More

    ನಗರಸಭೆಯಲ್ಲಿ ಎಂಟಿಬಿ ಪವರ್; ಉಪಚುನಾವಣೆ ಸೋಲಿಗೆ ಪ್ರತೀಕಾರ; ಹೊಸಕೋಟೆ ಸ್ಥಳೀಯ ಸಂಸ್ಥೆಯಲ್ಲಿ ಬಿಜೆಪಿಗೆ ಅಧಿಕಾರ

    ಶಿವರಾಜ.ಎಂ.ಬೆಂಗಳೂರು: ನಿರೀಕ್ಷೆಯಂತೆಯೇ ಹೊಸಕೋಟೆ ನಗರಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಕಿಂಗ್ ಮೇಕರ್ ಎನಿಸಿದ್ದಾರೆ. ಉಪಚುನಾವಣೆ ಸೋಲಿಗೆ ಪ್ರತೀಕಾರವೆಂದೇ ಬಿಂಬಿತವಾಗಿದ್ದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

    ಬಿಜೆಪಿ ವಿರುದ್ಧ ಭಾರತೀಯ ಪ್ರಜಾ ಪಕ್ಷ (ಬಿಪಿಪಿ) ಸರಿಸಮ ಸ್ಪರ್ಧೆಯೊಡ್ಡಲಿದೆ ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ. ನಿರೀಕ್ಷೆಯಂತೆಯೇ ಕಾಂಗ್ರೆಸ್ ಧೂಳಿಪಟವಾಗಿದೆ. 31 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ 22ರಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದರೆ, ಸ್ವಾಭಿಮಾನಿ ಬಣ ಪ್ರಯಾಸದಿಂದಲೇ 7 ವಾರ್ಡ್‌ಗಳಲ್ಲಿ ಗೆಲವು ಸಾಧಿಸಿದೆ. ಕಾಂಗ್ರೆಸ್ ಶೂನ್ಯಕ್ಕೆ ಶರಣಾಗಿದ್ದರೆ, ಎಸ್‌ಡಿಪಿಐ ಹಾಗೂ ಪಕ್ಷೇತರ ಅಭ್ಯರ್ಥಿಯೊಬ್ಬರು ಗೆಲುವಿನ ನಗೆ ಬೀರಿದ್ದಾರೆ.

    ನಗರ ಬಿಜೆಪಿ ಭದ್ರಕೋಟೆ: ಹೊಸಕೋಟೆ ನಗರ ಬಿಜೆಪಿ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಎಂಟಿಬಿ ನಾಗರಾಜ್ ಪ್ರಭಾವದಿಂದಾಗಿ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿದ್ದ ಬಿಜೆಪಿ ಈ ಬಾರಿ ಅದೇ ಎಂಟಿಬಿ ಪವರ್‌ನಿಂದಾಗಿ ನಗರಸಭೆ ಗದ್ದುಗೆ ಗಟ್ಟಿಮಾಡಿಕೊಂಡಿದೆ. ಉಪಚುನಾವಣೆಯಲ್ಲಿ ಬಿಜೆಪಿಯಿಂದ ಉಚ್ಛಾಟನೆಗೊಂಡರೆಂಬ ಕಾರಣಕ್ಕೆ ಶರತ್ ಪರವಾಗಿ ಸೃಷ್ಟಿಯಾಗಿದ್ದ ಅನುಕಂಪ ನಗರಸಭೆ ಚುನಾವಣೆಯಲ್ಲಿ ಯಾವುದೇ ಮ್ಯಾಜಿಕ್ ಮಾಡಿಲ್ಲ. ಇನ್ನು, ಕಾಂಗ್ರೆಸ್‌ನಿಂದ ಯಾವುದೇ ಅಭ್ಯರ್ಥಿ ಸ್ಪರ್ಧೆಯೊಡ್ಡಿಲ್ಲ. ಉಪಚುನಾವಣೆ ಪರಾಜಿತ ಅಭ್ಯರ್ಥಿ ಪದ್ಮಾವತಿ ಶಾಸಕ್ಕೆಂಬಂತೆ ಮತಪ್ರಚಾರ ನಡೆಸಿದ್ದರು. ನಿರೀಕ್ಷೆಯಂತೆಯೆ ಮತದಾರರು ಕಾಂಗ್ರೆಸ್ ಕೈಬಿಟ್ಟಿದ್ದಾರೆ. ಉಪ ಚುನಾವಣೆ ಸೋಲು, ಕೈತಪ್ಪಿದ ಮಂತ್ರಿಗಿರಿಯಿಂದ ತುಸು ಮಂಕಾದಂತಿದ್ದ ಮಾಜಿ ಸಚಿವ ಎಂಟಿಬಿ ನಾಗರಾಜ್, ನಗರಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಹಗಲುರಾತ್ರಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದ ಎಂಟಿಬಿ ನಾಗರಾಜ್ ಅವರನ್ನು ಹೊಸಕೋಟೆ ಮತದಾರರು ಕೈಹಿಡಿದಿದ್ದಾರೆ.

    ಮುನ್ನೆಲೆಗೆ ಬಂದ ಎಂಟಿಬಿ ವರ್ಚಸ್ಸು: ಕಳೆದ ಪುರಸಭೆ ಚುನಾವಣೆ ವೇಳೆ ಎಂಟಿಬಿ ನಾಗರಾಜ್ ಕಾಂಗ್ರೆಸ್ ಶಾಸಕರಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಪುರಸಭೆ ಗದ್ದುಗೆ ಹಿಡಿದಿದ್ದರು. ಈ ಬಾರಿ ಬಿಜೆಪಿ ಸೇರ್ಪಡೆಯಾಗಿ ಕಮಲ ಅರಳಿಸುವಲ್ಲೂ ಯಶ ಕಂಡಿದ್ದಾರೆ. ಒಟ್ಟಿನಲ್ಲಿ ಸ್ಥಳೀಯ ಚುನಾವಣೆಗಳು ಪಕ್ಷಕ್ಕಿಂತ ವ್ಯಕ್ತಿ ವರ್ಚಸ್ಸಿನ ಮೇಲೆ ನಿರ್ಧಾರವಾಗುತ್ತದೆ ಎಂಬ ಇತಿಹಾಸ ಮರುಕಳಿಸಿದಂತಾಗಿದೆ.

    ಸಂಸದ ಬಿ.ಎನ್.ಬಚ್ಚೇಗೌಡ ಹಾಗೂ ಶಾಸಕ ಶರತ್ ಬಚ್ಚೇಗೌಡ ಬಿಜೆಪಿಗೆ ಬಗೆದ ದ್ರೋಹಕ್ಕೆ ಮತದಾರರು ನಗರಸಭೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿರುವಂತೆ ನಗರಸಭೆಯಲ್ಲೂ ಬಿಜೆಪಿ ಅಧಿಕಾರ ಹಿಡಿದಿರುವುದು ಉತ್ತಮ ಬೆಳವಣಿಗೆಯಾಗಿದೆ.
    ಎಂಟಿಬಿ ನಾಗರಾಜ್, ಮಾಜಿ ಸಚಿವ

    ಅವೈಜ್ಞಾನಿಕ ರೀತಿಯ ವಾರ್ಡ್ ವಿಂಗಡಣೆಯಿಂದ ಪಕ್ಷದ ಅಭ್ಯರ್ಥಿಗಳಿಗೆ ಸ್ವಲ್ಪಮಟ್ಟಿನ ತೊಂದರೆಯಾಗಿದ್ದರಿಂದ ಕಡಿಮೆ ಸ್ಥಾನ ಪಡೆಯಬೇಕಾಯಿತು. ಆದರೂ ಜಯಶೀಲರಾದ ಅಭ್ಯರ್ಥಿಗಳು ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ.
    ಶರತ್ ಬಚ್ಚೇಗೌಡ, ಹೊಸಕೋಟೆ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts