More

    ನಕಲಿ ಜಾತಿ ಪತ್ರ ಕಡಿವಾಣಕ್ಕೆ ಒತ್ತಾಯ- ಪರಿಶಿಷ್ಟ ಜಾತಿಗಳ ರಕ್ಷಣಾ ವೇದಿಕೆ ಧರಣಿ 

    ದಾವಣಗೆರೆ: ಜಿಲ್ಲಾಡಳಿತ ಪರಿಶಿಷ್ಟರನ್ನು ವಂಚಿಸಿ, ನಕಲಿ ಜಾತಿ ಪತ್ರ ಪಡೆಯುವವರ ರಕ್ಷಣೆಯಲ್ಲಿ ತೊಡಗಿದೆ ಎಂದು ಆಪಾದಿಸಿ ಪರಿಶಿಷ್ಟ ಜಾತಿಗಳ ರಕ್ಷಣಾ ವೇದಿಕೆ, ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದೆ.
    ವೀರಶೈವ ಲಿಂಗಾಯತರ ಉಪಜಾತಿಯಾದ ಜಂಗಮರು ಸಾಂಪ್ರದಾಯಿಕವಾಗಿ ಭಿಕ್ಷಾಟನೆ ಮಾಡುತ್ತಿರುವ ಕಾರಣಕ್ಕೆ ಬೇಡ ಜಂಗಮ ಜಾತಿಗೆ ಹೋಲಿಕೆ ಇದೆ ಎಂಬ ಕಾರಣಕ್ಕಾಗಿ ಕೆಲವರು ಸೌಲಭ್ಯ ಪಡೆಯುವ ದುರುದ್ದೇಶದಿಂದ ನಕಲಿ ಜಾತಿ ಪ್ರಮಾಣಪತ್ರ ಪಡೆದು ನೈಜ ಪರಿಶಿಷ್ಟ ಜಾತಿಯವರನ್ನು ವಂಚಿಸುತ್ತಿದ್ದಾರೆ ಎಂದು ಧರಣಿನಿರತರು ದೂರಿದರು.
    ಜಿಲ್ಲೆಯ ಗ್ರಾಮಾಂತರ ಶಾಲೆಗಳಲ್ಲಿ ಮಕ್ಕಳನ್ನು ದಾಖಲು ಮಾಡುವಾಗ, ವೀರಶೈವ ಲಿಂಗಾಯತ ಜಂಗಮರು ಪರಿಶಿಷ್ಟ ಜಾತಿಯವರ ಸವಲತ್ತು ಪಡೆಯಲು ದಾಖಲೆರಹಿತವಾಗಿ ಬೇಡಜಂಗಮ ಎಂಬ ಜಾತಿ ನಮೂದಿಸಿರುವುದನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ದೃಢಪಡಿಸಿದೆ. ಇದರಿಂದ ಸಾಮಾಜಿಕ ಗೊಂದಲ ಉಂಟಾಗಿದೆ. ಇದನ್ನು ತಡೆಯಬೇಕು. ನಕಲಿ ಪತ್ರ ಪಡೆಯುವ ಪಾಲಕರ ಮೇಲೆ ಕ್ರಮವಾಗಬೇಕು ಎಂದು ಆಗ್ರಹಿಸಿದರು.
    ಲಿಂಗಾಯತ ಜಂಗಮರು ಎಂಬುದು ಒಳಪಂಗಡವೇ ಹೊರತಾಗಿ ಪರಿಶಿಷ್ಟ ಜಾತಿಗೆ ಸೇರಲು ಅರ್ಹವಾದ ಬೇಡ ಜಂಗಮರಲ್ಲ. ಹೀಗಾಗಿ ಮಾಯಕೊಂಡ ಮೀಸಲು ಕ್ಷೇತ್ರದಲ್ಲಿ ಮೇಲ್ವರ್ಗದವರು ಚುನಾವಣಾ ಪೂರ್ವ ಸುಳ್ಳು ಪ್ರಚಾರ ಮಾಡುತ್ತ ಬಹಿರಂಗವಾಗಿ ಮೀಸಲು ಕಬಳಿಸುವ ಹುನ್ನಾರ ನಡೆಸಿದ್ದಾರೆ ಗೊಂದಲ ಸೃಷ್ಟಿಸಿದ್ದಾರೆ. ಅಂಥವರಿಗೆ ಕ್ಷೇತ್ರದಲ್ಲಿ ಓಡಾಡುವುದನ್ನು ನಿರ್ಬಂಧಿಸಬೇಕು. ಪರಿಶಿಷ್ಟರ ಸಾಂವಿಧಾನಿಕ ಹಕ್ಕು- ಅವಕಾಶಗಳನ್ನು ರಕ್ಷಿಸಬೇಕು.
    ಪರಿಶಿಷ್ಟರನ್ನು ಶಿಕ್ಷಣ ಮತ್ತು ಉದ್ಯೋಗ ವಂಚಿತರನ್ನಾಗಿ ಮಾಡಲು ಮುಂದಾಗಿರುವ ಕಿಡಿಗೆಡಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಪರಿಶಿಷ್ಟ ಜಾತಿಗಳ ರಕ್ಷಣಾ ವೇದಿಕೆಯ ಮುಖಂಡ ಎಚ್. ಮಲ್ಲೇಶ್, ಎಸ್.ಜಿ.ಸೋಮಶೇಖರ್, ಲಕ್ಷ್ಮ್ಮಣ್ ರಾಮಾವತ್, ವೆಂಕಟೇಶ್‌ಬಾಬು, ಕುಂದುವಾಡ ಮಂಜುನಾಥ್, ದೊಡ್ಡಪ್ಪ ಆವರಗೊಳ್ಳ, ನಿಂಗಪ್ಪ, ಹನುಮಂತಪ್ಪ ಅಣಜಿ, ಚೌಡಮ್ಮ ಚಿತ್ತಾನಹಳ್ಳಿ, ಶಾರದಮ್ಮ, ಆರತಿ, ಹನುಮಕ್ಕ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts