More

    ನರೇಗಾ ಕಾಮಗಾರಿಗೆ ಮಹಿಳೆಯರ ನಿರುತ್ಸಾಹ

    ರಾಣೆಬೆನ್ನೂರ: ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ಇದ್ದರೂ ರಾಜ್ಯದಲ್ಲಿ ನರೇಗಾ ಯೋಜನೆಯಡಿ ಮಹಿಳೆಯರು ಕೆಲಸದಲ್ಲಿ ತೊಡಗಲು ನಿರುತ್ಸಾಹ ತೋರುತ್ತಿದ್ದಾರೆ.

    ಹೀಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ ‘ಮಹಿಳಾ ಕಾಯಕೋತ್ಸವ’ ವಿಶೇಷ ಸಮೀಕ್ಷೆ ಮುಖೇನ ಮಹಿಳೆಯರಿಗೆ ನರೇಗಾ ಕೂಲಿ ಕಾಮಗಾರಿ ಬಗ್ಗೆ ಮಾಹಿತಿ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಲು ಮುಂದಾಗಿದೆ.

    ಎರಡು ಹಂತದಲ್ಲಿ ಸಮೀಕ್ಷೆ: ಯಾವ ಗ್ರಾಪಂನಲ್ಲಿ ನರೇಗಾದಡಿ ಕೂಲಿ ಮಾಡಲು ಬರುವ ಮಹಿಳೆಯರ ಸಂಖ್ಯೆ ಕಡಿಮೆಯಿದೆ ಎಂಬ ಮಾಹಿತಿ ಕಲೆ ಹಾಕಲು ತಂಡ ರಚಿಸಲಾಗಿದೆ. ಒಂದೊಂದು ತಂಡಕ್ಕೆ 10 ಗ್ರಾಪಂಗಳನ್ನು ಆಯ್ಕೆ ಮಾಡಿಕೊಳ್ಳಲು ಸರ್ಕಾರ ಸೂಚಿಸಿದೆ. ಮಹಿಳಾ ಕಾಯಕೋತ್ಸವ ಅನುಷ್ಠಾನಗೊಳಿಸಲು ಆಯ್ಕೆ ಮಾಡಿದ ಪ್ರತಿ ಗ್ರಾಪಂಗೆ ಈಗಾಗಲೇ ಸರ್ಕಾರ 25 ಸಾವಿರ ರೂ. ಬಿಡುಗಡೆ ಮಾಡಿದೆ. 1ನೇ ಹಂತದಲ್ಲಿ 4 ಹಾಗೂ 2ನೇ ಹಂತದಲ್ಲಿ 6 ಸೇರಿ ಒಟ್ಟು 10 ಗ್ರಾಪಂನಲ್ಲಿ ಮಹಿಳಾ ಕಾಯಕೋತ್ಸವ ಸಮೀಕ್ಷೆ ನಡೆಸಲು ಸರ್ಕಾರ ಸೂಚಿಸಿದೆ. ಈಗಾಗಲೇ 1ನೇ ಹಂತದ ಸಮೀಕ್ಷೆಗೆ ಚಾಲನೆ ನೀಡಲಾಗಿದ್ದು, ಫೆ. 15ರವರೆಗೆ ನಡೆಯಲಿದೆ. 2ನೇ ಹಂತದ ಸಮೀಕ್ಷೆ ಫೆ. 15ರಿಂದ ಮಾರ್ಚ್ 15ರವರೆಗೆ ನಡೆಯಲಿದೆ.

    ಶೇ. 15ರಷ್ಟು ಸಾಧನೆಯ ಗುರಿ: ಪ್ರತಿ ಗ್ರಾಪಂನಲ್ಲಿ ಮಹಿಳಾ ಕೂಲಿ ಕಾರ್ವಿುಕರ ತೊಡಗಿಕೊಳ್ಳುವಿಕೆಯ ಪ್ರಮಾಣ ಶೇ. 10ರಿಂದ 15ರಷ್ಟು ಗುರಿ ಸಾಧನೆ ಮಾಡಬೇಕಿದೆ. ಈ ಜವಾಬ್ದಾರಿಯನ್ನು ಆಯಾ ತಾಪಂ ಇಒ ಹಾಗೂ ಗ್ರಾಪಂ ಪಿಡಿಒ ಅವರಿಗೆ ವಹಿಸಲಾಗಿದೆ. ಅಧಿಕಾರಿಗಳು ಗ್ರಾಪಂ ವ್ಯಾಪ್ತಿಯ ಮಹಿಳಾ ಪ್ರಧಾನ ಕುಟುಂಬಗಳನ್ನು ಗುರುತಿಸಬೇಕು. ಅವರ ಬಳಿ ತೆರಳಿ ನರೇಗಾ ಕೂಲಿಯ ಬಗ್ಗೆ ತಿಳಿಹೇಳಬೇಕು. ಮಹಿಳಾ ಸ್ವ-ಸಹಾಯ ಸಂಘಗಳು ಭಾಗವಹಿಸುವಿಕೆಗೆ ಪ್ರೋತ್ಸಾಹ ನೀಡಬೇಕು. ಕೂಲಿಗಾಗಿ ಬರುವವರಿಗೆ ಜಾಬ್ ಕಾರ್ಡ್ ಮಾಡಿಕೊಡಬೇಕಿದೆ.

    ರಾಣೆಬೆನ್ನೂರಿನಲ್ಲಿ 10 ಗ್ರಾಪಂ: ಮಾಕನೂರ, ಮೇಡ್ಲೇರಿ, ದೇವರಗುಡ್ಡ, ಬೇಲೂರು ಗ್ರಾಪಂನಲ್ಲಿ ಅತಿ ಕಡಿಮೆ ಮಹಿಳಾ ಕೂಲಿ ಕಾರ್ವಿುಕರು ನರೇಗಾ ಕಾಮಗಾರಿಗೆ ಬರುತ್ತಿದ್ದು, 4 ಗ್ರಾಪಂಗಳನ್ನು 1ನೇ ಹಂತದ ಸಮೀಕ್ಷೆಗೆ ಆಯ್ಕೆ ಮಾಡಲಾಗಿದೆ. ಹನುಮಾಪುರ, ಅಸುಂಡಿ, ಅರೇಮಲ್ಲಾಪುರ, ಗುಡಗೂರ, ಸುಣಕಲ್ಲಬಿದರಿ, ಕಾಕೋಳ ಗ್ರಾಪಂಗಳನ್ನು 2ನೇ ಹಂತದ ಸಮೀಕ್ಷೆಗೆ ಆಯ್ಕೆ ಮಾಡಲಾಗಿದೆ.

    ಆದ್ಯತೆ ಮೇರೆಗೆ ಕೆಲಸ: ಈ ಹಿಂದೆ ರೈತರ ಬೇಡಿಕೆಗೆ ಅನುಗುಣವಾಗಿ ನರೇಗಾದಡಿ ಕಾಮಗಾರಿ ಮಾಡಲಾಗುತ್ತಿತ್ತು. ಇದೀಗ ಮಹಿಳೆಯರಿಗೆ ಆದ್ಯತೆ ನೀಡಿ ಕಾಮಗಾರಿ ಮಾಡಲು ಉದ್ದೇಶಿಸಲಾಗಿದೆ. ಮಹಿಳೆಯರು ಸೂಚಿಸುವ ಅಭಿವೃದ್ಧಿ ಕಾಮಗಾರಿಯನ್ನು ಅಧಿಕಾರಿಗಳು ಕೈಗೆತ್ತಿಕೊಳ್ಳುತ್ತಾರೆ.

    ಶೇ. 10ರಿಂದ 15ರಷ್ಟು ಕೆಲಸಕ್ಕೆ ಬರುವ ಗುರಿಯೊಂದಿಗೆ ಸಮೀಕ್ಷೆ ಹಮ್ಮಿಕೊಳ್ಳಲು ಇಲಾಖೆ ಆದೇಶಿಸಿದೆ. ಆ ಪ್ರಕಾರ ಗ್ರಾಪಂ ಪಿಡಿಒ, ಸಿಬ್ಬಂದಿ ಮತ್ತು ನರೇಗಾ ಸಿಬ್ಬಂದಿ ಸೇರಿ ಸಮೀಕ್ಷೆ ಆರಂಭಿಸಿದ್ದೇವೆ. ಮಹಿಳೆ ಯರನ್ನು ಮುಖ್ಯವಾಹಿನಿಗೆ ತರುವುದು ಯೋಜನೆಯ ಉದ್ದೇಶವಾಗಿದೆ. ಜತೆಗೆ ಮಹಿಳೆಯರು ಬೇರೆ ಬೇರೆ ಊರುಗಳಿಗೆ ತೆರಳಿ ಕೆಲಸ ಮಾಡುವುದು ತಪ್ಪಲಿದೆ.
    | ಟಿ.ಆರ್. ಮಲ್ಲಾಡದ ತಾಪಂ ಇಒ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts