More

    ನಾಲ್ವರು ಮಹಿಳೆಯರಿಗೆ ಕರೊನಾ ದೃಢ

    ಹಾವೇರಿ: ಜಿಲ್ಲೆಯಲ್ಲಿ ಗುರುವಾರ ಗರ್ಭಿಣಿ, ಬಾಣಂತಿ ಸೇರಿ ನಾಲ್ವರು ಮಹಿಳೆಯರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಎಂಟು ಜನರು ಸೋಂಕಿನಿಂದ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈವರೆಗೆ 122 ಪಾಸಿಟಿವ್ ಪ್ರಕರಣ ದೃಢಗೊಂಡಿದ್ದು, ಇದರಲ್ಲಿ 33 ಜನರು ಬಿಡುಗಡೆಯಾಗಿದ್ದಾರೆ. 87 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

    ಹಾವೇರಿ ತಾಲೂಕು ಕನವಳ್ಳಿ ಗ್ರಾಮದ 25 ವರ್ಷದ ಐದು ತಿಂಗಳ ಗರ್ಭಿಣಿ, ಹಾನಗಲ್ಲ ತಾಲೂಕು ಅಕ್ಕಿಆಲೂರನ 30 ವರ್ಷದ ಬಾಣಂತಿ, ಯಳ್ಳೂರನ 45 ವರ್ಷದ ಮಹಿಳೆ, ಹಿರೇಕೆರೂರ ತಾಲೂಕು ಮೇದೂರಿನ 40 ವರ್ಷದ ಮಹಿಳೆಗೆ ಗುರುವಾರ ಕರೊನಾ ದೃಢಪಟ್ಟಿದೆ.

    ಸೋಂಕು ದೃಢಪಟ್ಟಿರುವ ಕನವಳ್ಳಿಯ ಗರ್ಭಿಣಿ ತಂದೆ, ತಾಯಿ, ಅಣ್ಣಂದಿರು ಮತ್ತು ಪತಿಯೊಂದಿಗೆ ವಾಸವಾಗಿದ್ದರು. ಪತಿ ಮೆಣಸಿನಕಾಯಿ ವ್ಯಾಪಾರಿಯಾಗಿದ್ದಾರೆ. ಅಕ್ಕಿಆಲೂರಿನ 30 ವರ್ಷದ ಮಹಿಳೆಗೆ ಹೆರಿಗೆಯ ನಂತರ ಜುಲೈ 1ರಂದು ಈಕೆಯ ಲ್ಯಾಬ್ ವರದಿ ಪಾಸಿಟಿವ್ ಬಂದಿದೆ. ಯಳ್ಳೂರ ನಿವಾಸಿ 45 ವರ್ಷದ ಮಹಿಳೆ ತನ್ನ ಪತಿ ಮಕ್ಕಳೊಂದಿಗೆ ವಾಸಿಸುತ್ತಿದ್ದು, ಸೋಂಕಿನ ಮೂಲ ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.

    ಹಿರೇಕೆರೂರ ತಾಲೂಕು ಮೇದೂರ ಗ್ರಾಮದ ಮಹಿಳೆ ಪತಿ ಮತ್ತು ಮಕ್ಕಳೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಜೂ. 23ರಂದು ರಾಣೆಬೆನ್ನೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದಾರೆ. ಜೂ. 29ರಂದು ಮೇದೂರಿನಿಂದ ಶಿವಮೊಗ್ಗಕ್ಕೆ ತೆರಳಿ ನಾರಾಯಣ ಹೃದಯಾಲಯದ ಆಸ್ಪತ್ರೆಯಲ್ಲಿ ಕಣ್ಣಿನ ಪರೀಕ್ಷೆಗೆ ತೆರಳಿದ್ದರು. ಈ ಆಸ್ಪತ್ರೆಯ ಸೂಚನೆ ಮೇರೆಗೆ ಶಿವಮೊಗ್ಗದಲ್ಲಿ ಪರೀಕ್ಷೆಗಾಗಿ ಗಂಟಲ ದ್ರವ ಮಾದರಿ ತೆಗೆಸಿದ್ದರು. ಲ್ಯಾಬ್ ವರದಿ ಬಂದ ನಂತರ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಮರಳಿ ಸ್ವ ಗ್ರಾಮಕ್ಕೆ ಬಂದಿದ್ದರು. ಜು. 1ರಂದು ರಾತ್ರಿ ಮಹಿಳೆಗೆ ಸೋಂಕು ದೃಢಪಟ್ಟಿದೆ.

    ಎಂಟು ಜನರ ಬಿಡುಗಡೆ: ಜೂ. 20ರಂದು ಕೋವಿಡ್ ಸೋಂಕು ದೃಢಪಟ್ಟು ನಿಗದಿತ ಆಸ್ಪತ್ರೆಯಲ್ಲಿ ದಾಖಲಾಗಿ ಗುಣವಾದ ಕಾರಣ ಗುರುವಾರ ಶಿಗ್ಗಾಂವಿ ಪಟ್ಟಣದ 23 ವರ್ಷದ ಪುರುಷ, 16, 45, 20 ವರ್ಷದ ಮಹಿಳೆಯರು, 15 ವರ್ಷದ ಬಾಲಕಿ, 4 ವರ್ಷದ ಬಾಲಕ, 60, 40 ವರ್ಷದ ಪುರುಷರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts