More

    ನನಸಾಗದ ಕುಡಿಯುವ ನೀರಿನ ಕನಸು

    ಸೋಮು ಲದ್ದಿಮಠ ರೋಣ
    ರೋಣ ಹಾಗೂ ಗಜೇಂದ್ರಗಡ ಅವಳಿ ತಾಲೂಕಿನ ಜನತೆಗೆ ಈಗಲೂ ಶುದ್ಧ ಕುಡಿಯುವ ನೀರು ಕನಸಾಗಿಯೇ ಉಳಿದಿದೆ.
    ತಾಲೂಕಿನಲ್ಲಿ ( ಹೊಳೆಆಲೂರ ಭಾಗದಲ್ಲಿ) ಮಲಪ್ರಭೆ ನದಿ ಹರಿಯುತ್ತಿದ್ದರೂ ಅವಳಿ ತಾಲೂಕುಗಳಾದ ರೋಣ ಹಾಗೂ ಗಜೇಂದ್ರಗಡದ ಜನರಿಗೆ ಶುದ್ಧ ಕುಡಿಯುವ ನೀರು ದೂರದ ಮಾತಾಗಿದೆ. ಇನ್ನು ಅವಳಿ ತಾಲೂಕಿನ ಜನತೆಗೆ ಕುಡಿಯುವ ನೀರು ಪೂರೈಸಲು ತಾಲೂಕಿನ ಜಿಗಳೂರ ಗ್ರಾಮದ ಹತ್ತಿರ 60 ಕೋಟಿ ರೂ. ವೆಚ್ಚದಲ್ಲಿ 307 ಎಕರೆ ಪ್ರದೇಶದಲ್ಲಿ ಸರ್ಕಾರ ನಿರ್ವಿುಸುತ್ತಿರುವ ಕೆರೆ ಕಾಮಗಾರಿಗೆ 18 ವರ್ಷ ಗತಿಸಿದರೂ ಇನ್ನೂ ಪೂರ್ಣವಾಗಿಲ್ಲ. ಆದರೆ, ಈ ಯೋಜನೆ ಯಾವಾಗ ಕೊನೆಗೊಳ್ಳುತ್ತದೆ ಎನ್ನುವುದಕ್ಕೆ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರವಿಲ್ಲ.
    ಇನ್ನು, ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿರುವ ನೀರಿನ ಘಟಕಗಳಲ್ಲಿ ಅವ್ಯವಸ್ಥೆಯೇ ಹೆಚ್ಚು. ಅವಳಿ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ, ಸೂಕ್ತ ನಿರ್ವಹಣೆ ಇಲ್ಲದೆ ಅನೇಕ ಕಡೆ ಬಾಗಿಲು ಮುಚ್ಚಿವೆ. ಘಟಕಗಳಲ್ಲಿ ಆಗಾಗ ಎದುರಾಗುವ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕು. ಆದರೆ, ಈ ಕೆಲಸ ಸಕಾಲಕ್ಕೆ ಆಗುತ್ತಿಲ್ಲ.
    ಬಹುತೇಕ ಕಡೆ ಜನವಸತಿ ಪ್ರದೇಶದಿಂದ ದೂರದಲ್ಲಿ ಘಟಕಗಳನ್ನು ನಿರ್ವಿುಸಲಾಗಿದೆ. ಅವುಗಳ ಸುತ್ತಲೂ ಜಾಲಿ ಕಂಟಿ ಬೆಳೆದಿರುತ್ತವೆ. ಇನ್ನು ಕೆಲವೆಡೆ ತಿಪ್ಪೆಗುಂಡಿಗಳಿಗೆ ಹೊಂದಿಕೊಂಡಂತೆ ಘಟಕಗಳಿವೆ. ಸುತ್ತಲೂ ಹೊಲಸು ಇರುವುದರಿಂದ ಯಾರೊಬ್ಬರೂ ತಲೆ ಹಾಕುವುದಿಲ್ಲ. ಕೆಲ ಗ್ರಾಮಗಳಲ್ಲಿ ಕಿಡಿಗೇಡಿಗಳು ಯಂತ್ರಗಳನ್ನು ನಾಶಪಡಿಸಿದ್ದಾರೆ. ಆದರೆ, ಅವುಗಳ ಬಗ್ಗೆ ಯಾರೂ ಮುತುವರ್ಜಿ ವಹಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
    ರೋಣ ಹಾಗೂ ಗಜೇಂದ್ರಗಡ ಅವಳಿ ತಾಲೂಕಿನಲ್ಲಿ 113 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಇದರಲ್ಲಿ ಬಹುತೇಕ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಕೆಟ್ಟು ಹೋಗಿರುವ ಘಟಕಗಳ ರಿಪೇರಿ ಹಾಗೂ ನಿರ್ವಹಣೆಗೆ ಟೆಂಡರ್ ಕರೆದರೆ ಯಾರೂ ಬರುತ್ತಿಲ್ಲ ಎನ್ನುವುದು ಸಂಬಂಧಪಟ್ಟ ಇಲಾಖೆಯ ಮೂಲಗಳು ತಿಳಿಸಿವೆ.
    ಗ್ರಾಮ ಪಂಚಾಯಿತಿ ಹಾಗೂ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್​ರಾಜ್ ಇಲಾಖೆಗಳ ನಡುವಿನ ಸಮನ್ವಯ ಕೊರತೆಯ ಪರಿಣಾಮ ನೀರಿನ ಘಟಕಗಳು ಈ ಪರಿಸ್ಥಿತಿ ತಲುಪಿವೆ. ಕೆಲವೆಡೆ ಆರ್​ಒ ಘಟಕಗಳಿಗೆ ನೀರು ಪೂರೈಸುವ ಕೊಳವೆ ಬಾವಿಗಳು ಕೈಕೊಟ್ಟಿವೆ. ಕೆಲವೆಡೆ ಯಂತ್ರೋಪಕರಣಗಳು ಹಾಳಾಗಿವೆ. ಕಾಯಿನ್ ಬಾಕ್ಸ್​ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದರೆ, ಗ್ರಾಮೀಣ ಸೇರಿ ಪಟ್ಟಣ ಪ್ರದೇಶಗಳಲ್ಲಿ ಖಾಸಗಿಯವರು ನಿರ್ವಹಣೆ ಮಾಡುತ್ತಿರುವ ಘಟಕಗಳು ಸುಸ್ಥಿತಿಯಲ್ಲಿದ್ದು ಹೆಚ್ಚಿನ ಆದಾಯ ತಂದು ಕೊಡುತ್ತಿವೆ ಎಂದು ಮೂಲಗಳು ಹೇಳಿವೆ.
    ನೀರಿನ ಘಟಕಗಳನ್ನು ಸರ್ಕಾರ ಸಮರ್ಪಕವಾಗಿ ನಡೆಸದ ಕಾರಣ ಜನರು ಸಹಜವಾಗಿಯೇ ಖಾಸಗಿ ಘಟಕಗಳತ್ತ ಮುಖ ಮಾಡುತ್ತಿದ್ದಾರೆ. ಹೆಚ್ಚಿನ ಹಣ ಕೊಟ್ಟು ಖರೀದಿಸುತ್ತಿದ್ದಾರೆ. ಅದರಲ್ಲೂ ಪಟ್ಟಣ ಪ್ರದೇಶದಲ್ಲಿ ಈ ಪ್ರಮಾಣ ಹೆಚ್ಚಿದೆ.

    ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಾಡಿದೆ. ಆದರೆ, ಅವುಗಳನ್ನು ಊರ ಹೊರಗೆ ಮಾಡುತ್ತಾರೆ. ಸೂಕ್ತ ನಿರ್ವಹಣೆ ಮಾಡುವುದಿಲ್ಲ. ನಿರ್ವಹಣೆ ಇಲ್ಲದಿದ್ದರೆ ಶುದ್ಧ ನೀರು ಸಿಗುವುದಿಲ್ಲ. ಹೀಗಾಗಿ ಜನರು ಅವುಗಳತ್ತ ಮುಖ ಮಾಡುತ್ತಿಲ್ಲ.
    |ಶರಣಪ್ಪ, ಮುಗಳಿ ಗ್ರಾಮಸ್ಥ

    ರೋಣ ತಾಲೂಕಿನ ಜಿಗಳೂರ ಕೆರೆ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ.
    | ಜಿ.ಬಿ. ಹೊಸಮನಿ, ನಗರ ನೀರು ಸರಬುರಾಜು ಹಾಗೂ ಒಳಚರಂಡಿ ವಿಭಾಗದ ಎಇಇ

    ರೋಣ ಹಾಗೂ ಗಜೇಂದ್ರಗಡ ಅವಳಿ ತಾಲೂಕಿನ ಹಾಳಕೇರಿ, ಗೌಡಗೇರಿ, ಕೌಜಗೇರಿ, ಜೀಗೇರಿ, ರ್ಕಕಟ್ಟಿ, ಸವಡಿ, ಲಕ್ಕಲಕಟ್ಟಿ, ಮ್ಯಾಕಲಝುರಿ, ಗುಜಮಾಗಡಿ, ದ್ಯಾಮುಣಸಿ, ಕಾಲಕಾಲೇಶ್ವರ ಯರೇಕುರಬನಾಳ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನೀರಿನ ಅಲಭ್ಯತೆ ಕಾರಣ ಶುದ್ದ ಕುಡಿಯುವ ನೀರಿನ ಘಟಕಗಳು ಚಾಲ್ತಿ ಇರುವುದಿಲ್ಲ.
    | ಜಗದೀಶ ಮಡಿವಾಳರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts