More

    ನಾಲಾ ದುರಸ್ತಿಗೆ ಆಗ್ರಹಿಸಿ ನೀರಾವರಿ ಇಲಾಖಾ ಕಚೇರಿಗೆ ರೈತರ ಮುತ್ತಿಗೆ

    ದಾವಣಗೆರೆ: ತಾಲೂಕಿನ ಕುರ್ಕಿ ಭಾಗದ ಮೇಲಂತದ ನಾಲೆ ದುರಸ್ತಿ ಮತ್ತು ನಾಲೆಗಳ ಹೂಳೆತ್ತಲು ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರುಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಕಾರ್ಯಕರ್ತರು ಬುಧವಾರ ನಗರದ ಹದಡಿ ರಸ್ತೆಯ ನೀರಾವರಿ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
    ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಭದ್ರಾನಾಲಾ 7 ನೇ ವಿಭಾಗದಲ್ಲಿ ಕಾಲುವೆಗಳಲ್ಲಿ ಸಾಕಷ್ಟು ತೊಂದರೆಗಳಿದ್ದು ತ್ವರಿತಗತಿಯಲ್ಲಿ ಸರಿಪಡಿಸಬೇಕೆಂದು ಆಗ್ರಹಿಸಿದರು.
    ಚಿಕ್ಕತೊಗಲೇರಿಯಿಂದ ಕುಕ್ಕುವಾಡ ಗ್ರಾಮದವರೆಗೆ
    ಕೋಲ್ಕುಂಟೆ, ಯರವನಾಗತಿಹಳ್ಳಿ, ಕಲ್ಕೆರೆ, ಕುಕ್ಕುವಾಡ, ಗೋಪನಾಳು ಗ್ರಾಮದ ಮಧ್ಯೆ ಹರಿಯುವ 7 ನೇ ವಿಭಾಗದ ಕಾಲುವೆಗಳಲ್ಲಿ ಬರುವ ಸಣ್ಣ ಗೇಟುಗಳಾದ ಲೋಕಿಕೆರೆ, ಯರವನಾಗತಿಹಳ್ಳಿ, ಕೋಲ್ಕುಂಟೆ ಸಣ್ಣ ಗೇಟುಗಳು ಶಿಥಿಲಗೊಂಡು ನೀರು ಸಾಕಷ್ಟು ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಇದರಿಂದ ಅಚ್ಚುಕಟ್ಟು ಭಾಗದ ರೈತರಿಗೆ ನೀರು ತಲುಪದೇ ಸಾಕಷ್ಟು ಸಮಸ್ಯೆಗಳಾಗಿವೆ ಎಂದರು.
    ಕುರ್ಕಿ ಎಡದಂಡೆ ಮತ್ತು ಬಲದಂಡೆ ದೊಡ್ಡ ಕಾಲುವೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಹೂಳು ತುಂಬಿರುವುದರಿಂದ ನೀರು ಸರಾಗವಾಗಿ ಮುಂದೆ ಹೋಗುತ್ತಿಲ್ಲ. ಇದರಿಂದ ಕೂಡ ಮೇಲ್ಭಾಗದ ರೈತರಿಗೆ ತೊಂದರೆಯಾಗಿದೆ. ಹೊಸ ಪೈಪುಗಳನ್ನು ಹಾಕಿ ಸದರಿ ಚಾನಲ್ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿದರು. 15 ದಿನಗಳಲ್ಲಿ ಬೇಡಿಕೆಗಳು ಈಡೇರದೆ ಹೋದಲ್ಲಿ ಕೈದಾಳೆ ರಸ್ತೆಯಲ್ಲಿ ಬೃಹತ್ ರಸ್ತೆ ತಡೆ ಚಳುವಳಿ ಮತ್ತು ಲೋಕಿಕೆರೆ ರಸ್ತೆಯಲ್ಲಿ ಯರನಾಗತಿಹಳ್ಳಿ ರಸ್ತೆ ಬಂದ್, ಕುರ್ಕಿ ಗ್ರಾಮದಲ್ಲಿ ಬೀರೂರು- ಬಾಡ ರಸ್ತೆಯನ್ನು ಬಂದ್ ಮಾಡುವ ಚಳವಳಿಯನ್ನು ಏಕ ಕಾಲಕ್ಕೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
    ಮನವಿ ಸ್ವೀಕರಿಸಿದ ಇಲಾಖೆ ಅಭಿಯಂತರ ಮಂಜುನಾಥ್ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ ಮನೋಜ್ ಮಾತನಾಡಿ,ಕಳೆದ ವರ್ಷ ಸರ್ಕಾರದಿಂದ ನಾಲಾ ದುರಸ್ತಿಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಸಮಸ್ಯೆಗಳಿಗೆ ಕಾರಣವಾಗಿದೆ. ಅನೇಕ ವರ್ಷಗಳಿಂದ ನಾಲೆ ದುರಸ್ತಿಗೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರೂ ಅನುದಾನ ಬಿಡುಗಡೆಯಾಗಿಲ್ಲ. ಇದೀಗ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕೆ.ಎಸ್.ಬಸವಂತಪ್ಪ ಅವರಿಗೂ ಮನವಿ ಮಾಡಲಾಗಿದೆ ಎಂದರು.
    ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಈ ಸಂಬಂಧ ಇಂದು ಸಭೆ ಕರೆದಿದ್ದು, ಸಮಸ್ಯೆಗಳ ಕುರಿತು ಶಾಸಕರ ಗಮನ ಸೆಳೆದು ಅನುದಾನ ಬಿಡುಗಡೆಗೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಇಲಾಖೆ ಅಭಿಯಂತರ ಮಂಜುನಾಥ್ ಹೇಳಿದರು.
    ಪ್ರತಿಭಟನೆಯಲ್ಲಿ ಕೈದಾಳೆ ವಸಂತಕುಮಾರ್,ಯರವನಾಗತಿಹಳ್ಳಿ ಬಾಲಾಜಿ,ಮಂಜುನಾಥ್, ಕುರ್ಕಿ ಹನುಮಂತ,ಹಿರೇ ಮಲ್ಲನಹೊಳೆ ಚಿರಂಜೀವಿ,ಕುಕ್ಕುವಾಡ ಬಸವರಾಜ್ ಸೇರಿ ನೂರಾರು ರೈತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts