More

    ನಾಳೆ ಒಕ್ಕಲಿಗರ ವಿಭಾಗೀಯಮಟ್ಟದ ಸಮಾವೇಶ, ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ನಾಗಣ್ಣ ಬಾಣಸವಾಡಿ ಮಾಹಿತಿ

    ನೆಲಮಂಗಲ: ರಾಜ್ಯದ ಒಕ್ಕಲಿಗ ಸಮುದಾಯದ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮಾ.13ರಂದು ಒಕ್ಕಲಿಗರ ಬೃಹತ್ ಸಮಾವೇಶ ಹಮ್ಮಿಕೊಂಡಿರುವುದಾಗಿ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ನಾಗಣ್ಣ ಬಾಣಸವಾಡಿ ತಿಳಿಸಿದರು.

    ಕಳೆದೆರಡು ವರ್ಷಗಳಿಂದ ರಾಜ್ಯದ ಒಟ್ಟು 30 ಜಿಲ್ಲೆಗಳನ್ನು 5 ವಿಭಾಗಗಳಾಗಿ ಮಾಡಿಕೊಂಡು ಸಮುದಾಯವನ್ನು ಸಂಘಟಿಸಲಾಗುತ್ತಿದೆ. ಈಗ ಮಾ.13ರಂದು ಬೆಂಗಳೂರು ಉತ್ತರ ತಾಲೂಕು ನಗರೂರು ಗ್ರಾಮದ ಬಿಜಿಎಸ್ ವರ್ಲ್ಡ್ ಸ್ಕೂಲ್ ಆವರಣದಲ್ಲಿ ಮೊದಲ ಬಾರಿಗೆ ಬೆಂಗಳೂರು ವಿಭಾಗೀಯ ಮಟ್ಟದ ಒಕ್ಕಲಿಗರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಒಕ್ಕಲಿಗರ ಒಕ್ಕೂಟ ಹಾಗೂ ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಒಕ್ಕಲಿಗ ಸಮುದಾಯಕ್ಕಿರುವ ಶೇ.4 ಮೀಸಲಾತಿ ಹೆಚ್ಚಿಸುವುದು, ಉತ್ತರ ಕರ್ನಾಟಕ ಭಾಗದ 12 ಜಿಲ್ಲೆಗಳಲ್ಲಿರುವ 20 ಲಕ್ಷಕ್ಕೂ ಹೆಚ್ಚಿನ ಕುಡು ಒಕ್ಕಲಿಗರನ್ನು 3ಎ ಮೀಸಲಾತಿಗೆ ಒಳಪಡಿಸುವುದು, ರಾಜ್ಯದೆಲ್ಲೆಡೆ ಹರಿದು ಹಂಚಿಹೋಗಿರುವ ಒಕ್ಕಲಿಗ ಸಮುದಾಯ ಉಪಪಂಗಡ ಸಂಘಟಿಸಿ ಒಂದೇ ವೇದಿಕೆಯಡಿ ತರುವುದು, ಸಮುದಾಯದ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಹೆಚ್ಚಳ ಸೇರಿ ರಾಜ್ಯದ ಬಹುಸಂಖ್ಯಾತ ಒಕ್ಕಲಿಗ ಸಮುದಾಯದ ರೈತರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವ ವಿವಿಧ ಬೇಡಿಕೆಗಳನ್ನು ಸಮುದಾಯದ ಸಚಿವರ ಮೂಲಕ ಸರ್ಕಾರದ ಗಮನಕ್ಕೆ ತರುವುದು ಇದರ ಉದ್ದೇಶ ಎಂದು ವಿವರಿಸಿದರು.

    ಸಮಾವೇಶದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಪೀಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಪಟ್ಟನಾಯ್ಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಸೇರಿ ನಾಡಿನ ಸಮುದಾಯದ ವಿವಿಧ ಮಠಾಧೀಶರು ಪಾಲ್ಗೊಳ್ಳುವರು ಎಂದು ಹೇಳಿದರು.

    ಬೆಂಗಳೂರು ನಗರ, ಗ್ರಾಮಾಂತರ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ 20 ಸಾವಿರಕ್ಕೂ ಹೆಚ್ಚು ಜನರು ಸಮಾವೇಶಕ್ಕೆ ಆಗಮಿಸುವ ಸಾಧ್ಯತೆ ಇದೆ. ಭಾಗವಹಿಸುವ ಎಲ್ಲರಿಗೂ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಒಕ್ಕೂಟದ ಉಪಾಧ್ಯಕ್ಷ ಸೈದಾಮಿಪಾಳ್ಯದ ರಮೇಶ್ ತಿಳಿಸಿದರು.

    ಮೆರವಣಿಗೆ ಮತ್ತು ಬೈಕ್ ರ‌್ಯಾಲಿ: ಸಮಾವೇಶದ ಪ್ರಯುಕ್ತ ಶನಿವಾರ ಬೆಳಗ್ಗೆ 10 ಗಂಟೆಗೆ ನಗರದ ಕೆಂಪೇಗೌಡ ವೃತ್ತದಿಂದ (ಕುಣಿಗಲ್ ವೃತ್ತ) ಚೆನ್ನಪ್ಪ ಬಡಾವಣೆವರೆಗೆ ವಿವಿಧ ಮಠಾಧೀಶರನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಗುವುದು. ಬೈಕ್ ರ‌್ಯಾಲಿ ಕೂಡ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಊಟ ಆದ ಬಳಿಕ 2 ಗಂಟೆಗೆ ವೇದಿಕೆ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದು ಒಕ್ಕಲಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಎನ್. ಸತೀಶ್ ಮಾಹಿತಿ ನೀಡಿದರು.

    ನಗರಸಭೆ ಸದಸ್ಯ ಆಂಜಿನಮೂರ್ತಿ(ಪಾಪಣ್ಣಿ), ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಉಪಾಧ್ಯಕ್ಷ ದೇವರಾಜು, ಪ್ರ.ಕಾರ್ಯದರ್ಶಿ ಮಧುಸೂದನ್, ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಚೆನ್ನಯ್ಯ, ಖಜಾಂಚಿ ಸುಂದರೇಶ್, ಮುಖಂಡ ಸುರೇಂದ್ರ, ಶಿವಪ್ರಕಾಶ್, ಮಡಿಕೇರಿ ಪೊನ್ನಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts