More

    ನರೇಗಾ ಕಾರ್ಮಿಕರಿಗೆ ರಿಯಾಯಿತಿ –

    ಬೆಳಗಾವಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯ ಕೂಲಿ ಕಾರ್ಮಿಕರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿಹಿ ಸುದ್ದಿ ನೀಡಿದೆ.

    ಬಿಸಿಲಿನ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಈ ವರ್ಷವೂ ಕೆಲಸದಲ್ಲಿ ಶೇ.30 ರಿಯಾಯಿತಿ ನೀಡಿ ಇಲಾಖೆ ಆದೇಶ ಹೊರಡಿಸಿದೆ.

    ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸೂರ್ಯ ತನ್ನ ಪ್ರಖರತೆ ಮೂಲಕ ಪ್ರತಾಪ ಮೆರೆಯುತ್ತಿದ್ದಾನೆ. ಹೀಗಾಗಿ, ತಾಪಮಾನ ಹೆಚ್ಚಾಗಿರುವುದರಿಂದ ಬೆಳಗಾವಿ ಹಾಗೂ ಕಲಬುರಗಿ ವಿಭಾಗದ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುವ ನೋಂದಾಯಿತ ನರೇಗಾ ಕೂಲಿ ಕಾರ್ಮಿಕರನ್ನು ಬಿಸಿಲಿನ ತಾಪದಿಂದ ತಪ್ಪಿಸಲು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗಿದೆ.

    ಉಷ್ಣಾಂಶ ಏರಿಕೆಯಾಗುತ್ತಿರುವುದರಿಂದ ಕಾಮಗಾರಿಗಳ ಕೆಲಸ ನಿರ್ವಹಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ.30 ಹಾಗೂ ಜೂನ್‌ನಲ್ಲಿ ಶೇ.20 ರಿಯಾಯಿತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಉತ್ತರ ಕರ್ನಾಟಕದ 14 ಜಿಲ್ಲೆಗಳಿಗೆ ನೂತನ ಸೌಲಭ್ಯ ಅನ್ವಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


    ಮೂಲ ಸೌಲಭ್ಯ: ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಕೂಲಿ ಕಾರ್ಮಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ನೆರಳು, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮುಂತಾದ ಮೂಲ ಸೌಲಭ್ಯಗಳನ್ನು ಕಡ್ಡಾಯವಾಗಿ ಕಲ್ಪಿಸಬೇಕಿದೆ. ಈ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಜಿಪಂ ಮುಖ್ಯ ಕಾರ್ಯ ನಿರ್ವಾಹಕರಿಗೆ ಆದೇಶಿಸಲಾಗಿದೆ.

    ಕಾಮಗಾರಿ ನಿರ್ವಹಿಸುವ ಕೂಲಿ ಕಾರ್ಮಿಕರಿಗೆ ಕೆಲಸದ ಪ್ರಮಾಣದಲ್ಲಿ ಶೇ.30 ರಿಯಾಯಿತಿ ನೀಡುವ ಕುರಿತಂತೆ ಇಲಾಖೆ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಆದೇಶ ನೀಡಿದೆ. ಬಿಸಿಲು ಜಾಸ್ತಿ ಇರುವುದರಿಂದ ನರೇಗಾ ಕೂಲಿ ಕಾರ್ಮಿಕರು ಶೇ.30 ಕೆಲಸ ಕಡಿಮೆ ಮಾಡಿದರೂ ಪೂರ್ಣ ಪ್ರಮಾಣದಲ್ಲಿ ಅವರಿಗೆ ಕೂಲಿ ಲಭ್ಯವಾಗಲಿದೆ. ಬೆಳಗ್ಗೆ 8 ಗಂಟೆಗೆ ಕಾಮಗಾರಿ ಆರಂಭಿಸಿ ಮಧ್ಯಾಹ್ನ 1 ಗಂಟೆಗೆ ಮುಗಿಸುತ್ತಾರೆ. ಬೇಸಿಗೆ ಕಾರಣ ದಿನಕ್ಕೆ ಒಮ್ಮೆ ಹಾಜರಾತಿ ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಬೇಸಿಗೆಯಲ್ಲಿ ಜಿಲ್ಲೆಯಲ್ಲಿ 35 ಡಿಗ್ರಿ ವರೆಗೆ ಉಷ್ಣಾಂಶ ದಾಖಲಾಗುತ್ತದೆ. ಈ ಅವಧಿಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಸಾಮಾನ್ಯವಾಗಿ ಕೆಲಸದಲ್ಲಿ ರಿಯಾಯಿತಿ ಇರುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸರ್ಕಾರ ನರೇಗಾ ಕೂಲಿ ಕಾರ್ಮಿಕರಿಗೆ ಶೇ.30 ವಿಶ್ರಾಂತಿ ರಿಯಾಯಿತಿ ನೀಡಿದೆ. ಕಳೆದ ವರ್ಷವೂ ಇತ್ತು. ಕಾರ್ಮಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಜಾಬ್ ಕಾರ್ಡ್ ಇಲ್ಲದವರು ಗ್ರಾಪಂಗೆ ಅರ್ಜಿ ಸಲ್ಲಿಸಬಹುದು.
    | ದರ್ಶನ ಎಚ್.ವಿ.
    ಜಿಪಂ ಸಿಇಒ, ಬೆಳಗಾವಿ

    ಬೇಸಿಗೆಯಲ್ಲಿ ಕೆಲಸ ಮಾಡಿದರೆ ಆಯಾಸವಾಗುತ್ತದೆ. ಬಿಸಿಲಿಗೆ ಮೈವೊಡ್ಡಿ ಕೆಲಸ ಮಾಡುವುದು ಬಲು ಕಷ್ಟ. ಕೆಲಸ ಮುಗಿಸಿ ಹೋಗಿ ಮಲಗಿದರೆ ಬೆಳಗ್ಗೆ ಏಳಲಾಗುವುದಿಲ್ಲ. ಸರ್ಕಾರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಿ, ಕೂಲಿಕಾರರ ಕಷ್ಟಕ್ಕೆ ಸ್ಪಂದಿಸಿದೆ.
    | ಮಲ್ಲಿಕಾರ್ಜುನ ವಡ್ಡರ ನರೇಗಾ ಕೂಲಿ ಕಾರ್ಮಿಕ, ವಡಗಾವಿ

    | ಜಗದೀಶ ಹೊಂಬಳಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts