More

    ನಮ್ಮನ್ನು ರಾಜ್ಯಕ್ಕೆ ಕರೆಸಿಕೊಳ್ಳಿ ಪ್ಲೀಸ್…

    ಹುಬ್ಬಳ್ಳಿ: ವಿವಿಧ ಕೋರ್ಸ್​ಗಳ ಕೋಚಿಂಗ್ ಪಡೆಯಲೆಂದು ರಾಜಸ್ಥಾನದ ಕೋಟಾ ನಗರಕ್ಕೆ ತೆರಳಿರುವ ರಾಜ್ಯದ 130ರಷ್ಟು ವಿದ್ಯಾರ್ಥಿಗಳು ತೀವ್ರ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು, ತಮ್ಮನ್ನು ಕರ್ನಾಟಕಕ್ಕೆ ಕರೆಸಿಕೊಳ್ಳುವಂತೆ ವಿಡಿಯೋ ಸಂದೇಶದ ಮೂಲಕ ಅಂಗಲಾಚಿರುವುದು ವೈರಲ್ ಆಗಿದೆ.

    ದಕ್ಷಿಣ ರಾಜಸ್ಥಾನದ ಕೋಟಾ ನಗರದಲ್ಲಿ ಹಲವಾರು ಕೋಚಿಂಗ್ ಸೆಂಟರ್​ಗಳಿವೆ. ಹತ್ತಾರು ರಾಜ್ಯಗಳ ಹಲವು ಸಾವಿರ ವಿದ್ಯಾರ್ಥಿಗಳು ವಿವಿಧ ಪ್ರವೇಶ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಪ್ರತಿವರ್ಷವೂ ಅಲ್ಲಿಗೆ ತೆರಳುತ್ತಾರೆ. ಈ ಸಲ ರಾಜ್ಯದ 150ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹೋಗಿದ್ದು, 130ರಷ್ಟು ಜನ ಅಲ್ಲಿಯೇ ಸಿಲುಕಿಕೊಂಡಿದ್ದಾರೆ.

    ಲಾಕ್​ಡೌನ್​ನಿಂದಾಗಿ ಉತ್ತರ ಪ್ರದೇಶದ ಅಂದಾಜು 7500 ವಿದ್ಯಾರ್ಥಿಗಳು ಕೋಟಾ ನಗರದಲ್ಲಿ ತೊಂದರೆಗೀಡಾಗಿದ್ದರು. ಅವರ ಮೊರೆ ಕೇಳಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು 250 ಬಸ್​ಗಳನ್ನು ಕಳುಹಿಸಿ ಎಲ್ಲ ವಿದ್ಯಾರ್ಥಿಗಳನ್ನು ಉಚಿತವಾಗಿ ರಾಜ್ಯಕ್ಕೆ ಕರೆಸಿಕೊಂಡು ಅವರವರ ಊರಿಗೆ ತಲುಪಿಸಿದ್ದಾರೆ. ಅವರ ಈ ಕಾಳಜಿಯನ್ನು ಸ್ವತಃ ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಮುಕ್ತ ಕಂಠದಿಂದ ಹೊಗಳಿದ್ದಾರೆ. ಇತರ ಸರ್ಕಾರಗಳೂ ಕೋಟಾದಲ್ಲಿ ಸಿಲುಕಿರುವ ತಂತಮ್ಮ ರಾಜ್ಯದ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಎಂದು ಅವರು ಮನವಿ ಮಾಡಿದ್ದು ಅಸ್ಸೋಮ್ ಛತ್ತೀಸಗಡ ಹಾಗೂ ಗುಜರಾತ್ ಸರ್ಕಾರಗಳು ಸ್ಪಂದಿಸಿವೆ.

    ತಾವು ಉಳಿದುಕೊಂಡಿರುವ ಪಿಜಿಗಳ ಮಾಲೀಕರು ಸಹ ಕರೊನಾ ಭಯ ಕಾಡುತ್ತಿದೆ, ಹೇಗಾದರೂ ಊರಿಗೆ ಹೋಗಿ ಎಂಬರ್ಥದಲ್ಲಿ ಹೇಳುತ್ತಿದ್ದಾರೆ. ಊಟೋಪಚಾರವೂ ಸರಿಯಾಗಿ ಸಿಗುತ್ತಿಲ್ಲ. ಆದ್ದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಐದಾರು ಬಸ್ ಕಳುಹಿಸಿಕೊಟ್ಟು ತಮ್ಮನ್ನು ಕರೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.

    ಸಿಎಂ ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದ ವಿದ್ಯಾರ್ಥಿಗಳೂ ಕೋಟಾದಲ್ಲಿ ಸಿಲುಕಿದ್ದು, ಅವರ ಪಾಲಕರೂ ವಿಡಿಯೋ ಮೂಲಕ ಸರ್ಕಾರಕ್ಕೆ ವಿನಂತಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts