More

    ನಗರಸಭೆ ಎದುರು ಸಿಬ್ಬಂದಿ ಪ್ರತಿಭಟನೆ, ವಕೀಲ ವೆಂಕಟೇಶ್ ವಿರುದ್ಧ ಆರೋಪ

    ದೊಡ್ಡಬಳ್ಳಾಪುರ: ನಗರಸಭೆಯಲ್ಲಿ ಖಾತೆ ವಿಚಾರವಾಗಿ ಕಚೇರಿಗೆ ಬಂದಿದ್ದ ವಕೀಲ ವೆಂಕಟೇಶ್ ಎಂಬುವರು ನಮ್ಮನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಜಾತಿನಿಂದನೆ ಮಾಡಿದ್ದಾಗಿ ಆರೋಪಿಸಿ ನಗರಸಭೆ ಎದುರು ಸಿಬ್ಬಂದಿ ಗುರುವಾರ ಪ್ರತಿಭಟನೆ ನಡೆಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ವಕೀಲ ವೆಂಕಟೇಶ್, ಸಿಬ್ಬಂದಿ ನಾರಾಯಣಸ್ವಾಮಿ ಮೇಲೆ ವಾಗ್ದಾಳಿ ನಡೆಸಿ ಅವಾಚ್ಯವಾಗಿ ನಿಂದಿಸಿದರು. ಈ ಹಿಂದೆಯೂ ನಗರಸಭೆಯ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡುವ ಜತೆಗೆ ಬ್ಲಾಕ್‌ಮೇಲ್ ಮಾಡುತ್ತಿದ್ದರು. ಇದರಿಂದ ಬೇಸತ್ತು ಪ್ರತಿಭಟನೆಯ ಹಾದಿ ತುಳಿದಿದ್ದಾಗಿ ಮತ್ತೊಬ್ಬ ನೌಕರ ಶ್ರೀನಿವಾಸ್ ಹೇಳಿದರು.

    ಜಿಲ್ಲಾಧಿಕಾರಿಗೆ 2 ಪ್ರತ್ಯೇಕ ದೂರು: ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರಿಗೆ ದೊಡ್ಡಬಳ್ಳಾಪುರ ನಗರಸಭೆ ಸಿಬ್ಬಂದಿ ಪ್ರತ್ಯೇಕವಾಗಿ ಎರಡು ದೂರು ಸಲ್ಲಿಸಿದ್ದಾರೆ. ಬಳಿಕ ನಗರಸಭೆ ಆಯುಕ್ತ ರಮೇಶ್ ಸುಣಗಾರ್ ಜಿಲ್ಲಾಧಿಕಾರಿ ಅವರಿಗೆ ಘಟನೆ ಕುರಿತು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿಸಿ ಭರವಸೆ ನೀಡಿದರು ಎನ್ನಲಾಗಿದೆ.

    ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಕುಮಾರ್ ಶೆಟ್ಟಿ ಬಣ ಸಾಥ್ ನೀಡಿತ್ತು. ಸಂಘಟನೆ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಮುಖಂಡ ಪು. ಮಹೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts