More

    ನಗರಸಭೆ ಎದುರು ಬೆಟ್ಟದಷ್ಟು ಬೇಡಿಕೆ

    ರಾಣೆಬೆನ್ನೂರ: ನಗರದಲ್ಲಿ ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ತೆರವುಗೊಳಿಸಬೇಕು. ನಗರಕ್ಕೆ ರಿಂಗ್ ರಸ್ತೆ ನಿರ್ವಿುಸಬೇಕು. ಮುನ್ಸಿಪಲ್ ಹೈಸ್ಕೂಲ್ ಅಭಿವೃದ್ಧಿ ಪಡಿಸಬೇಕು. ಉದ್ಯಾನಗಳನ್ನು ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡಬೇಕು. ಕೊಳಚೆ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ನಗರಸಭೆ ವಾಣಿಜ್ಯ ಮಳಿಗೆಗಳನ್ನು ಹರಾಜು ಮಾಡಬೇಕು…!

    ಇವು ರಾಣೆಬೆನ್ನೂರ ನಗರಸಭೆಯ 2020-21ನೇ ಸಾಲಿನ ಆಯ-ವ್ಯಯ ಸಿದ್ಧತೆ ನಿಮಿತ್ತ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಅಧ್ಯಕ್ಷತೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸದಸ್ಯರು ಹಾಗೂ ಸಾರ್ವಜನಿಕರಿಂದ ಕೇಳಿಬಂದ ಬೇಡಿಕೆಗಳು.

    ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ನಗರಸಭೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನನೆಗುದಿದೆ ಬಿದ್ದಿದ್ದು, ಕೂಡಲೇ ಅವುಗಳನ್ನು ಹರಾಜು ಮಾಡಿ ನಗರಸಭೆ ಆದಾಯ ಹೆಚ್ಚಿಸಬೇಕು. ನಗರದಲ್ಲಿ ರಾಜಕಾಲುವೆ ಒತ್ತುವರಿಯಾದ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಕೆಲ ಬಡಾವಣೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗುವ ಪರಿಸ್ಥಿತಿಯಿದೆ. ಆದ್ದರಿಂದ ರಾಜಕಾಲುವೆ ಒತ್ತುವರಿಯನ್ನು ಸರ್ವೆ ಮಾಡಿಸಿ ತೆರವುಗೊಳಿಸಿ ಅದರ ನೀರು ದೊಡ್ಡಕೆರೆಗೆ ಸೇರುವಂತೆ ಕ್ರಮ ಜರುಗಿಸಬೇಕು ಎಂದರು.

    ನಿರ್ವಹಣೆಯಿಲ್ಲದೆ ಉದ್ಯಾನಗಳು ಪಾಳು ಬಿಳುತ್ತಿವೆ. ಅವುಗಳನ್ನು ಗುತ್ತಿಗೆ ಆಧಾರದ ಮೇಲೆ ನಿರ್ವಹಣೆಗೆ ನೀಡಬೇಕು. ಬಡ ಮಕ್ಕಳು ಅಧ್ಯಯನ ಮಾಡುತ್ತಿರುವ ಮುನ್ಸಿಪಲ್ ಸ್ಕೂಲ್ ​ಅನ್ನು ಅಭಿವೃದ್ಧಿಪಡಿಸಬೇಕು. ಕಸ ವಿಲೇವಾರಿ, ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ಕೊಳಚೆ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ, ಜನತೆಗೆ ಶುದ್ಧ ನೀರು ಒದಗಿಸಬೇಕು. 18 ಜನ ಪೌರಕಾರ್ವಿುಕರು ಕಡಿಮೆಯಿದ್ದು, ಕೂಡಲೇ ಭರ್ತಿ ಮಾಡಿಬೇಕು ಎಂದು ಒತ್ತಾಯಿಸಿದರು.

    ಮಲ್ಲಣ್ಣ ಅಂಗಡಿ ಮಾತನಾಡಿ, ನಗರಕ್ಕೆ ರಿಂಗ್ ರಸ್ತೆ ನಿರ್ವಿುಸಬೇಕು. ಎಲ್ಲ ವಾರ್ಡ್​ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು.ಪ್ರಮುಖ ಸ್ಥಳಗಳಲ್ಲಿ ಬಸ್ ನಿಲ್ದಾಣ ನಿರ್ವಿುಸಬೇಕು. ಸಾರ್ವಜನಿಕ ಶೌಚಗೃಹ ನಿರ್ವಿುಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿಯನ್ನು ಎಲ್​ಇಡಿ ಸ್ಕ್ರೀನ್ ಮೂಲಕ ಸಾರ್ವಜನಿಕ ತಿಳಿಸಲು ನಗರಸಭೆಯಲ್ಲಿ ನಾಮಫಲಕ ಅಳವಡಿಸಬೇಕು. ಸ್ಮಶಾನ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಆಂಧ್ರಪ್ರದೇಶ ಮತ್ತು ತೆಲಂಗಾಣ ಮಾದರಿಯಲ್ಲಿ ಸ್ವಯಂ ಘೊಷಿತ ಆಸ್ತಿ ತೆರಿಗೆಯನ್ನು ಮನೆ ಮನೆಗೆ ಹೋಗಿ ಆನ್​ಲೈನ್ ಮೂಲಕ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು ಎಂದರು.

    ನಿಂಗರಾಜ ಕೋಡಿಹಳ್ಳಿ ಮಾತನಾಡಿ, ನಗರದೆಲ್ಲೆಡೆ ಎಲ್​ಇಡಿ ಬೀದಿ ದೀಪಗಳನ್ನು ಅಳವಡಿಸಬೇಕು. ಉದ್ಯಾನಗಳಿಗೆ ಸೋಲಾರ್ ದೀಪ ಅಳವಡಿಸಬೇಕು. ಇದರಿಂದ ನಗರಸಭೆಗೆ ನಿರ್ವಹಣೆ ಜತೆಗೆ ವಿದ್ಯುತ್ ಉಳಿತಾಯ ಆಗಲಿದೆ ಎಂದರು.

    ನಂತರ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಮಾತನಾಡಿ, ಎಲ್ಲರೂ ತಿಳಿಸಿದ ಬೇಡಿಕೆಗಳನ್ನು ನೋಟ್ ಮಾಡಿಕೊಳ್ಳಲಾಗಿದೆ. ನಗರಸಭೆ ಅನುದಾನದ ಮಾಹಿತಿ ಪಡೆದು ಎಲ್ಲರಿಗೂ ಅನುಕೂಲ ಆಗುವ ಯೋಜನೆಗಳಿಗೆ ಆದ್ಯತೆ ನೀಡಿ, ಬಜೆಟ್ ಸಿದ್ಧಪಡಿಸಲಾಗುವುದು ಎಂದು ಭರವಸೆ ನೀಡಿದರು.

    ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ ಹಾಗೂ ಎಲ್ಲ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts