More

    ನಕಲಿ ಗುರುತಿನ ಚೀಟಿ ಮುದ್ರಿಸುತ್ತಿದ್ದ ಇಬ್ಬರ ಬಂಧನ

    ಹಾವೇರಿ: ನಕಲಿ ಚುನಾವಣಾ ಗುರುತಿನ ಚೀಟಿ ಮುದ್ರಿಸುತ್ತಿದ್ದ ಆರೋಪದ ಮೇಲೆ ನಗರದ ಎಂಜಿ ರಸ್ತೆಯಲ್ಲಿ ಹಾವೇರಿ ಒನ್ ಎಂಬ ಹೆಸರಿನಲ್ಲಿ ಕಾಮನ್ ಸರ್ವಿಸ್ ಸೆಂಟರ್(ಸಿಎಸ್​ಸಿ) ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ.

    ನಗರದ ನಿವಾಸಿಗಳಾದ ಜೀವನಸಿಂಗ್ ರಜಪೂತ, ನವೀನ್ ಉಪ್ಪಾರ ಬಂಧಿತರು. ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ. ದಿಲೀಪ್ ಶಶಿ, ತಹಸೀಲ್ದಾರ್ ಶಂಕರ ಜಿ.ಎಸ್., ನೇತೃತ್ವದಲ್ಲಿ ದಾಳಿ ನಡೆಸಿ ಕೆಲವು ನಕಲಿ ಚುನಾವಣಾ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

    ಪತ್ತೆಯಾಗಿದ್ದು ಹೀಗೆ…: ನಗರದಲ್ಲಿರುವ ತಹಸೀಲ್ದಾರ್ ಕಚೇರಿಗೆ ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಪದವೀಧರರೊಬ್ಬರು ಅ. 6ರಂದು ಅರ್ಜಿ ಸಲ್ಲಿಸಿದ್ದರು. ಅರ್ಜಿಯೊಂದಿಗೆ ಅವರು ಸಲ್ಲಿಸಿದ್ದ ಚುನಾವಣಾ ಗುರುತಿನ ಚೀಟಿಯಲ್ಲಿನ ಹಾವೇರಿ ಚುನಾವಣಾಧಿಕಾರಿಯ ಸಹಿ ನಕಲಿಯಾಗಿರುವುದು ತಹಸೀಲ್ದಾರ್ ಹಾಗೂ ಎಸಿಯವರ ಗಮನಕ್ಕೆ ಕಂಡುಬಂತು. ಆಗ ಅರ್ಜಿದಾರರನ್ನು ಚುನಾವಣಾ ಗುರುತಿನ ಚೀಟಿ ಯಾರು ಕೊಟ್ಟಿದ್ದಾರೆ ಎಂದು ವಿಚಾರಿಸಿದಾಗ ಎಂಜಿ ರಸ್ತೆಯಲ್ಲಿರುವ ಹಾವೇರಿ ಒನ್ ಸಿಎಸ್​ಸಿಯ ಹೆಸರು ಹೇಳಿದ್ದಾರೆ. ಈ ವಿಷಯವನ್ನು ತಹಸೀಲ್ದಾರ್ ಹಾಗೂ ಎಸಿ ಎಡಿಸಿಯವರ ಗಮನಕ್ಕೆ ತಂದಿದ್ದಾರೆ.

    ಎಡಿಸಿಯವರು ಆರೋಪಿಯನ್ನು ಸಾಕ್ಷಿ ಸಮೇತ ಸೆರೆ ಹಿಡಿಯಲು ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಟಿಂಗ್ ಆಪರೇಷನ್ ನಡೆಸಿದಾಗ ಆರೋಪಿ ನಕಲಿ ಚುನಾವಣಾ ಗುರುತಿನ ಚೀಟಿ ಮಾಡುವ ಸಮಯದಲ್ಲಿಯೇ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

    ನಂತರ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ, ಅಲ್ಲಿ ಸಿಕ್ಕ 3 ನಕಲಿ ಗುರುತಿನ ಚೀಟಿ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕಾರ್ಡ್​ಗಳನ್ನು ಪರಿಶೀಲಿಸಿದರು. ಸೆಂಟರ್​ನಲ್ಲಿದ್ದ ಕಂಪ್ಯೂಟರ್​ನ ಹಾರ್ಡ್​ಡಿಸ್ಕ್, ಪ್ರಿಂಟರ್, ಪ್ರಿಂಟ್​ಗೆ ಬಳಸುತ್ತಿದ್ದ ಕಾಗದಗಳು ಸೇರಿ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲು ಸೂಚಿಸಿದರು.

    ಈ ಕುರಿತು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ತಹಸೀಲ್ದಾರ್ ಪ್ರಕರಣ ದಾಖಲಿಸಿದ್ದಾರೆ. ಸಿಪಿಐಗಳಾದ ಸಂತೋಷ ಪವಾರ, ಪ್ರಭಾವತಿ ಶೇತಸನದಿ ಇತರರು ದಾಳಿಯಲ್ಲಿದ್ದರು.

    ಆರೋಪಿ ಜೀವನಸಿಂಗ್ ರಜಪೂತ ಸಿಎಸ್​ಸಿ ಸೆಂಟರ್​ನ ಪ್ರಾಂಚೈಸಿ ಪಡೆದಿದ್ದು, ಇನ್ನೋರ್ವ ಆರೋಪಿ ನವೀನ ಉಪ್ಪಾರ ಅವನಿಗೆ ಸಹಕಾರ ನೀಡುತ್ತಿದ್ದ. ಆನ್​ಲೈನ್​ನಲ್ಲಿ ಪ್ರಿಂಟ್ ಪೋರ್ಟಲ್ ಎಕ್ಸ್​ವೈಝೆಡ್.ಕಾಮ್ ಎಂಬ ವೆಬ್​ಸೈಟ್​ನಿಂದ 200 ರೂ.ಗಳನ್ನು ಗೂಗಲ್ ಪೇ ಮೂಲಕ ಪಾವತಿಸಿ ಸಾಫ್ಟವೇರ್ ಡೌನ್​ಲೋಡ್ ಮಾಡಿಕೊಂಡು ಅದರ ಮೂಲಕ ಚುನಾವಣಾ ಗುರುತಿನ ಚೀಟಿಗಳ ಮಾದರಿಯಲ್ಲಿಯೇ ನಕಲಿ ಗುರುತಿನ ಚೀಟಿಗಳನ್ನು ಪ್ರಿಂಟ್ ಮಾಡುತ್ತಿದ್ದೇ ಎಂದು ಒಪ್ಪಿಕೊಂಡಿದ್ದಾನೆ. ಈ ರೀತಿಯಾಗಿ ಎಷ್ಟು ಜನರಿಗೆ ಗುರುತಿನ ಚೀಟಿಗಳನ್ನು ಮಾಡಿಕೊಟ್ಟಿದ್ದಾನೆ. ಇದಲ್ಲದೇ ಬೇರೆ ಯಾವ್ಯಾವ ಗುರುತಿನ ಚೀಟಿಗಳನ್ನು ಮಾಡುತ್ತಿದ್ದ. ಜಿಲ್ಲೆಯ ಇನ್ನಿತರ ಸೆಂಟರ್​ಗಳಲ್ಲಿ ಈ ರೀತಿಯ ಮಾಡಲಾಗುತ್ತಿದೆಯೇ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಹರಿಯಾಣ ಮೂಲದಿಂದ ಈ ಸಾಫ್ಟವೇರ್ ಬಂದಿದೆ ಎಂದು ಆರೋಪಿ ಹೇಳಿದ್ದು, ಈ ಕುರಿತು ಚುನಾವಣಾ ಆಯೋಗದ ಗಮನಕ್ಕೆ ತಂದು ಪ್ರಕರಣದ ತನಿಖೆಯನ್ನು ಗಂಭೀರವಾಗಿ ನಡೆಸಲಾಗುವುದು.

    | ಸಂಜಯ ಶೆಟ್ಟಣ್ಣನವರ, ಜಿಲ್ಲಾಧಿಕಾರಿ ಹಾವೇರಿ

    ಸಿಎಸ್​ಸಿಗಳಿಗೆ ತಹಸೀಲ್ದಾರ್ ಭೇಟಿ

    ರಟ್ಟಿಹಳ್ಳಿ: ಜಿಲ್ಲೆಯಲ್ಲಿ ನಕಲಿ ಚುನಾವಣೆ ಗುರುತಿನ ಚೀಟಿ ಹಾವಳಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿರ್ದೇಶನದಂತೆ ಪಟ್ಟಣದ ಕೆಲವು ಸಿಎಸ್​ಸಿ ( ಸಮಾನ್ಯ ಸೇವಾ ಕೇಂದ್ರ) ಗಳಿಗೆ ತಹಸೀಲ್ದಾರ್ ಕೆ. ಗುರುಬಸವರಾಜ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

    ಈ ವೇಳೆ ತಹಸೀಲ್ದಾರ್ ಕೆ.ಗುರುಬಸವರಾಜ ಮಾತನಾಡಿ, ರಟ್ಟಿಹಳ್ಳಿಯ ಕೆಲವು ಸಿಎಸ್​ಸಿಗಳಲ್ಲಿ ನಕಲಿ ಚುನಾವಣಾ ಗುರುತಿನ ಚೀಟಿ ನೀಡುತ್ತಿದ್ದಾರೆ ಎಂದು ಕೆಲ ಕರೆಗಳು ಬಂದಿದ್ದವು. ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಪಟ್ಟಣದ ಎಲ್ಲ ಕೇಂದ್ರಗಳಲ್ಲಿ ಈ ಬಗ್ಗೆ ಪರಿಶೀಲನೆ ಮಾಡಲಾಗಿದೆ ಎಂದರು.

    ಗ್ಲೋಬಲ್ ಸಿಎಸ್​ಸಿಯಲ್ಲಿ ಅಂಗಡಿ ಮಾಲೀಕ ಗುರುತಿನ ಚೀಟಿ ಮಾಡಿಕೊಡುವುದಾಗಿ ಕೆಲವರಿಂದ ಅರ್ಜಿ ಮತ್ತು 100 ರೂ. ನಗದು ಪಡೆದಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ರಾಣೆಬೆನ್ನೂರಿನ ಸುನೀಲ ಸಿಎಸ್​ಸಿನವರು ನಮಗೆ ಚುನಾವಣೆಯ ಗುರುತಿನ ಚೀಟಿ ನೀಡುವ ಏಜೆನ್ಸಿಯಾಗಿದೆ. ಯಾರಿಗಾದರೂ ಗುರುತಿನ ಚೀಟಿಯ ಅವಶ್ಯವಿದ್ದರೆ ಅರ್ಜಿ ಪಡೆದುಕೊಂಡು ನಮಗೆ ಕಳುಹಿಸದರೆ ಅವರಿಗೆ ಗುರುತಿನ ಚೀಟಿ ನೀಡುವುದಾಗಿ ತಿಳಿಸಿದ್ದರಿಂದ ಅರ್ಜಿ ಪಡೆದುಕೊಂಡಿದ್ದೇನೆ. ಇಲ್ಲಿಯವರೆಗೆ ಹೊಸದಾಗಿ ಯಾರಿಗೂ ಚುನಾವಣೆಯ ಗುರುತಿನ ಚೀಟಿ ನೀಡಿಲ್ಲ ಎಂದು ತಿಳಿಸಿದ್ದಾನೆ. ಈ ಕುರಿತು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

    ವದಂತಿಗಳಿಗೆ ಕಿವಿಗೊಡಬಾರದು: ಸಾರ್ವಜನಿಕರು ಚುನಾವಣಾ ಗುರುತಿನ ಚೀಟಿ ಮಾಡಿಸುವ ಸಂದರ್ಭದಲ್ಲಿ ಸಂಬಂಧಿಸಿದ ಬಿಎಲ್​ಒಗಳನ್ನು ಭೇಟಿ ಮಾಡಿ ಮಾಹಿತಿ ನೀಡಬೇಕು. ಅವರು ಚುನಾವಣಾ ಗುರುತಿನ ಚೀಟಿ ಅಥವಾ ಗುರುತಿನ ಚೀಟಿಯಲ್ಲಿನ ತಿದ್ದುಪಡಿಯ ಕುರಿತು ಮಾಹಿತಿ ನೀಡುತ್ತಾರೆ. ಯಾವುದೇ ಸಿಎಸ್​ಸಿ ಸೆಂಟರ್​ಗಳಿಗೆ ಚುನಾವಣಾ ಗುರುತಿನ ಚೀಟಿ ಮಾಡಲು ಅನುಮತಿ ಇರುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂದು ತಹಸೀಲ್ದಾರ್ ಕೆ. ಗುರುಬಸವರಾಜ ತಿಳಿಸಿದ್ದಾರೆ. ಕಂದಾಯ ನಿರೀಕ್ಷಕ ವಿಜಯಕುಮಾರ ಗುಡಗೇರಿ, ಪೊಲೀಸ್ ಸಿಬ್ಬಂದಿ ಹಾಲೇಶ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts