More

    ನಾಡಿಗಾಗಿ ಒಗ್ಗಟ್ಟಿನ ಹೋರಾಟ ಅಗತ್ಯ

    ಗೋಕಾಕ/ಬೆಟಗೇರಿ: ಬೆಳಗಾವಿ ಎಂದೆಂದಿಗೂ ನಮ್ಮದೇ. ಗಡಿ ವಿವಾದ ಮುಗಿದ ಅಧ್ಯಾಯ. ಪ್ರತಿ ಚುನಾವಣೆ ಬಂದಾಗೊಮ್ಮೆ ಅನಾವಶ್ಯಕವಾಗಿ ಗಡಿ ಖ್ಯಾತೆ ತೆಗೆಯುತ್ತಿರುವವರಿಗೆ ಕನ್ನಡಿಗರಾದ ನಾವು ತಕ್ಕ ಉತ್ತರ ನೀಡುತ್ತಿದ್ದೇವೆ. ಕನ್ನಡ ನೆಲ, ಜಲ, ಭಾಷೆ ಸಮಸ್ಯೆಗಳು ಎದುರಾದಾಗ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿ ಕನ್ನಡತನ ಮೆರೆಯಬೇಕಾಗಿದೆ ಎಂದು ಸರ್ವಾಧ್ಯಕ್ಷ ಈಶ್ವರಚಂದ್ರ ಬೆಟಗೇರಿ ಹೇಳಿದರು.

    ತಾಲೂಕಿನ ಬೆಟಗೇರಿ ಗ್ರಾಮದ ವಿ.ವಿ. ದೇಯನ್ನವರ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗೋಕಾಕ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೋಕಾವಿ ಪರಿಸರವು ಸಾಹಿತಿಗಳ ಸ್ವರ್ಗ. ಕಲಾವಿದರ ನೆಲೆವೀಡು. ಸಂಸ್ಕೃತಿ, ವಿದ್ವತ್ ಪರಂಪರೆಗೆ ಸಾಕ್ಷಿಯಾಗಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಕುಂದರನಾಡಿನ ಕೊಡುಗೆ ಅಪಾರವಾಗಿದೆ. ಪಂಚ ಪುಣ್ಯ ಧರ್ಮ ಪೀಠಗಳ ಸಂಗಮ ತಾಣವಾಗಿದೆ. ಸುಂದರ ನಿಸರ್ಗ ರಮಣೀಯ ಪಶು, ಪಕ್ಷಿಗಳ ಪರಂಧಾಮ. ಗೋಕಾವಿ ನಾಡಿನ ಭೌಗೋಳಿಕ, ಐತಿಹಾಸಿಕ ಹಿನ್ನೆಲೆ ಅಪಾರವಾಗಿದೆ. ಗೋಕಾವಿ ನಾಡು ಸುಂದರ ನೈಸರ್ಗಿಕ ಪರಿಸರದಲ್ಲಿ ನೆಲೆಗೊಂಡಿದ್ದು, ಗೋಕಾಕ ಸ್ವತಂತ್ರ ಜಿಲ್ಲೆಯಾಗುವ ಎಲ್ಲ ಅರ್ಹತೆಗಳನ್ನು ಪಡೆದುಕೊಂಡಿದೆ ಎಂದರು.

    ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಗಡಿ ವಿಷಯದಲ್ಲಿ ಮಹಾಜನ ವರದಿಯೇ ಅಂತಿಮವಾಗಿದೆ. ಈ ವಿಷಯದಲ್ಲಿ ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೋಸ್ಕರ ಬೆಳಗಾವಿ ನಮ್ಮದೆಂದು ವಾದಿಸುತ್ತಿದ್ದಾರೆ. ನಮ್ಮ ನೆಲವನ್ನು ಒಂದಿಂಚೂ ಯಾರಿಗೂ ಬಿಟ್ಟು ಕೊಡುವುದಿಲ್ಲ ಎಂದರು. ಮೂಡಲಗಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜನವರಿ ತಿಂಗಳಲ್ಲಿ ಏರ್ಪಡಿಸಲು ಈಗಾಗಲೇ ನಿಶ್ಚಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಸಮ್ಮೇಳನದ ದಿವ್ಯ ಸಾನ್ನಿಧ್ಯವನ್ನು ಗೋಕಾಕದ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಸುಣಧೋಳಿಯ ಶಿವಾನಂದ ಸ್ವಾಮೀಜಿ ವಹಿಸಿದ್ದರು. ನಿಕಟಪೂರ್ವ ಸರ್ವಾಧ್ಯಕ್ಷ ಡಾ.ಸಿ.ಕೆ. ನಾವಲಗಿ ಅವರು 6ನೇ ಸಮ್ಮೇಳನಾಧ್ಯಕ್ಷ ಈಶ್ವರಚಂದ್ರ ಬೆಟಗೇರಿ ಅವರಿಗೆ ಧ್ವಜ ಹಸ್ತಾಂತರಿಸಿದರು.

    ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹಾಗೂ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿದರು. ಗೋಕಾಕ ತಾಲೂಕು ಕಸಾಪ ಅಧ್ಯಕ್ಷೆ ಭಾರತಿ ಮದಭಾವಿ, ನಿಕಟಪೂರ್ವ ಕಸಾಪ ಅಧ್ಯಕ್ಷ ಮಹಾಂತೇಶ ತಾಂವಶಿ, ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ಬೆಟಗೇರಿ ಗ್ರಾಪಂ ಅಧ್ಯಕ್ಷೆ ಸಾಂವಕ್ಕ ಬಾನಸಿ, ಉಪಾಧ್ಯಕ್ಷ ಶಿವನಪ್ಪ ಮಾಳೇದ, ಕೆಎಲ್‌ಇ ನಿರ್ದೇಶಕ ಜಯಾನಂದ ಮುನವಳ್ಳಿ, ಶ್ಯಾಮಾನಂದ ಪೂಜೇರಿ, ತಾಪಂ ಇಒ ಮುರಳೀಧರ ದೇಶಪಾಂಡೆ, ಕ್ಷೇತ್ರ ಶಿಕ್ಷಣಾಧಿಕಾರಿಗಲಾದ ಅಜಿತ ಮನ್ನಿಕೇರಿ, ಜಿ.ಬಿ. ಬಳಗಾರ, ಸಾಹಿತಿಗಳಾದ ಪ್ರೊ. ಚಂದ್ರಶೇಖರ ಅಕ್ಕಿ, ಮಹಾಲಿಂಗ ಮಂಗಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts