More

    ನದಿಜೋಡಣೆ ಯೋಜನೆ ಜಾರಿಗೆ ಚಿತ್ತ ಶುದ್ಧಿ ಅವಶ್ಯ

    ಕೋಲಾರ: ಕೇಂದ್ರ ಸರ್ಕಾರ 5 ನದಿಗಳ ಜೋಡಣೆ ಮೂಲಕ ಜಲಾನಯನ ಹಾಗೂ ಬಯಲುಸೀಮೆ ಪ್ರದೇಶದ ಅಭಿವೃದ್ಧಿಗೆ ಶಾಶ್ವತ ಪರಿಹಾರ ಕಲ್ಪಿಸಲು ಚಿಂತನೆ ನಡೆಸಿ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದು ಖುಷಿಯ ವಿಚಾರ. ಈ ಘೋಷಣೆ ಭಾಷಣಕ್ಕೆ ಸೀಮತವಾಗದೆ ಕಾರ್ಯರೂಪಕ್ಕೆ ಬರಲು ಕರ್ನಾಟಕದಿಂದ ಆಯ್ಕೆಯಾಗಿರುವ ಸಂಸದರು, ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಪಕ್ಷಾತೀತವಾಗಿ ಶ್ರಮಿಸಿದರೆ ಫಲ ನಿರೀಕ್ಷಿಸಬಹುದು.

    ಗೋದಾವರಿ, ಕೃಷ್ಣ, ಪೆನ್ನಾರ್, ಕಾವೇರಿ ಮತ್ತು ಪಾಲಾರ್ ನದಿಗಳ ಜೋಡಣೆ ಕುರಿತು ಪ್ರಸ್ತಾಪ ಮಾಡಿರುವುದು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ತಾಲೂಕುಗಳಿಗೆ ಲಾಭವಾಗುವುದರಿಂದ ಸಹಜವಾಗಿಯೇ ಈ ವ್ಯಾಪ್ತಿಯ ರೈತರು, ಜನ ಸಾಮಾನ್ಯರಲ್ಲಿ ಸಂಚಲನ ಮೂಡಿಸಿದೆ.

    ನದಿ ಜೋಡಣೆ ವಿಚಾರ ಹೊಸದೇನಲ್ಲ, 30 ವರ್ಷಗಳಿಂದ ಈ ಬಗ್ಗೆ ಚರ್ಚೆ ನಡೆದಿದೆ. ರಾಜಕಾರಣಿಗಳು ಪ್ರಚಾರ ಗಿಟ್ಟಿಸಿಕೊಳ್ಳಲು ನದಿ ಜೋಡಣೆ ವಿಷಯವನ್ನು ಟ್ರಂಪ್‌ಕಾರ್ಡ್ ರೀತಿ ಬಳಸಿಕೊಂಡಿರುವುದುಂಟು. ದಕ್ಷಿಣ ಭಾರತದಲ್ಲಿನ ನದಿಗಳ ನಿರ್ವಹಣೆ, ಅಭಿವೃದ್ಧಿ, ನೀರಿನ ಹಂಚಿಕೆ ಹೊಣೆಯನ್ನು ರಾಷ್ಟ್ರೀಯ ಜಲ ಮಂಡಳಿಯ ಏಜೆನ್ಸಿಗೆ ವಹಿಸಲು ಈ ಹಿಂದೆಯೇ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ, ಆಂಧ್ರ ಪ್ರದೇಶದ ಗಡಿಭಾಗದ ನೀರಾವರಿ ತಜ್ಞ ಕೆ.ಸಿ.ರಾವ್ ಎಂಬುವರ ಪ್ರಯತ್ನದಿಂದ ನದಿ ಜೋಡಣೆಗೆ ದಾರಿ ಹುಡುಕುವಂತಾಗಿತ್ತಾದರೂ ಕೇಂದ್ರ ಸರ್ಕಾರ ಹಾಗೂ ರಾಜಕೀಯ ಮುಖಂಡರಲ್ಲಿನ ಇಚ್ಛಾಶಕ್ತಿ ಕೊರತೆಯಿಂದ ಯೋಜನೆಗೆ ಹಿನ್ನಡೆಯಾಗಿತ್ತು.

    ನದಿ ಜೋಡಣೆ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂಬುದನ್ನು ಮನವಿಕೆ ಮಾಡಿ, ಕೇಂದ್ರದ ಮೇಲೆ ಒತ್ತಡ ತರಲು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಚಿಕ್ಕಬಳ್ಳಾಪುರ ಜಿಲ್ಲೆಯ ಆಂಜನೇಯರೆಡ್ಡಿ ನೇತೃತ್ವದಲ್ಲಿ ನೀರಾವರಿ ಸಚಿವರಾಗಿದ್ದ ಹಾಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರನ್ನು ಭೇಟಿಯಾಗಿ ನದಿ ಜೋಡಣೆಯಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಲಾಗಿತ್ತಾದರೂ ಕೇಂದ್ರದ ಗಮನ ಸೆಳೆಯಲು ಸಾಧ್ಯವಾಗಲಿಲ್ಲ.

    ಇದೇ ನಿಯೋಗ 2019ರಲ್ಲಿ ರಾಜ್ಯದ ಸಂಸದರು, ಕೇಂದ್ರ ಮಂತ್ರಿಗಳೊಂದಿಗೆ ಕೇಂದ್ರದ ಜಲಸಂಪನ್ಮೂಲ ಸಚಿವ ಗಜೇಂದ್ರ ಶಿಖಾವತ್ ಅವರನ್ನು ಭೇಟಿಯಾಗಿ ನದಿ ಜೋಡಣೆ ಯೋಜನೆಗೆ ಮನವಿ ಮಾಡಿತ್ತು. ತಡವಾದರೂ ಮೋದಿ ಸರ್ಕಾರ 5 ನದಿಗಳ ಜೋಡಣೆ ಬಗ್ಗೆ ಬಜೆಟ್‌ನಲ್ಲಿ ಪ್ರಕಟಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು 2012ರಲ್ಲಿ ರೂಪುಗೊಂಡಿರುವ ರಾಷ್ಟ್ರೀಯ ಜಲ ನೀತಿ ಅನುಸಾರ ಒಂದು ನದಿಯಿಂದ ಮತ್ತೊಂದು ನದಿಗೆ ನೀರು ವರ್ಗಾವಣೆ ಮಾಡಲು ನಿಷೇಧ ವಿಧಿಸಿರುವುದರಿಂದ ಕಾನೂನು ತೊಡಕು ನಿವಾರಿಸಿ ಯೋಜನೆ ಅನುಷ್ಠಾನಕ್ಕೆ ಕರ್ನಾಟಕದ ಸಂಸದರು, ಕೇಂದ್ರ ಸಚಿವರು ಹಾಗೂ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಪ್ರಯತ್ನ ಮಾಡಿದಲ್ಲಿ ಶಾಶ್ವತ ಪರಿಹಾರ ದೊರಕಿಸಿಕೊಟ್ಟಂತಾಗುತ್ತದೆ.

    ಈ ಹಿಂದೆ ಆಂಧ್ರ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಗೋದಾವರಿ ನದಿಯಿಂದ ರಾಜ್ಯ ವ್ಯಾಪ್ತಿಯ ಕೆಲ ಜಿಲ್ಲೆಗಳಿಗೆ ನೀರು ಹರಿಸಲು ನದಿ ನೀರು ಬಳಕೆ ಮಾಡಿಕೊಂಡಿರುವುದು ದೇಶಕ್ಕೆ ತಿಳಿದ ವಿಚಾರ, ಈ ಯೋಜನೆಯಡಿ ಕೋಲಾರ ಜಿಲ್ಲೆಗಳ ಕೆಲ ಪ್ರದೇಶಕ್ಕೆ ನೀರು ಬಳಸಿಕೊಳ್ಳಬಹುದಾಗಿತ್ತಾದರೂ ಜನಪ್ರತಿನಿಧಿಗಳು ಬದ್ಧತೆ ತೋರಲಿಲ್ಲ. ಕೃಷ್ಣ ಬಿಸ್ಕೀಂನಿಂದಲೂ ನೀರು ಪಡೆಯಬಹುದೆಂಬ ಕೂಗು ಕೇಳಿ ಬಂದು ಅನೇಕ ವರ್ಷಗಳಾಗಿವೆ. ಕೇಂದ್ರ ಸರ್ಕಾರ ಈ ಸಾಲಿನ ಬಜೆಟ್‌ನಲ್ಲಿ ನದಿ ಯೋಜನೆ ವಿಚಾರ ಪ್ರಸ್ತಾಪಿಸಿ ಗೋದಾವರಿ, ಕೃಷ್ಣ, ಪಾಲಾರ್, ಪೆನ್ನಾರ್ ಹಾಗೂ ಕಾವೇರಿ ನದಿಗಳ ಹೆಸರು ಘೋಷಣೆ ಮಾಡಿರುವುದರಿಂದ ಸಂಘಟಿತ ಪ್ರಯತ್ನ ನಡೆಸದಿದ್ದರೆ ಯೋಜನೆ ಖಾಲಿ ಡಬ್ಬವಾಗಿ ಉಳಿಯಲಿದೆ.

    ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ನದಿ ಜೋಡಣೆ ಬಗ್ಗೆ ಪ್ರಸ್ತಾಪಿಸಿರುವುದು ನೀರಿಗಾಗಿ ಪರಿತಪಿಸಿರುವ ಕೋಲಾರ, ಚಿಕ್ಕಬಳ್ಳಾಪುರ ಇನ್ನಿತರ ಜಿಲ್ಲೆಯ ಜನ ಸಣ್ಣ ಬೆಳಕು ಕಾಣುವಂತಾಗಿದೆ, ಯೋಜನೆ ಭಾಷಣಕ್ಕೆ ಅಥವಾ ರಾಜಕೀಯ ಬಳಕೆಗೆ ಸೀಮಿತವಾಗದೆ ಆದಷ್ಟು ಬೇಗ ಕಾರ್ಯರೂಪಕ್ಕೆ ತರಬೇಕು. 2012ರಲ್ಲಿ ರೂಪಿಸಿರುವ ರಾಷ್ಟ್ರೀಯ ಜಲ ಪಾಲಸಿಯಲ್ಲಿ ನದಿ ನೀರನ್ನು ಒಂದರಿಂದ ಮತ್ತೊಂದು ನದಿಗೆ ವರ್ಗಾವಣೆ ಮಾಡಲು ನಿಷೇಧ ವಿಧಿಸಿರುವುದನ್ನು ರದ್ದು ಮಾಡಿಸಲು ಸಂಘಟಿತ ಪ್ರಯತ್ನ ಮಾಡದಿದ್ದರೆ ಯೋಜನೆ ಜಾರಿಗೆ ತರುವುದು ಕಷ್ಟವಾಗಬಹುದು. ನದಿ ಜೋಡಣೆಗಾಗಿ ನಾವು ಪಟ್ಟ ಶ್ರಮಕ್ಕೆ ಕೊಂಚಮಟ್ಟಿಗಾದರೂ ಫಲ ಸಿಕ್ಕಿದ್ದು ಯೋಜನೆ ಕಾರ್ಯರೂಪಕ್ಕೆ ಬಂದರೆ ಇನ್ನಷ್ಟು ಸಂತೋಷವಾಗುತ್ತದೆ.
    ಆರ್.ಆಂಜನೇಯರೆಡ್ಡಿ, ಅಧ್ಯಕ್ಷ, ಶಾಶ್ವತ ನೀರಾವರಿ ಹೋರಾಟ ಸಮಿತಿ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts