More

    ಸುನೀಲಕುಮಾರ್​ ನಡೆಸಿದ ಎರಡೂ ಸಂಧಾನ ಸಭೆ ವಿಫಲ

    ದುಡುಕಿನ ನಿರ್ಧಾರ ಬೇಡ- ಭಟ್​ಗೆ ಸಲಹೆ | ಬಿಜೆಪಿ ವರಿಷ್ಠರಿಗೆ ಮಾಹಿತಿ ರವಾನೆ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವರಿಷ್ಠರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಕೆ.ರಘುಪತಿ ಭಟ್​ ಅವರ ಮನೆಗೆ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲಕುಮಾರ್​ ಅವರು ಭಾನುವಾರ ಹಾಗೂ ಸೋಮವಾರವೂ ಆಗಮಿಸಿ ಸಭೆ ನಡೆಸಿದರು. ಭಟ್​ ಅವರ ಮನವೊಲಿಕೆಗೆ ಕಸರತ್ತು ನಡೆಸಿದರು. ಆದರೆ, ಅವರ ಸಂಧಾನ ಸಭೆ ಯಶ ಕಾಣದೆ ಮರಳಿದರು.

    ಈ ವೇಳೆ ಮಾಧ್ಯಮದವರೊಂದಿಗೆ ಸುನೀಲಕುಮಾರ್​ ಮಾತನಾಡಿ, ವಿಪ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗಬೇಕು ಎಂಬ ಭಾವನೆಯನ್ನು ನನ್ನ ಸ್ನೇಹಿತ, ಮಾಜಿ ಶಾಸಕರೂ ಆದ ರಘುಪತಿ ಭಟ್​ ರಾಜ್ಯದ ನಾಯಕರಲ್ಲಿ ಹಲವಾರು ಬಾರಿ ವ್ಯಕ್ತಪಡಿಸಿದ್ದಾರೆ. ಆದರೆ, ಈ ವಿಚಾರವಾಗಿ ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳದಂತೆ ಅವರ ಮನ ಒಲಿಸಲು ಎರಡು ದಿನದಿಂದ ಅವರ ಮನೆಗೆ ಬಂದಿದ್ದೇನೆ. ಸಾಕಷ್ಟು ಭಾವನೆಗಳನ್ನು ಅವರು ವ್ಯಕ್ತಪಡಿಸಿದ್ದಾರೆ. ಅವರ ಎಲ್ಲ ಭಾವನೆಗಳ ಜತೆ ನಾನೂ ಇದ್ದೇನೆ. ಆದರೆ, ಪಕ್ಷದ ವಿರುದ್ಧ ಅಥವಾ ಪಕ್ಷ ಬಿಟ್ಟು ತೆಗೆದುಕೊಳ್ಳುವ ನಿಮ್ಮ ನಿರ್ಣಯಯಕ್ಕೆ ನನ್ನ ಬೆಂಬಲ ಇಲ್ಲ ಎಂದೂ ಅವರಿಗೆ ಸ್ಪಷ್ಟಪಡಿಸಿದ್ದೇನೆ ಎಂದರು.

    ಸಲಹೆ ಸ್ವೀಕರಿಸಿಲ್ಲ

    ಈ ಹಿಂದೆ ವಿಧಾನಸಭೆಗೆ ಟಿಕೆಟ್​ ವಂಚಿತರಾದಾಗಲೂ ಸಹ ಅವರು ಪಕ್ಷಕ್ಕೆ ತೊಂದರೆಯಾಗುವ ಯಾವುದೇ ಕೆಲಸ ಮಾಡಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವಿಧಾನ ಪರಿಷತ್​ ಚುನಾವಣೆ ವಿಚಾರದಲ್ಲೂ ಸಹ ಪಕ್ಷದ ನಿಲುವಿಗೆ ಬದ್ಧರಾಗಿರುವಂತೆ ತಿಳಿಸಿದ್ದೇನೆ. ದುಡುಕಿನ ನಿರ್ಧಾರದಿಂದ ಒಳ್ಳೆಯದಾಗದು ಎಂದೂ ತಿಳಿಹೇಳಿದ್ದೇನೆ. ಆದರೆ, ಅವರು ಪೂರ್ಣ ಪ್ರಮಾಣದಲ್ಲಿ ನನ್ನ ಸಲಹೆ ಸ್ವೀಕರಿಸಿದಂತೆ ಕಂಡುಬಂದಿಲ್ಲ ಎಂದರು.

    ಇನ್ನೂ ಸಮಯ ಇದೆ. ಅವರು ಹೇಳಿದ ಅನೇಕ ಸಂಗತಿಯನ್ನು ಕೂಡಲೇ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಗಮನಕ್ಕೆ ತರುತ್ತೇನೆ. ಯಾವ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಬಹುದು ಎಂಬುದನ್ನೂ ವರಿಷ್ಠರಲ್ಲಿ ಚರ್ಚಿಸುತ್ತೇನೆ ಎಂದರು.

    ಅನಿವಾರ್ಯ ತೀರ್ಮಾನ

    ಟಿಕೆಟ್​ ಹಂಚಿಕೆ ಹಾಗೂ ಜೆಡಿಎಸ್​ ಜತೆಗಿನ ಹೊಂದಾಣಿಕೆಯಿಂದಾಗಿ ಕರಾವಳಿ ಭಾಗಕ್ಕೆ ತೊಂದರೆ ಆಗಿದೆ. ಕೆಲವೊಮ್ಮೆ ಅನಿವಾರ್ಯ ತೀರ್ಮಾನದಿಂದ ಹೀಗಾಗುತ್ತವೆ. ಆದರೆ, ಪಕ್ಷ ಒಮ್ಮೆ ನಿರ್ಧಾರ ತೆಗೆದುಕೊಂಡ ಬಳಿಕ ಮತ್ತೆ ಚರ್ಚೆ ಮಾಡುವುದು ಅನಗತ್ಯ. ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಲೋಕಸಭಾ ಚುನಾವಣೆ ಈಗಷ್ಟೇ ಮುಗಿದಿದೆ. ಮತ್ತೆ ಈ ಚುನಾವಣೆಗೆ ಕಾರ್ಯಕರ್ತರನ್ನು ಸಿದ್ಧಗೊಳಿಸಬೇಕಿದೆ ಎಂದು ತಿಳಿಸಿದ ಸುನೀಲ್​ಕುಮಾರ್​, ಭಟ್​ ಅವರ ಮನೆಯಿಂದ ತೆರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts