More

    ನವೆಂಬರ್​ನಿಂದ ಐಎಲ್​ಎಸ್ ಕಾರ್ಯಾರಂಭ

    ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹವಾಮಾನ ವೈಪರೀತ್ಯದ ಸಂದರ್ಭದಲ್ಲೂ ಸರಳವಾಗಿ ವಿಮಾನ ಲ್ಯಾಂಡಿಂಗ್ ಮಾಡಲು ಸಹಕಾರಿಯಾಗುವ ಇನ್ಸ್​ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಂ (ಐಎಲ್​ಎಸ್) ಅಳವಡಿಕೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ನವೆಂಬರ್​ನಿಂದ ಕಾರ್ಯಾರಂಭ ಮಾಡಲಿದೆ.

    ವಿಮಾನ ನಿಲ್ದಾಣದ ಹೊಸ ಟರ್ವಿುನಲ್ ಉದ್ಘಾಟನೆಯಾದ ಬಳಿಕ ಹೊಸ ಹೊಸ ತಂತ್ರಜ್ಞಾನ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಇದೀಗ ಐಎಲ್​ಎಸ್ ಅಳವಡಿಕೆ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಜನವರಿಯಲ್ಲಿ ಐಎಲ್​ಎಸ್ ಕಾಮಗಾರಿ ಆರಂಭಿಸಲಾಗಿದ್ದು, ನಿಗದಿಯಂತೆ ಮಾರ್ಚ್, ಏಪ್ರಿಲ್​ನಲ್ಲಿ ಕಾರ್ಯಾರಂಭ ಮಾಡಬೇಕಿತ್ತು. ಕರೊನಾ ಲಾಕ್​ಡೌನ್​ನಿಂದಾಗಿ ಕಾಮಗಾರಿ ವಿಳಂಬವಾಯಿತು. ಸದ್ಯ ಐಎಲ್​ಎಸ್ ತಾಂತ್ರಿಕ ಸಾಮಗ್ರಿಯ ಶೆಡ್, ಟವರ್ ಅಳವಡಿಕೆ ಕಾಮಗಾರಿ ಮುಕ್ತಾಯವಾಗಿದ್ದು, ನವೆಂಬರ್​ನಲ್ಲಿ ಕಾರ್ಯಾರಂಭವಾಗಲಿದೆ.

    ಮಳೆಗಾಲ, ಚಳಿಗಾಲ ಸಂದರ್ಭದಲ್ಲಿ ಹವಾಮಾನ ವೈಪರೀತ್ಯ ಉಂಟಾದ ಸಂದರ್ಭದಲ್ಲೂ ಸುಲಭವಾಗಿ ವಿಮಾನ ಲ್ಯಾಂಡಿಂಗ್​ಗೆ ಐಎಲ್​ಎಸ್ ಸಹಕಾರಿಯಾಗಲಿದೆ. ಮೋಡಗಳು ಉಂಟಾದಾಗ, ವಿಪರೀತ ಮಳೆ ಉಂಟಾಗಿ ಹವಾಮಾನ ವೈಪರೀತ್ಯ ಉಂಟಾದರೆ ರನ್​ವೇ ಗೋಚರ ಆಗುವವರೆಗೂ ವಿಮಾನ ಲ್ಯಾಂಡಿಂಗ್​ಗೆ ಏರ್ ಟ್ರಾಫಿಕ್ ಕಂಟ್ರೋಲ್ ರೂಂ (ಎಟಿಸಿ) ಅವಕಾಶ ನೀಡುವುದಿಲ್ಲ. ಆಗ ವಿಮಾನ ಆಕಾಶದಲ್ಲೇ ಗಿರಕಿ ಹೊಡೆಯಬೇಕಾಗುತ್ತದೆ. ಈ ರೀತಿ ಹಲವು ಬಾರಿ ವಿಮಾನಗಳು ಆಕಾಶದಲ್ಲೇ ಗಿರಕಿ ಹೊಡೆದ ಉದಾಹರಣೆಗಳಿವೆ. ಈ ಸಮಸ್ಯೆ ನಿವಾರಣೆಗೆಂದೇ ಐಎಲ್​ಎಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

    ವಿಮಾನ ನಿಲ್ದಾಣದಲ್ಲಿ ಐಎಲ್​ಎಸ್ ನಿರ್ಮಾಣ ಕಾಮಗಾರಿ ಭಾಗಶಃ ಮುಕ್ತಾಯವಾಗಿದ್ದು, ಕೊನೆಯ ಹಂತದ ಕೆಲಸಗಳು ನಡೆದಿವೆ. ನವೆಂಬರ್​ನಲ್ಲಿ ಕಾರ್ಯಾರಂಭ ಮಾಡಲಿದೆ. ಇದರಿಂದ ಎಂತಹ ಹವಾಮಾನ ವೈಪರೀತ್ಯ ಇದ್ದರೂ ಸುಲಭವಾಗಿ ವಿಮಾನ ಲ್ಯಾಂಡಿಂಗ್ ಮಾಡಬಹುದಾಗಿದೆ.
    | ಪ್ರಮೋದ ಕುಮಾರ ಠಾಕರೆ ನಿರ್ದೇಶಕ, ಹುಬ್ಬಳ್ಳಿ ವಿಮಾನ ನಿಲ್ದಾಣ

    ಐಎಲ್​ಎಸ್ ಕಾರ್ಯವೈಖರಿ ಭಿನ್ನ
    ಐಎಲ್​ಎಸ್ ನೆಲಮಟ್ಟದಿಂದ ಕಾರ್ಯನಿರ್ವಹಿಸುವ ರೇಡಾರ್ ಆಧರಿತ ತಂತ್ರಜ್ಞಾನವಾಗಿದೆ. ರನ್​ವೇ ಬಳಿ ಒಂದು ಶೆಡ್ ನಿರ್ವಿುಸಲಾಗಿದೆ. ಇದು ಹವಾಮಾನ ವೈಪರೀತ್ಯದ ಸಂದರ್ಭದಲ್ಲೂ ವಿಮಾನ ರನ್​ವೇನಲ್ಲಿ ಲ್ಯಾಂಡ್ ಆಗುವಂತೆ ತರಂಗ ಸಂದೇಶ ರವಾನಿಸುತ್ತದೆ. ಮತ್ತೊಂದು ರನ್ ವೇ ಪಕ್ಕದಲ್ಲಿ ಸ್ಥಾಪಿಸಲಾದ ತರಂಗ ಸ್ತಂಭಗಳು (ಆಂಟೆನಾ) ವಿಮಾನ ರನ್​ವೇ ಮಧ್ಯಭಾಗಕ್ಕೆ ವಿಮಾನ ಹೋಗುವಂತೆ ಲೈಟಿಂಗ್, ತರಂಗ ಸಂದೇಶ ರವಾನಿಸುತ್ತ ಪೈಲಟ್​ಗೆ ಸಹಕರಿಸುತ್ತವೆ. ಆಗಸದಿಂದ ರನ್​ವೇ ಕಾಣದಿದ್ದರೂ ತರಂಗಗಳ ಸಹಾಯದಿಂದ ವಿಮಾನಗಳನ್ನು ಲ್ಯಾಂಡ್ ಮಾಡಬಹುದಾಗಿದೆ. ಒಂದು ವೇಳೆ ವಿಮಾನ ಪಕ್ಕಕ್ಕೆ ಸರಿದು ಆಂಟಿನಾಕ್ಕೆ ತಾಗಿದರೂ ಲಘುವಾಗಿರುವ ಕಾರಣ ಸುಲಭವಾಗಿ ಕೆಳಗೆ ಬೀಳುತ್ತವೆ. ವಿಮಾನಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts