ್ರದಲ್ಲೇ ಸಾಧಿಸುವ ಗುರಿ ಮುಖ್ಯ – ಡಿಡಿ ವಾಸಂತಿ ಉಪ್ಪಾರ್ ಸಲಹೆ -ವಿಮಲಾ ದಾಸ್ ಸೇವಾ ಪುರಸ್ಕಾರ ಕಾರ್ಯಕ್ರಮ

    ದಾವಣಗೆರೆ: ಸನ್ಮಾನಗಳಿಂದಾಗಿ ಹೆಚ್ಚಿನ ಸಾಧನೆಗೆ ಉತ್ತೇಜನ ಸಿಗಲಿದೆ. ನಾವು ಮಾಡುವ ಕೆಲಸದಲ್ಲೇ ಉನ್ನತಿ ಕಾಣುವ ಗುರಿ ಹೊಂದಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಸಲಹೆ ನೀಡಿದರು.
    ನಗರದ ಜಾಗೃತ ಮಹಿಳಾ ಸಂಘದ ಕಚೇರಿಯಲ್ಲಿ, ಸಂಘದ ಸಂಸ್ಥಾಪಕಿ ಬಿ. ವಿಮಲಾ ದಾಸ್ ಸ್ಮರಣಾರ್ಥ, ಶನಿವಾರ ಹಮ್ಮಿಕೊಂಡಿದ್ದ ವಿಮಲಾದಾಸ್ ಸೇವಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಶುಶ್ರೂಷಕಿ ನಾಗರತ್ನಾ, ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಗಳಿಸಿದ್ದು ದೊಡ್ಡ ಸಾಧನೆಯಾಗಿದೆ. ಸಾಧಿಸದೆ ಸತ್ತರೆ ಅದು ಸಾವಿಗೆ ಅವಮಾನ ಎಂಬ ಮಾತನ್ನು ಎಲ್ಲರೂ ನೆನೆಸಿಕೊಳ್ಳಬೇಕು. ಇರುವ ಕ್ಷೇತ್ರದಲ್ಲೇ ಹೆಸರು ಮಾಡಬೇಕು ಎಂದು ಹೇಳಿದರು.
    ಇಂದು ಎಲ್ಲರದ್ದೂ ಒತ್ತಡದ ಬದುಕು. ಹೀಗಾಗಿ ಸಾಧನೆ ಸರಳವಲ್ಲ. ಅದನ್ನು ದಕ್ಕಿಸಿಕೊಳ್ಳಲು ದೃಢ ಆತ್ಮವಿಶ್ವಾಸ ಇರಬೇಕು. ಯಾವುದೇ ಒಂದು ವಿಷಯ ಮನಸ್ಸನ್ನು ಹೊಕ್ಕರೆ ಅದನ್ನು ಮಾಡಿತೋರುವ ಹಠವಿರಬೇಕು ಎಂದೂ ತಿಳಿಸಿದರು.
    ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಮಾತನಾಡಿ ಎಲೆಮರೆಯ ಕಾಯಿಯಂತೆ ಸಮಾಜಮುಖಿ ಕೆಲಸ ಮಾಡುವವರು ಅನೇಕರಿದ್ದಾರೆ. ಅವರು ಹೊರಜಗತ್ತಿಗೆ ತೋರ್ಪಡಿಸಿಕೊಳ್ಳುವುದಿಲ್ಲ. ಬಿ. ವಿಮಲಾ ದಾಸ್ ಈ ಸಾಲಿಗೆ ಸೇರಿದವರು. ದಾವಣಗೆರೆಯಲ್ಲಿ ಹಲವು ಮಹಿಳೆಯರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಶ್ಲಾಘನೀಯ ಎಂದು ಹೇಳಿದರು.
    ಸಂಘದ ಕಾರ್ಯದರ್ಶಿ ಅಮೀನಾ ಬಾನು ಪ್ರಾಸ್ತಾವಿಕ ಮಾತನಾಡಿ ಉಪನ್ಯಾಸಕಿಯಾಗಿದ್ದ ವಿಮಲಾದಾಸ್ ಅವರು ಸಮಾನ ಮನಸ್ಕರೊಂದಿಗೆ ಸೇರಿ ಜಾಗೃತ ಮಹಿಳಾ ಸಂಘ ಆರಂಭಿಸಿದರು. ಸಾವಿರಾರು ಮಹಿಳೆಯರಿಗೆ ಆಪ್ತ ಸಮಾಲೋಚನೆ ನೀಡಿ ಅವರು ಬದುಕಿಗೆ ನೆಲೆ ಕೊಟ್ಟರು ಎಂದರು.
    ಹೊನ್ನಾಳಿಯ ಶುಶ್ರೂಷಕಿ ಟಿ.ನಾಗರತ್ನಾ ಅವರಿಗೆ ವಿಮಲಾ ದಾಸ್ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷೆ ಉಮಾ ವೀರಭದ್ರಪ್ಪ, ನಿವೃತ್ತ ಪ್ರಾಚಾರ್ಯೆ ಶಕುಂತಲಾ ಗುರುಸಿದ್ದಯ್ಯ, ಎಸ್.ಎಸ್. ವೈದ್ಯಕೀಯ ಕಾಲೇಜಿನ ಫೆಥಾಲಜಿ ವಿಭಾಗ ಮುಖ್ಯಸ್ಥೆ ಡಾ. ಶಶಿಕಲಾ ಕೃಷ್ಣಮೂರ್ತಿ, ನಿವೃತ್ತ ಪ್ರಾಚಾರ್ಯ ಎಂ. ಬಸವರಾಜ, ಸಂಘದ ಸತ್ಯಭಾಮಾ ಮಂಜುನಾಥ್, ಸುಮಾ, ಮಮತಾ, ಟಿ.ಹೇಮಲತಾ , ಎಸ್.ಕುಮಾರ್ ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts