More

    ನಾಡಿದ್ದು ಪ್ರತ್ಯೇಕ ಸಭೆ ನಡೆಸಲು ನಿರ್ಧಾರ

    ಮುಂಡರಗಿ: ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ಶಾಲೆ ಕಟ್ಟಡಗಳ ದುರಸ್ತಿ ಕಾಮಗಾರಿಗೆ ಸಂಬಂಧಿಸಿದಂತೆ ಬುಧವಾರ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಿರುಸಿನ ಚರ್ಚೆ ನಡೆಯಿತು.

    ‘ತಾಲೂಕಿನಲ್ಲಿ 2019-20ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ವಿವಿಧ ಶಾಲೆ ಕಟ್ಟಡಗಳ ದುರಸ್ತಿ ಕಾಮಗಾರಿ ಸರಿಯಾಗಿಲ್ಲ. ದುರಸ್ತಿಗೆ ಅಂದಾಜು 1.11 ಕೋಟಿ ರೂ. ಅನುದಾನ ನೀಡಲಾಗಿದೆ. ಎಸ್​ಡಿಎಂಸಿ ಹಾಗೂ ಮುಖ್ಯಶಿಕ್ಷಕರೇ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಕಟ್ಟಡ ದುರಸ್ತಿ ಸಮಿತಿಗೆ ಸಂಬಂಧಿಸಿದ ನೀವೇಕೆ ಭೇಟಿ ನೀಡಿ ಪರಿಶೀಲಿಸುತ್ತಿಲ್ಲ’ ಎಂದು ಸದಸ್ಯ ರುದ್ರಗೌಡ ಪಾಟೀಲ ಅವರು ಜಿಪಂ ಉಪವಿಭಾಗದ ಎಇಇ ಡಿ. ರಮೇಶ ಅವರನ್ನು ಪ್ರಶ್ನಿಸಿದರು.

    ಪ್ರತಿಕ್ರಿಯಿಸಿದ ಎಇಇ, ‘ಅಂದಾಜು ವರದಿ ತಯಾರಿಸಿಕೊಟ್ಟ ನಂತರ ಆಯಾ ಶಾಲೆಯ ಮೇಲುಸ್ತುವಾರಿ ಸಮಿತಿ ಮತ್ತು ಮುಖ್ಯಶಿಕ್ಷಕರು ದುರಸ್ತಿ ಕಾರ್ಯ ಕೈಗೊಳ್ಳಲಿದ್ದಾರೆ. ದುರಸ್ತಿ ಕೈಗೊಂಡವರು ಹೇಳಿದರೆ ಪರಿಶೀಲಿಸಿ ಮಾಹಿತಿ ಪಡೆಯಲಾಗುವುದು. ಕೆಲಸ ಮಾಡುವವರು ನಮಗೆ ಹೇಳದೆ ಹೇಗೆ ಹೋಗಬೇಕು? ಎಂದು ಮರು ಪ್ರಶ್ನಿಸಿದರು.

    ಎಸ್ಟಿಮೆಂಟ್ ಪ್ರಕಾರ ಕೆಲಸ ಹೇಗೆ ನಡೆದಿದೆ ಎನ್ನುವುದನ್ನು ಪರಿಶೀಲಿಸಬೇಕು. ಸರ್ಕಾರದ ಅನುದಾನ ಸದುಪಯೋಗ ಆಗದಿದ್ದರೆ ಬಿಇಒ ನೇರ ಹೊಣೆಯಾಗಲಿದ್ದಾರೆ. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಬೇಕು ಎಂದು ರುದ್ರಗೌಡ ಪಾಟೀಲ ತಿಳಿಸಿದರು.

    ಪ್ರತಿಕ್ರಿಯಿಸಿದ ಇಒ ಎಸ್.ಎಸ್. ಕಲ್ಮನಿ ಅವರು ಶನಿವಾರ ಶಾಲೆ ಕಟ್ಟಡ ದುರಸ್ತಿ ಕುರಿತು ಪ್ರತ್ಯೇಕ ಸಭೆ ನಡೆಸಲಾಗುವುದು. ಬಿಇಒ, ಜಿಪಂ ಎಇಇ ಭಾಗವಹಿಸಬೇಕು ಎಂದರು.

    ಆರೋಗ್ಯ ಇಲಾಖೆ: ಡಂಬಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್​ಗಳ ಹುದ್ದೆ ಖಾಲಿ ಇದ್ದು ಜನರಿಗೆ ತೊಂದರೆಯಾಗಿದೆ. ತಕ್ಷಣ ಸಿಬ್ಬಂದಿ ನೇಮಿಸಬೇಕು ಎಂದು ಅಧ್ಯಕ್ಷೆ ರೇಣುಕಾ ಕೊರ್ಲಹಳ್ಳಿ ಅವರು ಡಾ. ರಾಜೀವ ಅವರಿಗೆ ಸೂಚಿಸಿದರು.

    ಕರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಮನೆಮನೆಗೆ ಭೇಟಿ ನೀಡುವ ಆಶಾ ಕಾರ್ಯಕರ್ತೆಯರಿಗೆ ಸ್ಯಾನಿಟೈಸರ್, ಗ್ಲೌಸ್, ಮಾಸ್ಕ್ ವಿತರಿಸುತ್ತಿಲ್ಲ. ಆರೋಗ್ಯ ಇಲಾಖೆಯಿಂದ ತಕ್ಷಣ ಅವರಿಗೆ ಸೌಲಭ್ಯ ಒದಗಿಸಬೇಕು ಎಂದು ಕುಸುಮಾ ಮೇಟಿ ಹೇಳಿದರು.

    ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಮಾತನಾಡಿ, ಸಮರ್ಪಕವಾಗಿ ಯೂರಿಯಾ ಗೊಬ್ಬರ ಪೂರೈಸಲು ಕ್ರಮ ವಹಿಸಲಾಗಿದೆ ಎಂದರು.

    ವಿವಿಧ ಇಲಾಖೆ ಅಧಿಕಾರಿಗಳು ವರದಿ ನೀಡಿದರು. ತಾ.ಪಂ. ಉಪಾಧ್ಯಕ್ಷೆ ಹೇಮಾವತಿ ಕನ್ನಾರಿ, ಸದಸ್ಯರಾದ ರುದ್ರಪ್ಪ ಬಡಿಗೇರ, ಪುಷ್ಪಾ ಪಾಟೀಲ, ಲಲಿತಾ ಎಲಿಗಾರ, ಭರಮಪ್ಪ ನಾಗನೂರ, ಬಸಪ್ಪ ಮಲ್ಲನಾಯ್ಕರ, ತಿಪ್ಪವ್ವ ಕಾರಬಾರಿ, ತಾ.ಪಂ. ಯೋಜನಾ ನಿರ್ದೇಶಕ ಎಂ.ಎಸ್. ಕೊರ್ಲಹಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts