More

    ನನ್ನ ಬಿಟ್ಟು ಸರ್ಕಾರ ಮಾಡಲು ಸಾಧ್ಯವಿಲ್ಲ..!

    ಜಮಖಂಡಿ: ರಾಜ್ಯದಲ್ಲಿ ನನ್ನ ಬಿಟ್ಟು ಸರ್ಕಾರ ರಚನೆ ಮಾಡಲು ಯಾರಿಗೂ ಸಾಧ್ಯವಿಲ್ಲ. ಆ ಮಟ್ಟಕ್ಕೆ ಜನರ ಆಶೀರ್ವಾದ ನನಗೆ ಸಿಗುತ್ತಿದೆ. ಈ ಮಾತನ್ನು ನಾನು ಹಿಂದೆ ಬಹಿರಂಗವಾಗಿಯೇ ಹೇಳಿದ್ದೇನೆ. ಆ ವಿಶ್ವಾಸ ನನ್ನಲ್ಲಿ ಇದೆ ಎಂದು ಕೆಆರ್‌ಪಿಪಿ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
    ನಗರದ ಬಸವ ಭವನದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸೋಮವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ, ಖಂಡಿತವಾಗಿಯೂ ರಾಜ್ಯದಲ್ಲಿ ಈ ಸಲ ಅಧಿಕಾರಕ್ಕೆ ಬರುವ ಪಕ್ಷಗಳಿಗೆ ನಾನು ಅನಿವಾರ್ಯವಾಗುತ್ತೇನೆ ಎಂದರು.

    ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಕೆಆರ್‌ಪಿಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ರೆಡ್ಡಿ, ಹಾಗೆ ಅನ್ನಿಸುವ ಎರಡ್ಮೂರು ಕ್ಷೇತ್ರಗಳನ್ನು ಹೇಳಿ. ಸದ್ಯ ನಾನು 16 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇನೆ. ನಾನು ಪಕ್ಷ ಸ್ಥಾಪನೆ ಮಾಡಿದ ವೇಳೆ ಎಲ್ಲರೂ ಇದರಿಂದ ಬಿಜೆಪಿಗೆ ಎಫೆಕ್ಟ್ ಆಗಬಹುದು ಎಂದು ಮಾತನಾಡಿದರು. ಆ ಮೇಲೆ ಮುಸ್ಲಿಂ, ದಲಿತ ಮತಗಳು ಪಡೆಯುವುದರಿಂದ ಕಾಂಗ್ರೆಸ್‌ಗೆ ಹೊಡೆತ ಬೀಳುತ್ತದೆ ಎಂದರು. ಜನಾರ್ದನ ರೆಡ್ಡಿ ಜಾತಿ, ಮತ ಮೀರಿ ರಾಜಕೀಯ ಮಾಡುತ್ತಾನೆ. ಒಂದು ಪಕ್ಷ ಹಿಂದೂ ಮತಗಳು ನಮ್ಮದೆ ಎಂದುಕೊಂಡರು. ಇನ್ನೊಂದು ಪಕ್ಷ ಮುಸ್ಲಿಂ, ದಲಿತ ಮತಗಳು ತಮ್ಮದು ಎಂದುಕೊಂಡರು. ಆ ಎರಡೂ ಮತಗಳು ಕೆಆರ್‌ಪಿಪಿಗೆ ಬರುವುದರಿಂದ ಇಬ್ಬರಿಗೂ (ಕಾಂಗ್ರೆಸ್, ಬಿಜೆಪಿ) ಟೆನ್ಶನ್ ಆಗಿದೆ ಎಂದು ವಿಶ್ಲೇಷಿಸಿದರು.

    ನನ್ನ ಸ್ವಚ್ಛ ನಡೆನುಡಿ ದುರುಪಯೋಗ ಮಾಡಿಕೊಂಡರು: ತಮ್ಮನ್ನು ಫುಟ್‌ಬಾಲ್ ಆಡಿದಂತೆ ಬಳಕೆ ಮಾಡಿಕೊಂಡರು ಎಂದಿದ್ದ ಹೇಳಿಕೆ ಬಗ್ಗೆಯೂ ಪುನರುಚ್ಛರಿಸಿದ ರೆಡ್ಡಿ, ನನ್ನವರು ಎಂದು ನಂಬಿ ಸ್ವಚ್ಛವಾಗಿ ನೇರ ನಡೆನುಡಿ ರಾಜಕಾರಣ ಮಾಡಿದ್ದನ್ನು ಕೆಲವರು ದುರುಪಯೋಗ ಮಾಡಿಕೊಂಡರು. ನಮ್ಮವರೆ ಅಂತಲ್ಲ. ಎಲ್ಲರೂ ಸೇರಿ ಇಡೀ ರಾಜ್ಯದಲ್ಲಿ ನಾನು ಒಂದು ಕಡೆಗೆ ಆದರೆ ಎಲ್ಲರೂ ಒಂದು ಕಡೆ ಆಗಿ ನನ್ನ ಫುಟ್ಬಾಲ್ ತರಹ ಆಡಿದರು. ನನ್ನ ಇಡೀ ಜೀವನವನ್ನು ಸಮಸ್ಯೆಗಳಲ್ಲಿ ಸಿಲುಕಿಸುವ ಎಲ್ಲ ನಾಯಕರಿಗೂ ಮತದಾರರು ಫುಟ್ ಬಾಲ್ ಚಿಹ್ನೆಯಾದ ನಮ್ಮ ಪಕ್ಷಕ್ಕೆ ಮತ ನೀಡುವಂತೆ ನಾನು ಕೇಳಿಕೊಳ್ಳುತ್ತೇನೆ ಎಂದರು.

    ನನ್ನ ಗುರಿ 2028ಕ್ಕೆ ಅಧಿಕಾರ: ನಾನು ಬೇರೆ ಪಕ್ಷದವರ ಬಗ್ಗೆ ಮಾತನಾಡಲು ಹೋಗಲ್ಲ. ನನ್ನ ಇತಿಮಿತಿಯಲ್ಲಿ ಎಲ್ಲೆಲ್ಲಿ ಗೆಲ್ಲಲು ಅವಕಾಶ ಇದೆಯೋ ಆ ಕ್ಷೇತ್ರಗಳ ಕಡೆಗೆ ಗಮನ ಕೊಡುವೆ. ನನ್ನ ಗುರಿ ಏನಿದ್ದರೂ 2028ಕ್ಕೆ. ಇಡೀ ರಾಜ್ಯದಲ್ಲಿ ಗ್ರಾಮ, ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ, 2028ಕ್ಕೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತೇವೆ ಎಂದು ತಿಳಿಸಿದರು.

    ಈ ಸಲದ ಚುನಾವಣೆಗೆ 30 ರಿಂದ 35 ಅಭ್ಯರ್ಥಿಗಳನ್ನು ಘೋಷಣೆ ಮಾಡಬಹುದು. ಈಗಾಗಲೇ 50 ಕ್ಷೇತ್ರಗಳಲ್ಲಿ ಕೆಲಸ ನಡೆಯುತ್ತಿದೆ. ನಾನು 20 ಕ್ಷೇತ್ರಗಳಲ್ಲಿ ಓಡಾಡಿದ್ದೇನೆ. ಇನ್ನು 10 ದಿನಗಳಲ್ಲಿ 30 ಕ್ಷೇತ್ರಗಳನ್ನು ಪೂರ್ಣ ಮಾಡುತ್ತೇನೆ. ಮತ್ತೊಂದೆಡೆ ಸರ್ವೆ ಕೂಡ ನಡೆಯುತ್ತಿದೆ. ಎಲ್ಲೆಲ್ಲಿ ಗೆಲ್ಲುವ ಅವಕಾಶ ಇದೆಯೋ ಅಲ್ಲಿ ಅಭ್ಯರ್ಥಿಗಳನ್ನು ಹಾಕುತ್ತೇನೆ. ಬೇರೆ ಪಕ್ಷಗಳಲ್ಲಿ ಕೆಲಸ ಮಾಡಿ ನನ್ನ ಕಡೆಗೆ ಬಂದಿರುವವರು ಬಹಳ ಕಡಿಮೆ. ಒಳ್ಳೆಯ ಉದ್ಯಮಿಗಳು, ಒಳ್ಳೆಯ ವಿದ್ಯಾವಂತರು ನಮ್ಮ ಪಕ್ಷದ ಅಭ್ಯರ್ಥಿಗಳು ಆಗಲಿದ್ದಾರೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts