More

    ನಮಗೆ ಸೌಲಭ್ಯ ಕೊಡಿ, ವಿದೇಶಗಳಿಗೆ ಹೋಗಲ್ಲ- ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆ ರಾಜ್ಯಾಧ್ಯಕ್ಷ ಆರ್. ಪುನೀತ್‌ಕುಮಾರ್ ಹೇಳಿಕೆ

    ದಾವಣಗೆರೆ: ಹಕ್ಕಿಪಿಕ್ಕಿ ಅಲೆಮಾರಿ ಜನರಿಗೆ ಮನೆ, ಹಕ್ಕುಪತ್ರ, ಉಳುಮೆಗೆ ಜಮೀನು ಮೊದಲಾದ ಮೂಲ ಸೌಕರ್ಯ ಕಲ್ಪಿಸಬೇಕು. ಸಮಾಜಕ್ಕೆ ರಾಜಕೀಯ, ಸಾಮಾಜಿಕ ಪ್ರಾತಿನಿಧ್ಯ ನೀಡಬೇಕು ಎಂದು ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆ ರಾಜ್ಯಾಧ್ಯಕ್ಷ ಆರ್. ಪುನೀತ್‌ಕುಮಾರ್ ಆಗ್ರಹಿಸಿದರು.
    ಹಕ್ಕಿಪಿಕ್ಕಿ ಜನರು ಕೇವಲ ಸುಡಾನ್, ದಕ್ಷಿಣ ಆಫ್ರಿಕಾವಲ್ಲದೆ ಅಮೆರಿಕಾ, ಯುರೋಪ್ ರಾಷ್ಟ್ರಗಳಿಗೂ ಗಿಡಮೂಲಿಕೆ ವಹಿವಾಟು ಮಾಡಲು ತೆರಳುತ್ತಾರೆ. ನಮಗೆ ಭಾರತದಲ್ಲಿಯೇ ಬದುಕು ಕಟ್ಟಿಕೊಳ್ಳಲು ಸೌಲಭ್ಯ ಸಿಗುವಂತಾದರೆ ನಾವೇಕೆ ಅಲ್ಲಿಗೆ ಹೋಗಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
    ಚನ್ನಗಿರಿ ತಾಲ್ಲೂಕಿನ ಗೋಪನಾಳ್ ಹಾಗೂ ಅಸ್ತಾಪನಹಳ್ಳಿಯಿಂದ ಸುಡಾನ್‌ಗೆ ತೆರಳಿದ್ದವರು ಅಲ್ಲಿನ ಯುದ್ಧದ ಸಂಘರ್ಷದ ನಡುವೆ ಸಂಕಷ್ಟದಲ್ಲಿದ್ದರು. ಕೇಂದ್ರ ಸರ್ಕಾರ ಆಪರೇಷನ್ ಕಾವೇರಿ ಕಾರ್ಯಾಚರಣೆ ಮೂಲಕ ರಕ್ಷಿಸಿದೆ. ಬಹುತೇಕರು ಸ್ವದೇಶಕ್ಕೆ ಮರಳಿದ್ದಾರೆ.
    ನಮ್ಮ ಸಮುದಾಯದ ಜನರನ್ನು ರಕ್ಷಿಸಿದ ಕೇಂದ್ರ-ರಾಜ್ಯ ಸರ್ಕಾರಗಳಿಗೆ ಧನ್ಯವಾದ ಎಂದು ಹೇಳಿದರು.
    ರಾಜ್ಯದಲ್ಲಿ ಹಕ್ಕಿಪಿಕ್ಕಿ ಅಲೆಮಾರಿ ಸಮುದಾಯದವರು ಸುಮಾರು 4 ಲಕ್ಷ ಜನರಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ 3500 ಜನರಿದ್ದೇವೆ. ಸಮುದಾಯದ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೊಳಿಸಬೇಕು. ಗಿಡಮೂಲಿಕೆ ಔಷಧವನ್ನು ವಿದೇಶಗಳಿಗೆ ಹೋಗಿ ಮಾರಾಟ ಮಾಡಲು ಪರವಾನಗಿ ನೀಡಬೇಕು. ನಮ್ಮವರು ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದು ಬಿಟ್ಟರೆ ದೊಡ್ಡ ರಾಜಕೀಯ ಸ್ಥಾನಕ್ಕೆ ಏರಿಲ್ಲ. ಹೀಗಾಗಿ ನಮಗೂ ರಾಜಕೀಯ ಪ್ರಾತಿನೀಧ್ಯ ನೀಡಬೇಕು ಎಂದು ಆಗ್ರಹಿಸಿದರು.
    * ನಾವು ಜೀವಭಯದಲ್ಲಿದ್ದೆವು:
    ಸುಡಾನ್‌ನಲ್ಲಿ ಸೈನಿಕರು ಮತ್ತು ಅರೆಸೇನಾಪಡೆ ನಡುವಿನ ಸಂಘರ್ಷದಿಂದಾಗಿ ಅಲ್ಲಿಗೆ ತೆರಳಿದ್ದ ಭಾರತೀಯರು, ಕನ್ನಡಿಗರು ಜೀವಭಯದಲ್ಲಿದ್ದೆವು. ಆಗಾಗ್ಗೆ ಬಾಂಬ್, ಕ್ಷಿಪಣಿ ದಾಳಿ ಆಗುತ್ತಿದ್ದವು. ಅಲ್ಲಿ ಬಿದ್ದ ಹೆಣಗಳ ಮೇಲೆ ಅಲ್ಲಿಯವರೇ ಹಲ್ಲೆ ಮಾಡುವ ಸ್ಥಿತಿ ಕಾಣಬೇಕಾಯಿತು. ಬಿದ್ದ ಶವಗಳು ಅನೇಕ ದಿನದವರೆಗೆ ಅಲ್ಲಿಯೇ ಇರುತ್ತಿದ್ದವು ಎಂದು ತಾಯ್ನಡಿಗೆ ಮರಳಿದ ಗೋಪನಾಳ್‌ನ ನಂದುಮಾರ್ ಹೇಳಿಕೊಂಡರು.
    ಅಪಾರ್ಟ್‌ಮೆಂಟ್ ಮಾಲೀಕರ ಸಹಕಾರದೊಂದಿಗೆ ಮಾರುಕಟ್ಟೆಗೆ ಹೋಗಿ ಸಾಮಗ್ರಿ ತಂದು ಊಟ ಮಾಡುತ್ತಿದ್ದೆವು. ಹೊರಗೆ ಹೋದವರ ಮೊಬೈಲ್, ಹಣ ಸುಲಿಗೆ ಆಗಿರುತ್ತಿತ್ತು. ಅಂಗಡಿಗಳ ಮೇಲೆ ಲೂಟಿ ನಡೆಯುತ್ತಿತ್ತು. ಭಾರತದ ರಾಯಭಾರಿ ಕಚೇರಿಯ ನೆರವಿನಿಂದ ಗೋಪನಾಳ್- ಅಸ್ತಾಪನಹಳ್ಳಿಯ 30 ಜನರು ವಾಪಸಾಗಿದ್ದೇವೆ ಎಂದು ಹೇಳಿದರು.
    ಸುಡಾನ್‌ನಲ್ಲಿ ಸಿಲುಕಿದ್ದ 800ಕ್ಕೂ ಹೆಚ್ಚು ಕನ್ನಡಿಗರು ತಾಯ್ನಡಿಗೆ ಮರಳಿದ್ದಾರೆ. ಇನ್ನೂ 12 ಜನ ಕನ್ನಡಿಗರು ಅಲ್ಲಿದ್ದಾರೆ. ಕೆಲವೇ ದಿನಗಳಲ್ಲಿ ತವರು ತಲುಪಬಹುದು ಎಂದರು.
    ನಮ್ಮ ತಾಯಿ ಉಷಾ ಅಲ್ಲಿಯೇ ಇದ್ದಾರೆ ನಾಳೆ ಬರಬಹುದು ಎಂದು ಸುಡಾನ್‌ನಿಂದ ಬಂದ ಭವಾನಿ ಶಂಕರ್ ಹೇಳಿದರು. ಬಿ.ಸಾವಂತ್, ಹಾಗೂ ಭಾಸ್ಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts