More

    ನಗರೋತ್ಥಾನ ಕಾಮಗಾರಿ ನಿಧಾನ

    ರಾಣೆಬೆನ್ನೂರ: ನಗರದ ವಿವಿಧೆಡೆ ನಗರೋತ್ಥಾನ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಹೆಚ್ಚುವರಿಯಾಗಿ ನೀಡಿದ 1 ವರ್ಷದ ಅವಧಿ ಮುಗಿಯುತ್ತ ಬಂದರೂ ಕಾಮಗಾರಿ ಮಾತ್ರ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ.

    2017ರಲ್ಲಿ ಪೌರಾಡಳಿತ ಸಚಿವಾಲಯದಿಂದ ನಗರೋತ್ಥಾನ ಯೋಜನೆಯಡಿ ಇಲ್ಲಿಯ ನಗರಸಭೆಗೆ 29.75 ಕೋಟಿ ರೂ. ಅನುದಾನ ನೀಡಲಾಗಿತ್ತು. ಅದರಲ್ಲಿ 11.86 ಕೋಟಿ ರೂ. ಅನ್ನು ಅಮೃತ ಸಿಟಿ ಯೋಜನೆಯ 24/7 ಕುಡಿಯುವ ನೀರಿನ ಕಾಮಗಾರಿಯ ವಂತಿಕೆಗಾಗಿ ಕಾಯ್ದಿರಿಸಲಾಗಿದೆ. 3 ಕೋಟಿ ರೂ. ನಗರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಬಡ ಜನರಿಗೆ ನಿವೇಶನ ಖರೀದಿಸಿ ಭೂ ಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ ಮೀಸಲಿಡಲಾಗಿದೆ.

    ಇನ್ನುಳಿದ 14.89 ಕೋಟಿ ರೂ.ನಲ್ಲಿ ನಗರದ ಎಸ್​ಸಿ, ಎಸ್ಟಿ ಕಾಲನಿ ಹಾಗೂ ವಿವಿಧ ವಾರ್ಡ್​ಗಳ ರಸ್ತೆ, ಚರಂಡಿ, ಪುಟ್​ಪಾತ್ ನಿರ್ವಣ, ಉದ್ಯಾನ ಅಭಿವೃದ್ಧಿ ಮತ್ತು ಬೀದಿ ದೀಪಗಳ ಖರೀದಿ ಸೇರಿ ಒಟ್ಟು 9.79 ಕೋಟಿ ರೂ. ಖರ್ಚು ಮಾಡಲಾಗಿದೆ. 5.10 ಕೋಟಿ ರೂ. ಅನುದಾನ ಬಾಕಿ ಉಳಿದುಕೊಂಡಿದೆ.

    ಗುತ್ತಿಗೆ ಪಡೆದ ನೇಹಾ ಕನ್ಸ್​ಕ್ಷನ್​ನವರು 2019ಕ್ಕೆ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಇವರು ವಿಳಂಬ ಮಾಡಿದ್ದರಿಂದ ಜಿಲ್ಲಾಡಳಿತ 2020ರವರೆಗೆ ಕಾಲಾವಕಾಶ ನೀಡಿದೆ. ಆದರೆ, ಜಿಲ್ಲಾಡಳಿತ ನೀಡಿದ ಅವಧಿ ಮುಗಿಯಲು ಇನ್ನೆರಡು ತಿಂಗಳು ಮಾತ್ರ ಬಾಕಿ ಇದೆ. ಆದರೂ ಕಾಮಗಾರಿ ಇನ್ನೂ ಚುರುಕು ಪಡೆದಿಲ್ಲ. ಹೀಗಾಗಿ ಗುತ್ತಿಗೆದಾರರು ಈ ವರ್ಷವೂ ಕಾಮಗಾರಿ ಪೂರ್ಣಗೊಳಿಸುವಂತೆ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಕಳಪೆ ಕಾಮಗಾರಿ ಆರೋಪ

    ನಗರೋತ್ಥಾನ ಯೋಜನೆಯಲ್ಲಿ ಕೈಗೊಂಡ ವಿದ್ಯಾನಗರದ 1ರಿಂದ 10ನೇ ಕ್ರಾಸ್​ವರೆಗೂ ನಿರ್ವಿುಸಿದ ಗಟಾರ ಅವೈಜ್ಞಾನಿಕವಾಗಿದ್ದು, ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಅಲ್ಲಲ್ಲಿ ಚರಂಡಿ ಒಡೆದಿದ್ದು, ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ. ಅಂಬೇಡ್ಕರ್ ಸ್ಕೂಲ್​ಗೆ ತೆರಳುವ ರಸ್ತೆಯಲ್ಲಿ ನಿರ್ವಿುಸಿದ ಸಿಡಿ(ಅಡ್ಡ ಚರಂಡಿ) ಒಡೆದು ಹೋಗಿದೆ. ವಾಗೀಶ ನಗರ, ನಂದೀಶ್ವರ ನಗರದಲ್ಲಿ ನಿರ್ವಿುಸಿದ ರಸ್ತೆಗಳು ಮಳೆಗೆ ಕಿತ್ತು ಹೋಗಿವೆ. ಸುಣಗಾರ ಓಣಿಯಲ್ಲಿ ಕ್ರಿಯಾಯೋಜನೆ ಪ್ರಕಾರ ದೊಡ್ಡಕಾಲುವೆ ನಿರ್ವಿುಸಿಲ್ಲ. ಕಾಮಗಾರಿ ಸಹ ಅರ್ಧಕ್ಕೆ ನಿಂತಿದೆ. ಆದ್ದರಿಂದ ಕಾಮಗಾರಿಯಲ್ಲಿ ಬಹಳ ಕಡೆ ಕಳಪೆಯಾಗಿದ್ದು, ಇದನ್ನು ಸರಿಪಡಿಸಬೇಕು ಎಂಬುದು ಜನರ ಆಗ್ರಹವಾಗಿದೆ.

    ನಗರೋತ್ಥಾನ ಯೋಜನೆಯಡಿ ಕೈಗೊಂಡ ಕಾಮಗಾರಿ ಕಳಪೆಯಾಗಿರುವ ಕುರಿತು ನಗರಸಭೆ ಆಯುಕ್ತರಿಗೆ ಹಾಗೂ ಈ ಹಿಂದಿನ ಜಿಲ್ಲಾಧಿಕಾರಿಗೆ ಹಲವು ಬಾರಿ ದೂರು ನೀಡಿದ್ದೇವೆ. ಆದರೆ, ಈವರೆಗೂ ಯಾರೂ ಕಾಮಗಾರಿ ಪರಿಶೀಲಿಸಿಲ್ಲ. ಇದೀಗ ಹೊಸದಾಗಿ ಜಿಲ್ಲಾಧಿಕಾರಿ ಬಂದಿದ್ದಾರೆ. ಇವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಬೇಕು. ಕಳಪೆಯಾಗಿರುವ ಕಾಮಗಾರಿಯನ್ನು ಪುನಃ ಮಾಡಿಸಬೇಕು. ಇಲ್ಲವಾದರೆ ಈ ಬಗ್ಗೆ ಕರ್ತವ್ಯಲೋಪ ಆರೋದಪಡಿ ಲೋಕಾಯುಕ್ತರಿಗೆ ದೂರು ನೀಡಲಾಗುವುದು.
    | ನಿಂಗರಾಜ ಕೋಡಿಹಳ್ಳಿ, ನಗರಸಭೆ ಸದಸ್ಯ

    ನಗರೋತ್ಥಾನ ಕಾಮಗಾರಿ ವಿಳಂಬ ಮಾಡಿದ್ದರಿಂದ ಗುತ್ತಿಗೆದಾರರಿಗೆ ಈಗಾಗಲೇ ಒಂದು ಬಾರಿ ನೋಟಿಸ್ ನೀಡಿದ್ದೇವೆ. ಕೊಟ್ಟಿರುವ ಸಮಯದಲ್ಲಿ ಮುಗಿಸದಿದ್ದರೆ ದಂಡ ವಿಧಿಸಲಾಗುವುದು. ಕಳಪೆ ಕಾಮಗಾರಿ ಮಾಡಿರುವ ಬಗ್ಗೆ ಪರಿಶೀಲಿಸಿ, ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು. ಗುತ್ತಿಗೆದಾರರಿಗೆ ಕಾಮಗಾರಿಯ ನಿರ್ವಹಣೆಗೆ ಸಮಯವಿದೆ. ಸರಿಪಡಿಸದಿದ್ದರೆ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು.
    | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts