More

    `ನಮ್ಮ ಕಿಡ್ನಿ ಮಾರಿಯಾದರೂ ಜನರ ಕಷ್ಟಕ್ಕೆ ಸ್ಪಂದಿಸಿ’

    ಕೊರಟಗೆರೆ: ‘ನಮ್ಮ ಕಿಡ್ನಿ ಮಾರಾಟಕ್ಕಿವೆ, ಇವುಗಳನ್ನು ಮಾರಿಯಾದರೂ ನಮ್ಮ ಕ್ಷೇತ್ರದ ಅಸಹಾಯಕ, ನಿರ್ಗತಿಕ ಜನರ ಕೋವಿಡ್ ಸಂಕಷ್ಟಕ್ಕೆ ಸಹಾಯ ಮಾಡಿ’ ಎಂದು ಡಾ. ಎಪಿಜೆ ಅಬ್ದುಲ್ ಕಲಾಂ ಕೋವಿಡ್ ಕೇರ್ ಹೆಲ್ಪಿಂಗ್ ಯೂತ್ ಸೆಂಟರ್ ಸಂಘಟನೆ ಅಧ್ಯಕ್ಷ ನಯಾಜ್ ಅಹಮದ್ ಮತ್ತು 20 ಮುಸ್ಲಿಂ ಯುವಕರು ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕ್ಷೇತ್ರದ ಶಾಸಕರಿಗೆ ಮನವಿ ಮಾಡಿದ್ದಾರೆ.

    ‘ಕರೊನಾ ಹಿನ್ನೆಲೆಯಲ್ಲಿ ಹಲವರು ವಿವಿಧ ರೀತಿಯ ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರ, ಜನಪ್ರತಿನಿಧಿಗಳು, ಹಣವಂತರು ಯಾರೊಬ್ಬರೂ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ, ನಾವೂ ಬಡವರೇ, ನಾವು ಕೇವಲ ಒಬ್ಬರಿಗೋ ಇಬ್ಬರಿಗೋ ಸಹಾಯ ಮಾಡಬಹುದು. ಆದರೆ ಕ್ಷೇತ್ರದಲ್ಲಿ ಇಂತಹ ಸಾವಿರಾರು ಜನರಿದ್ದಾರೆ, ಇವರೆಲ್ಲರಿಗೂ ಸಹಾಯ ಮಾಡುವ ಚೈತನ್ಯ ನಮಗಿಲ್ಲ. ನಿಮ್ಮಬಳಿ ಹಣವಿದೆ, ಉಪಯೋಗಿಸುತ್ತಿಲ್ಲ, ನಮ್ಮ ಬಳಿ ಹಣವಿಲ್ಲ, ಆದರೆ ಕಿಡ್ನಿ ಇದೆ. ಇದನ್ನೇ ಮಾರಿ ಅಸಹಾಯಕರಿಗೆ ಸಹಾಯ ಮಾಡುತ್ತೇವೆ. ಆದ್ದರಿಂದ ನಾವು ನಮ್ಮ ಕಿಡ್ನಿಗಳನ್ನು ಮಾರಾಟಕ್ಕಿಟ್ಟಿದ್ದೇವೆ. ನಮ್ಮ ಕ್ಷೇತ್ರದ ಜನರ ಕಷ್ಟ ಅರ್ಥ ಮಾಡಿಕೊಂಡು ಕಿಡ್ನಿಯನ್ನು ಖರೀದಿಸಿ’ ಎನ್ನುವ ಮೂಲಕ ಕ್ಷೇತ್ರದ ಪರಿಸ್ಥಿತಿಯ ವಿಡಂಬನೆ ಮಾಡಿದ್ದಾರೆ.

    ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್ ಮೂಲಕ ಜನಪ್ರತಿನಿಧಿಗಳಿಗೆ ಮತ್ತು ಸಿರಿವಂತರಿಗೆ ತಿಳಿಸುವ ಪ್ರಯತ್ನವನ್ನು ತಂಡ ಮಾಡಿದೆ. ಈ ತಂಡದಲ್ಲಿ ಟಿ.ಎನ್ ತಬ್ರೇಜ್, ಮಹಮದ್ ಫಾರೂಕ್, ಮಹಮದ್ ಗೌಸ್, ರೆಹಮಾನ್, ರಾಹದಿಕ್ ಅಹಮದ್, ಯಾಜ್ ಅಹಮದ್, ವಾಸೀಂ ಅಕ್ರಂ ಮತ್ತಿತರರು ಇದ್ದಾರೆ.

    ಕ್ಷೇತ್ರದಲ್ಲಿ ಹಲವು ಅಸಂಘಟಿತ ಕಾರ್ಮಿಕರು, ದಿನಗೂಲಿ, ಗಾರ್ಮೆಂಟ್ಸ್ ನೌಕರರು ಸೇರಿ ಹಲವರು ಸಂಕಷ್ಟದಲ್ಲಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಮತ್ತು ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ನಮ್ಮ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ, ಇಲ್ಲವಾದಲ್ಲಿ ನಮ್ಮ ಕಿಡ್ನಿಗಳನ್ನು ಮಾರಿ ಅದರಿಂದ ಬರುವ ಹಣದಿಂದಲಾದರೂ ಎಲ್ಲರ ಕಷ್ಟಗಳಿಗೆ ಸ್ಪಂದಿಸಲಿ.
    ನಯಾಜ್ ಅಹಮದ್, ಅಧ್ಯಕ್ಷ ಡಾ. ಎಪಿಜೆ ಅಬ್ದುಲ್ ಕಲಾಂ ಕೋವಿಡ್ ಕೇರ್ ಹೆಲ್ಪಿಂಗ್ ಯೂತ್ ಸೆಂಟರ್ ಸಂಘಟನೆ, ಕೊರಟಗೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts