More

    ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದ ಖದೀಮರು!

    ಮಂಗಳೂರು: ಸಹಕಾರಿ ಬ್ಯಾಂಕ್‌ಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದು ಲಕ್ಷಾಂತರ ರೂ.ವಂಚನೆ ಮಾಡಿದ ಪ್ರಕಣ ಬೆಳಕಿಗೆ ಬಂದಿದೆ. ಈ ಬಗ್ಗೆ 3 ಪೊಲೀಸ್ ಠಾಣೆಗಳಲ್ಲಿ 6 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಉಳ್ಳಾಲ ಠಾಣೆಯಲ್ಲಿ 2, ಕೊಣಾಜೆಯಲ್ಲಿ 3 ಮತ್ತು ಮಂಗಳೂರು ನಗರ ಠಾಣೆಗಳಲ್ಲಿ ಒಂದು ಪ್ರಕರಣ ದಾಖಲಾಗಿದೆ. ಮಂಜನಾಡಿ ಸಮೀಪದ ಕಲ್ಕಟ್ಟದ ಕೆ.ಸಾದಿಕ್(33) ಮತ್ತು ಇನ್ನೋರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಉಪ್ಪಿನಂಗಡಿಯಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಮುಡಿಪು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಚಿನ್ನವನ್ನು ಬುಧವಾರ ಪರಿಶೀಲಿಸಿದಾಗ ಅದು ನಕಲಿ ಎಂದು ಗೊತ್ತಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಬ್ಬಂದಿ, ಪ್ರಕರಣದ ಆರೋಪಿ ಸಾದಿಕ್‌ನನ್ನು ಸಹಿ ನೆಪದಲ್ಲಿ ಉಪಾಯದಿಂದ ಕಚೇರಿಗೆ ಬರಲು ಹೇಳಿ ಬಳಿಕ ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಇದಾದ ಬಳಿಕ ಗುರುವಾರ ಆತ್ಮಶಕ್ತಿಯ ಬೆಂದೂರ್‌ವೆಲ್ ಕೇಂದ್ರ ಕಚೇರಿಯಲ್ಲಿ ಚಿನ್ನಾಭರಣ ಪರಿಶೀಲಿಸಿದಾಗ ಇನ್ನೊಂದು ಪ್ರಕರಣ ಬಯಲಿಗೆ ಬಂತು. ಆ ಆರೋಪಿಯನ್ನೂ ಸಿಬ್ಬಂದಿ ಉಪಾಯದಿಂದ ಕಚೇರಿಗೆ ಬರಲು ಹೇಳಿ ಪೊಲೀಸರಿಗೊಪ್ಪಿಸಿದ್ದರು.

    ಆರೋಪಿಗಳು ಪರಿಶುದ್ಧ ಚಿನ್ನ ಎಂದು ನಂಬಿಸಿ ಅವುಗಳನ್ನು ಅಡವು ಇರಿಸಿ ಹಣ ಪಡೆದಿದ್ದಾರೆ. 3-4 ಕೋಟ್ ಚಿನ್ನದ ಲೇಪನ ನೀಡಿ ಅವುಗಳು ಅಸಲಿ ಚಿನ್ನ ಎಂದು ನಂಬಿಸಿ ಅವುಗಳನ್ನು ಸಹಕಾರಿ ಸಂಘಗಳಲ್ಲಿ ಅಡವು ಇರಿಸಿ ಹಣ ಪಡೆದು ವಂಚಿಸುತ್ತಿದ್ದರು.
    ಆರೋಪಿಗಳು ಸಂಬಂಧಿಕರು, ಪರಿಚಯಸ್ಥರ ಹೆಸರಿನಲ್ಲೂ ಚಿನ್ನ ಅಡವಿಟ್ಟು ಸಾಲ ಪಡೆದಿದ್ದಾರೆ. ಈ ನಿಟ್ಟಿನಲ್ಲೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಇತರ ಸಹಕಾರಿ ಸಂಸ್ಥೆಗಳಲ್ಲೂ ಚಿನ್ನ ಅಡವಿಟ್ಟು ಸಾಲ ಪಡೆದಿದ್ದಾರೆಯೇ ಎಂಬುದು ಖಚಿತಗೊಂಡಿಲ್ಲ. ಈ ನಿಟ್ಟಿನಲ್ಲಿ ಪೊಲೀಸ್ ವಿಚಾರಣೆ ಮುಂದುವರಿದಿದೆ.

    ಕಮಿಷನರ್‌ಗೆ ಮನವಿ: ಆತ್ಮಶಕ್ತಿ ಸೌಹಾರ್ದ ಸಹಕಾರಿ ಸಹಿತ ಇತರ ಕೆಲವು ಸಹಕಾರಿ ಸಂಸ್ಥೆಗಳ ಆಡಳಿತ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಗುರುವಾರ ಮಂಗಳೂರಿನ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರನ್ನು ಭೇಟಿ ಮಾಡಿ ತಮಗಾಗಿರುವ ವಂಚನೆಯ ಮಾಹಿತಿ ನೀಡಿದರು.

    ಸಂಪೂರ್ಣ ನಕಲಿ ಅಲ್ಲ: ಆರೋಪಿ ಅಡವಿಟ್ಟ ಚಿನ್ನ ಪೂರ್ತಿ ನಕಲಿ ಅಲ್ಲ. ಇತರ ಲೋಹದ ಆಭರಣಗಳಿಗೆ ಎರಡು ಮೂರು ಬಾರಿ ಚಿನ್ನದ ಕೋಟಿಂಗ್ ಮಾಡಿರುವುದರಿಂದ ಅದನ್ನು ಪರಿಶೀಲನೆ ವೇಳೆ ಎಷ್ಟು ಉಜ್ಜಿದರೂ ಗೊತ್ತಾಗುವುದಿಲ್ಲ. ವಿದೇಶಗಳಲ್ಲಿ ನಿರ್ಮಾಣವಾಗುವ ಇಂಥ ಚಿನ್ನವನ್ನು ತಂದು ವಂಚಿಸಲೆಂದೇ ಅಡವಿಡುತ್ತಿದ್ದಾರೆ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.

    ಧೈರ್ಯ ಮೆರೆದ ಮಹಿಳಾ ಸಿಬ್ಬಂದಿ: ಆತ್ಮಶಕ್ತಿ ಸಹಕಾರಿ ಸಂಘದ ಮುಡಿಪು ಶಾಖೆ ಮತ್ತು ಬೆಂದೂರ್‌ವೆಲ್‌ನ ಪ್ರಧಾನ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಯೇ ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸುವ ಮೂಲಕ ಧೈರ್ಯ ಮೆರೆದಿದ್ದಾರೆ. ಆರೋಪಿಗಳನ್ನು ಉಪಾಯದಿಂದ ಸಹಕಾರಿ ಸಂಘಕ್ಕೆ ಬರಲು ಹೇಳಿ, ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಸಹಕಾರಿ ಸಂಘದ ಪ್ರಧಾನ ಬಾಗಿಲು ಹಾಕಿ ಆರೋಪಿ ಹೊರಗೆ ಓಡಿ ಹೋಗದಂತೆ ಎಚ್ಚರ ವಹಿಸಿ, ಪೊಲೀಸರಿಗೊಪ್ಪಿಸಿದ್ದಾರೆ. ಮಹಿಳಾ ಸಿಬ್ಬಂದಿಯ ಸಾಹಸಕ್ಕೆ ಆತ್ಮಶಕ್ತಿ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ನಗರ ಹಾಗೂ ಹೊರವಲಯದ ಸಹಕಾರಿ ಬ್ಯಾಂಕ್‌ಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಹಣ ಪಡೆದು ವಂಚಿಸಿರುವ ಬಗ್ಗೆ ಕೆಲವು ಸಹಕಾರಿ ಬ್ಯಾಂಕ್‌ನವರು ದೂರು ನೀಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಲಾಗುವುದು.
    -ಎನ್.ಶಶಿಕುಮಾರ್, ಪೊಲೀಸ್ ಆಯುಕ್ತ, ಮಂಗಳೂರು ನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts