More

    ನಗರಸಭೆ ವಿರುದ್ಧ ಜನಾಕ್ರೋಶ, ಬಜೆಟ್ ಪೂರ್ವಭಾವಿ ಸಭೆಯಲ್ಲಿ ಆರೋಪಗಳ ಸುರಿಮಳೆ ಗ್ರಾಪಂ ಆಗಿದ್ದಾಗಲೇ ಸ್ವಚ್ಛತೆ ಇತ್ತೆಂದ ಜನರು

    ನೆಲಮಂಗಲ: ನಗರಸಭೆಯ ಬಜೆಟ್ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಸ್ವಚ್ಛತೆಯ ಕೊರತೆ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ವಿಲರಾಗಿರುವುದಾಗಿ ಆರೋಪಗಳ ಸುರಿಮಳೆಗೈದರು.

    ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಬಜೆಟ್‌ನ ಪೂರ್ವಭಾವಿ ಸಭೆ ಆಯೋಜನೆಗೊಂಡಿತ್ತು. ಸಭೆಯ ಆರಂಭದಿಂದ ಕೊನೆಯವರೆಗೂ ನಗರಸಭೆ ವ್ಯಾಪ್ತಿಯಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆ, ಸ್ವಚ್ಚತೆ, ರಸ್ತೆ ಸಮಸ್ಯೆಗಳ ಕುರಿತು ಹೆಚ್ಚು ಚರ್ಚೆಗಳು ನಡೆದವು.

    ಹಳೆಯ ಪುರಸಭೆ ವ್ಯಾಪ್ತಿ ಸೇರಿ ನೂತನ ನಗರಸಭೆಗೆ ವಿಲೀನಗೊಂಡಿರುವ ಗ್ರಾಪಂ ಪ್ರದೇಶಗಳ ವ್ಯಾಪ್ತಿಯಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ಮಾಡದ ಕಾರಣ ಉದ್ಭವಿಸಿರುವ ಸಮಸ್ಯೆ, ಕಟ್ಟಿಕೊಂಡಿರುವ ಚರಂಡಿ, ಕುಡಿಯುವ ನೀರು ಪೂರೈಕೆ ಸಮಸ್ಯೆ ಬಗ್ಗೆ ಅರಿಶಿಣಕುಂಟೆ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ್ ಪ್ರಸ್ತಾಪಿಸಿದರು. ಇದಕ್ಕೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಧ್ವನಿಗೂಡಿಸಿದರು. ಈ ಬಾರಿಯಾದರೂ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಹೆಚ್ಚಿನ ಅನುದಾನ ಮೀಸಲಿಡುವಂತೆ ಆಗ್ರಹಿಸಿದರು.

    ಗ್ರಾಮಪಂಚಾಯಿತಿ ಆಡಳಿತಾವಧಿಯಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ನಿರ್ವಹಣೆ ಸಮರ್ಪಕವಾಗಿತ್ತು. ಆದರೆ, ನಗರಸಭೆ ಆಡಳಿತದಲ್ಲಿ ಅವು ಇಲ್ಲವಾಗಿವೆ. ಇದಕ್ಕಾಗಿ ನಗರಸಭೆ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಇದುವೇ ಅವ್ಯವಸ್ಥೆಗೆ ಕಾರಣ ಎಂಬ ಆರೋಪಗಳು ಕೇಳಿಬಂದವು.

    13.6 ಕೋಟಿ ರೂ. ಆದಾಯ ನಿರೀಕ್ಷೆ: 2020-21ನೇ ವಿತ್ತ ಸಾಲಿನಲ್ಲಿ ನಿರೀಕ್ಷೆಗೂ ಮೀರಿದ ಆಸ್ತಿ, ನೀರು ಪರವಾನಗಿ, ಹರಾಜು, ದಂಡ, ಆಸ್ತಿ ತೆರಿಗೆ ಮೇಲಿನ ಬದ್ದಿ ಶುಲ್ಕಗಳು ಸೇರಿ ಒಟ್ಟು 10 ಕೋಟಿ ರೂ. ಕಂದಾಯ ಸಂಗ್ರಹವಾಗಿತ್ತು. 2021-22 ನೇ ಸಾಲಿನಲ್ಲಿ ಆಸ್ತಿ ತೆರಿಗೆ 10 ಕೋಟಿ ರೂ. ನೀರಿನ ಕಂದಾಯ 65 ಲಕ್ಷ ರೂ., ಮಳಿಗೆ ಬಾಡಿಗೆ 60 ಲಕ್ಷ ರೂ., ಕಟ್ಟಡ ಪರವಾನಗಿ 40 ಲಕ್ಷ ರೂ., ಸಂತೆ ಹರಾಜು 10 ಲಕ್ಷ ರೂ., ವ್ಯಾಪಾರ ಪರವಾನಗಿ 15 ಲಕ್ಷ ರೂ., ಅಭಿವೃದ್ಧಿ ಶುಲ್ಕ 15 ಲಕ್ಷ ರೂ., ರಸ್ತೆ ಅಗೆತ 10 ಲಕ್ಷ ರೂ., ಒಳಚರಂಡಿ ಶುಲ್ಕ 20 ಲಕ್ಷ ರೂ., ಖಾತಾ ವರ್ಗಾವಣೆ 15 ಲಕ್ಷ ರೂ., ಅನಧಿಕೃತ ಕಟ್ಟಡಗಳ ಮೇಲಿನ ದಂಡ 50 ಲಕ್ಷ ರೂ., ಆಸ್ತಿ ತೆರಿಗೆ ಮೇಲಿನ ಬಡ್ಡಿ 50 ಲಕ್ಷ ರೂ., ಇತರೆ ಶುಲ್ಕಗಳು 10 ಲಕ್ಷ ರೂ. ಸೇರಿ 13.6 ಕೋಟಿ ರೂ. ಆದಾಯ ನಿರೀಕ್ಷಿಸಲಾಗುತ್ತಿದೆ ಎಂದು ಪೌರಾಯುಕ್ತ ಎಲ್. ಮಂಜುನಾಥ್‌ಸ್ವಾಮಿ ತಿಳಿಸಿದರು.

    13.12 ಕೋಟಿ ರೂ. ಸರ್ಕಾರಿ ಅನುದಾನ: ಹಣಕಾಸು ಆಯೋಗದ ಅನುದಾನ 2.21 ಕೋಟಿ ರೂ., ವಿದ್ಯುತ್ ಅನುದಾನ 8.72 ಕೋಟಿ ರೂ., 2 ಲಕ್ಷ ರೂ., ಎಸ್‌ಎಫ್‌ಸಿ ಮುಕ್ತ ನಿಧಿ 40 ಲಕ್ಷ ರೂ., ಎಸ್‌ಸಿಎಸ್‌ಪಿಟಿಎಸ್‌ಪಿ 16 ಲಕ್ಷ ರೂ., ಕೇಂದ್ರ ಸರ್ಕಾರದ 15ನೇ ಹಣಕಾಸು ಯೋಜನೆ 1.43 ಕೋಟಿ ರೂ., ಸಿಬ್ಬಂದಿ ಪಿಂಚಣಿ 10 ಲಕ್ಷ ರೂ., ಕುಡಿಯುವ ನೀರಿನ ಯೋಜನೆಗೆ 10 ಲಕ್ಷ ರೂ., ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು 13.12 ಕೋಟಿ ರೂ. ಅನುದಾನ ಬರುವ ನಿರೀಕ್ಷೆ ಇರುವುದಾಗಿ ಪೌರಾಯುಕ್ತ ಹೇಳಿದರು.
    ನಗರಸಭೆಯ ನಾಮನಿರ್ದೇಶಿತ ಸದಸ್ಯರಾದ ವಸಂತ್, ರವಿಕುಮಾರ್, ರಾಜಮ್ಮ, ಅಂಜಿನಮೂರ್ತಿ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್. ಭಾಸ್ಕರ್‌ಪ್ರಸಾದ್, ಕರವೇ ರಾಜ್ಯ ಉಪಾಧ್ಯಕ್ಷ ಉಮೇಶ್ ಗೌಡ, ದಲಿತ ಕೂಲಿ ಕಾರ್ಮಿಕ ಸಂಘಟನೆ ಅಧ್ಯಕ್ಷ ಬಿ.ಎಂ.ಗಂಗಬೈಲಪ್ಪ, ನಮ್ಮ ಜನಸೈನ್ಯ ಸಂಘಟನೆ ಅಧ್ಯಕ್ಷ ಬಿ. ನರಸಿಂಹಯ್ಯ, ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಡಿ. ಸಿದ್ದರಾಜು, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಕುಮಾರ್, ಮಾಜಿ ಸದಸ್ಯರಾದ ಮಂಜುನಾಥ್, ಕೆಂಪರಾಜು, ಹನುಮಂತಮ್ಮ, ನಾಗರತ್ನ ಮತ್ತಿತರರು ಇದ್ದರು.

    ನಗರ ಬೃಹತ್ ಗಾತ್ರದಲ್ಲಿ ಬೆಳೆಯುತ್ತಿದೆ. ರಾಜ್ಯರಾಜಧಾನಿಗೆ ಹೊಂದಿಕೊಂಡಂತೆ ಇರುವುದರಿಂದ, ನಗರದಲ್ಲಿ ಒಳಚರಂಡಿ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡದೆ ಇರುವುದು ಬೇಸರದ ತಂದಿದೆ. ನಗರಸಭೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಾಗವನ್ನು ಸ್ಮಶಾನಕ್ಕೆ ಮೀಸಲಿಟ್ಟು ಬಡವರಿಗೆ ಅನುಕೂಲ ಮಾಡಿಕೊಡಬೇಕು.
    ಗಂಗಾಧರ್‌ರಾವ್, ನಗರಸಭೆ ಸದಸ್ಯ

    ಪುರಸಭೆಯ ಚುನಾಯಿತ ಸದಸ್ಯರಿಗೆ ಅಧಿಕಾರ ಸಿಗದೆ ಜನರ ಸಮಸ್ಯೆ ಪರಿಹಾರವಾಗುತ್ತಿಲ್ಲ. ನಗರದ ಕೆರೆ ಅಭಿವೃದ್ಧಿ, ಘನತ್ಯಾಜ್ಯ ವಿಲೇವಾರಿ ಘಟಕ, ಕುಡಿಯುವ ನೀರಿನ ಸೌಲಭ್ಯ, ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ ಆಧ್ಯತೆ ನೀಡಬೇಕು. ಸರ್ಕಾರಿ ಜಾಗ ಒತ್ತುವರಿ ತೆರವು, ಬೀದಿನಾಯಿಗಳು, ಕೋತಿ ಮತ್ತು ವಿಷಜಂತುಗಳ ನಿರ್ವಹಣೆಗೆ ಉರಗ ರಕ್ಷಕರನ್ನು ನೇಮಿಸಬೇಕು.
    ಎಚ್.ಜಿ.ರಾಜು, ಪುರಸಭೆ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts