More

    ನಶೆಮುಕ್ತ ಬೀದರ್ ಜಿಲ್ಲೆಗಾಗಿ ಅಭಿಯಾನ

    ಬೀದರ್: ನಶೆಮುಕ್ತ ಅಭಿಯಾನ ಸಮಿತಿಯು ಬೀದರ್ ಜಿಲ್ಲೆಯನ್ನು ನಶೆಮುಕ್ತಗೊಳಿಸುವ ದಿಸೆಯಲ್ಲಿ ಅಭಿಯಾನ ನಡೆಸಲು ನಿರ್ಧರಿಸಿದೆ.

    ಸಮಿತಿ ವತಿಯಿಂದ ನಗರದ ಕೆಇಬಿ ರಸ್ತೆಯಲ್ಲಿ ಇರುವ ಐಎಂಎಲ್ ಹಾಲ್ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂಘ-ಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ಗುಟ್ಕಾ, ಬೀಡಿ, ಸಿಗರೇಟು, ಮದ್ಯ ಸೇರಿದಂತೆ ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು.

    ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಪ್ರತಿದಿನ ಸುಮಾರು 3.5 ಕೋಟಿ ರೂ. ಮೊತ್ತದ ಮಾದಕ ವಸ್ತುಗಳ ಮಾರಾಟ ಆಗುತ್ತಿದೆ. ಮಾದಕ ವಸ್ತುಗಳ ಚಟದಿಂದ ಕೂಲಿ ಕಾರ್ಮಿಕರು, ಬಡವರ ಕುಟುಂಬಗಳು ಬೀದಿಗೆ ಬರುತ್ತಿವೆ. ಕ್ಯಾನ್ಸರ್​ನಂಥ ಮಾರಕ ರೋಗಕ್ಕೂ ಕಾರಣವಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರನ್ನು ಮಾದಕ ವಸ್ತುಗಳ ಚಟದಿಂದ ದೂರ ಇರಿಸಲು ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಜನಜಾಗೃತಿ ಅಗತ್ಯವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು.

    ನಶೆಮುಕ್ತ ಅಭಿಯಾನದ ಭಾಗವಾಗಿ ಇದೇ 25ರಂದು ನಗರದಲ್ಲಿ ಶಾಲೆ, ಕಾಲೇಜು, ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಗೆ ಕಾರ್ಯಾಗಾರ ಹಮ್ಮಿಕೊಳ್ಳಲು ನಿರ್ಣಯಿಸಲಾಗಿದೆ. ವೈದ್ಯರು, ಸಂಪನ್ಮೂಲ ವ್ಯಕ್ತಿಗಳು ಮಾದಕ ವಸ್ತುಗಳ ಬಳಕೆಯಿಂದ ವ್ಯಕ್ತಿಯ ಆರೋಗ್ಯ ಹಾಗೂ ಸಮಾಜದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷರೂ ಆದ ನಶೆಮುಕ್ತ ಅಭಿಯಾನ ಸಮಿತಿಯ ಡಾ.ಅಬ್ದುಲ್ ಖದೀರ್ ತಿಳಿಸಿದರು.

    ಗುಟ್ಕಾ ಹಾಗೂ ಇತರ ಮಾದಕ ವಸ್ತುಗಳ ಚಟ ತ್ಯಜಿಸುವ ಹಾಗೂ ಮಾರಾಟವನ್ನು ಕೈಬಿಡುವ ವ್ಯಕ್ತಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಗುವುದು. ಹೀಗೆ ಕಾಲನಿ, ಗ್ರಾಮ, ಪಟ್ಟಣ, ನಗರಗಳು ನಶೆಮುಕ್ತವಾದರೆ ಜಿಲ್ಲೆ ತಾನಾಗಿಯೇ ನಶೆಮುಕ್ತವಾಗಲಿದೆ ಎಂದು ತಿಳಿಸಿದರು.

    ಸಭೆಯಲ್ಲಿ ಪಾಲ್ಗೊಂಡವರಿಗೆ ಮಾದಕ ವಸ್ತುಗಳನ್ನು ಬಳಸುವುದಿಲ್ಲ ಹಾಗೂ ಅವುಗಳ ಬಗ್ಗೆ ಕುಟುಂಬದ ಸದಸ್ಯರು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರತಿಜ್ಞೆ ಬೋಧಿಸಲಾಯಿತು.

    ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸುನಂದಾ ಬಹೆನ್​ಜಿ, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ, ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ್, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಶಿವಕುಮಾರ ಯಲಾಲ್, ವಿಜಡಂ ಕಾಲೇಜು ಕಾರ್ಯದರ್ಶಿ ಮಹ್ಮದ್ ಆಸಿಫೊದ್ದೀನ್, ಐಎಂಎ ಬೀದರ್ ಘಟಕದ ಅಧ್ಯಕ್ಷ ಡಾ.ವಿನೋದ ಸಾವಳಗಿ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಪ್ರಮುಖರಾದ ಗುರಮ್ಮ ಸಿದ್ಧಾರಡ್ಡಿ, ಎನ್.ಆರ್.ವರ್ಮಾ, ರೇವಣಸಿದ್ದಪ್ಪ ಜಲಾದೆ, ಡಾ.ಜಗನ್ನಾಥ ಹೆಬ್ಬಾಳೆ, ಮನ್ಸೂರ್ ಖಾದ್ರಿ, ಡಾ.ಸುಭಾಷ ಕರ್ಪೂರ್, ಶರಣಪ್ಪ ಮಿಠಾರೆ, ಕಾಶೀನಾಥ ಪಾಟೀಲ್, ಶಿವಕುಮಾರ ಕಟ್ಟೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts