More

    ನದಿಯಲ್ಲಿ ನೀರಿನ ಹರಿವು ಹೆಚ್ಚಳ, ಪ್ರವಾಹ ಭೀತಿ

    ಹಾವೇರಿ: ಜಿಲ್ಲೆಯ ಕೆಲ ಭಾಗದಲ್ಲಿ ಗುರುವಾರವೂ ಅಲ್ಪ ಪ್ರಮಾಣದಲ್ಲಿ ಮಳೆ ಮುಂದುವರಿದಿದೆ. ಆದರೆ, ಅಕ್ಕಪಕ್ಕದ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ನಾಲ್ಕು ನದಿಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಹದ ಭೀತಿ ಉಂಟಾಗಿದೆ.

    ಮಂಗಳವಾರ ರಾತ್ರಿಯಿಂದ ಬುಧವಾರ ರಾತ್ರಿಯವರೆಗೆ ಸತತವಾಗಿ ಸುರಿದ ಮಳೆ ಗುರುವಾರ ಹಾವೇರಿ, ರಾಣೆಬೆನ್ನೂರ, ಬ್ಯಾಡಗಿ ತಾಲೂಕುಗಳಲ್ಲಿ ಸ್ವಲ್ಪ ಕಡಿಮೆಯಾಗಿದೆ. ಹಾನಗಲ್ಲ, ಹಿರೇಕೆರೂರ, ಶಿಗ್ಗಾಂವಿ ತಾಲೂಕಿನಲ್ಲಿ ಮಳೆ ಮುಂದುವರಿದಿದೆ.

    ಗುರುವಾರ ಬೆಳಗ್ಗೆವರೆಗಿನ 24 ತಾಸುಗಳ ಅವಧಿಯಲ್ಲಿ ಹಾವೇರಿ 40.6 ಮಿಮೀ, ರಾಣೆಬೆನ್ನೂರ 9.6, ಬ್ಯಾಡಗಿ 37, ಹಿರೇಕೆರೂರು 28.8, ಸವಣೂರ 40.4, ಶಿಗ್ಗಾಂವಿ 52.2 ಹಾಗೂ ಹಾನಗಲ್ಲ ತಾಲೂಕಿನಲ್ಲಿ 44 ಮಿಮೀ ಮಳೆಯಾಗಿದ್ದು, ಒಟ್ಟಾರೆ ಜಿಲ್ಲೆಯಲ್ಲಿ 255.5 ಮಿಮೀ ಮಳೆ ಸುರಿದಿದೆ.

    ಮನೆ ಹಾನಿ: ಎರಡು ದಿನ ಸುರಿದ ಮಳೆಯಿಂದಾಗಿ ಹಾವೇರಿ ತಾಲೂಕಿನಲ್ಲಿ 10, ಬ್ಯಾಡಗಿ 18, ಸವಣೂರ 30, ಶಿಗ್ಗಾವಿ 16, ಹಾನಗಲ್ಲ ತಾಲೂಕಿನ 8 ಸೇರಿ ಒಟ್ಟು 91 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಬ್ಯಾಡಗಿಯಲ್ಲಿ ಒಂದು ಮನೆ ಪೂರ್ಣ ಕುಸಿತವಾಗಿದೆ. ಮನೆ ಹಾನಿಯಿಂದ ಅಂದಾಜು 27.08 ಲಕ್ಷ ರೂ. ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹೊಲಗದ್ದೆಗಳಲ್ಲಿ, ಅಡಕೆ ಹಾಗೂ ಬಾಳೆ ತೋಟಗಳಲ್ಲಿ ನೀರು ತುಂಬಿದೆ. ಭಾರಿ ಗಾಳಿಗೆ ಮೆಕ್ಕೆಜೋಳ, ಕಬ್ಬು, ಬಾಳೆ ನೆಲಕ್ಕಚಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts