More

    ನಮಗೆ ಮದ್ಯದ ಮಳಿಗೆ ಬೇಡ ದೇವ್ರು….ಶಾಲೆ- ಅಂಗನವಾಡಿ ಕೊಡಿ ಸಾಹೇಬ್ರ….ಬಡವರ ಜೀವ ಉಳಿಸಿ ಧಣಿ…..ಸರ್ಕಾರಕ್ಕೆ ಈ ಮಹಿಳೆಯರ ಕೂಗು ಕೇಳಿಸುವುದೇ?

    ವಿಜಯಪುರ: ನಮ್ಮೂರಿಗೆ ಶಾಲೆ ಕೊಡಿ ಸ್ವಾಮಿ, ಅಂಗನವಾಡಿ ಮಂಜೂರಿಸಿ, ಬಡವರಿಗೆ ಸೂರು ಕಲ್ಪಿಸಿ ಸಾಹೇಬ್ರ…..ಆದ್ರ ಈ ಸೆರೆ ಅಂಗಡಿ ಮಾತ್ರ ಬೇಡವೇ ಬೇಡ ದೇವ್ರು…..!
    ಹೀಗಂತ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಗೋಳು ತೋಡಿಕೊಂಡ ನೂರಾರು ಮಹಿಳೆಯರ ಸಮಸ್ಯೆಯಾದ್ರೂ ಏನಂತೀರಾ? ಇದು ಇಂಡಿ ತಾಲೂಕಿನ ಸಾಲೋಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ‌ ಗ್ರಾಮ ಪಂಚಾಯಿತಿ ಸದಸ್ಯರು, ಮಹಿಳಾ ಸಂಘಟನೆಗಳು ಹಾಗೂ ಸಹಕಾರಿ ಸಂಘದ ಸದಸ್ಯರು ತಮ್ಮೂರಿಗೆ ಸರ್ಕಾರಿ ಸ್ವಾಮ್ಯದ ಮದ್ಯದ ಮಳಿಗೆ ಬೇಡವೆಂದು ಹಠ ಹಿಡಿದರೂ ರಾಜಕೀಯ ಮೇಲಾಟಕ್ಕೆ ಮದ್ಯದ ಮಳಿಗೆ ಸ್ಥಾಪಿಸಲಾಗುತ್ತಿದೆ.
    ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ‌ ಅವರು ದುರುದ್ದೇಶಪೂರಿತವಾಗಿ ಎಂಎಸ್ ಐಎಲ್ ಮಳಿಗೆ ಸ್ಥಾಪಿಸಲು ಮುಂದಾಗಿದ್ದಾರೆಂದು ಗ್ರಾಮಸ್ಥರು ಆರೋಪಿಸಿದರು.
    ಶಾಲೆ,ಕಾಲೇಜು, ಅಂಗನವಾಡಿ ನಿರ್ಮಿಸದೇ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಸ್ವಾಮ್ಯದ ಮದ್ಯದ ಮಳಿಗೆ ಆರಂಭಿಸಲು ಮುಂದಾಗಿರುವ ಕ್ರಮ ಖಂಡನೀಯ.
    ಗ್ರಾಪಂ ಸದಸ್ಯರು ಠರಾವು ಮಂಡಿಸಿದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಸೌಲಭ್ಯ ಕೇಳಿದರೆ ನೀಡದ ಅಧಿಕಾರಿಗಳು ಸಾರಾಯಿ‌ ಮಳಿಗೆ ಸ್ಥಾಪಿಸಲು ಇನ್ನಿಲ್ಲದ ಮುತುವರ್ಜಿ ವಹಿಸಿರುವುದು ಖೇದಕರ ಎಂದು ಉಪಾಧ್ಯಕ್ಷೆ ಸುನಂದ ಕಲ್ಲಯ್ಯ ಹಿರೇಪಠ ಆಕ್ರೋಶ ಹೊರಹಾಕಿದರು.
    ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಡಳಿತ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿ ಶಾಸಕರ ವಿರುದ್ಧ ಘೋಷಣೆ ಕೂಗಿದ ಸದಸ್ಯರು ಬಳಿಕ ಎಡಿಸಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಿದರು.
    ಈ ವೇಳೆ ಗ್ರಾಪಂ ಅಧ್ಯಕ್ಷೆ ಅಂಬವ್ವ ರಾಮಗೊಂಡ ಖೈರಾವಕರ ಮಾತನಾಡಿ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಶಾಲೆ, ಅಂಗನವಾಡಿ ಸ್ಥಾಪಿಸಲು ಮುತುವರ್ಜಿ ತೋರದೆ ಎಂಎಸ್ ಐಎಲ್ ಮಳಿಗೆ ಸ್ಥಾಪಿಸಿ ಗ್ರಾಮೀಣ ಬಡ ಜನರನ್ನು ಹಾಳು ಮಾಡುತ್ತಿದ್ದಾರೆಂದು ಆರೋಪಿಸಿದರು.
    ಉಪಾಧ್ಯಕ್ಷೆ ಸುಬಂದ ಕಲ್ಲಯ್ಯ ಹಿರೇಪಠ ಮಾತನಾಡಿ, ಕೂಡಲೇ ಎಂಎಸ್ ಐಎಲ್ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರು ಉಗ್ರಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ವರಿಸಿದರು.
    ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಮನವಿ ಸ್ವೀಕರಿಸಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು‌. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
    ಸಿದ್ದರಾಯ ಅರಳಗುಂಡಗಿ, ಶೋಭಾ ಶಹಾಪುರ, ಶಾಂತಾ ದರೆಣ್ಣವರ, ಸುರೇಖಾ, ಗೌರಾಬಾಯಿ ಹೀಗೆ ಹಲವು ಮುಖಂಡರು ಶಾಸಕರ ವಿರುದ್ದ ಆಕ್ರೋಶ ಹೊರಹಾಕುತ್ತಾ, ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲದೇ ಜನ ಪರಿತಪಿಸುತ್ತಿದ್ದಾರೆ. ಇಂಥದರಲ್ಲಿ ಸಾರಾಯಿ ಕುಡಿಸಲು ಹೊರಟಿರುವುದು ವ್ಯವಸ್ಥೆಯ ದುರಂತವೇ ಸರಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts