More

    ನಕಲಿ ಖಾತೆಗಳ ಸಮಗ್ರ ತನಿಖೆಗೆ ಕ್ರಮ

    ಮದ್ದೂರು: ಪಟ್ಟಣದ ವ್ಯಾಪ್ತಿಯಲ್ಲಿ ನಿವೇಶನಗಳಿಗೆ ಸಂಬಂಧಿಸಿದಂತೆ ನಕಲಿ ಖಾತೆಗಳು ಸೃಷ್ಟಿಯಾಗುತ್ತಿರುವ ಬಗ್ಗೆ ಸಾರ್ವಜನಿಕವಾಗಿ
    ದೂರುಗಳು ಬರುತ್ತಿದ್ದು, ಈ ಸಂಬಂಧ ಸಮಗ್ರ ತನಿಖೆ ನಡೆಸಲು ಕ್ರಮ ವಹಿಸಲಾಗುವುದು ಎಂದು ಶಾಸಕ ಕೆ.ಎಂ. ಉದಯ್ ಹೇಳಿದರು.

    ಪಟ್ಟಣದ ಪುರಸಭೆಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಮದ್ದೂರನ್ನು ನಗರಸಭೆ ಮಾಡುವ ಕನಸಿದೆ. ಅದನ್ನು ಮುಂದಿನ ದಿನಗಳಲ್ಲಿ ಸಾಕಾರಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
    ಪಟ್ಟಣದ ಮೂಲಕ ಹಾದು ಹೋಗುವ ಕೆಮ್ಮಣ್ಣುನಾಲೆ ಸೇರಿದಂತೆ ಇನ್ನಿತರೆ ನಾಲೆಗಳ ಅಭಿವೃದ್ಧಿಗಾಗಿ 150 ಕೋಟಿ ರೂ. ಪ್ರಸ್ತಾವನೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಿದ್ದು, ಶೀಘ್ರವಾಗಿ ಉಪ ಮುಖ್ಯಮಂತ್ರಿಗಳು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ನಾಲೆಗಳ ಆಧುನೀಕರಣಕ್ಕೆ ಮುಂದಿನ ದಿನಗಳಲ್ಲಿ ಚಾಲನೆ ನೀಡಲಾಗುವುದು. ಕೆಮ್ಮಣ್ಣು ನಾಲೆಗೆ ಹರಿಯುತ್ತಿರುವ ಒಳಚರಂಡಿ ನೀರನ್ನು ಹರಿಯದಂತೆ ಕ್ರಮ ಕೈಗೊಂಡು ಒಳಚರಂಡಿಯನ್ನು ಆಧುನಿಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸುದಿಗೋಷ್ಠಿಯಲ್ಲಿ ತಿಳಿಸಿದರು.


    20 ವರ್ಷಗಳಿಂದ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. 20 ವರ್ಷಗಳ ಸಮಸ್ಯೆಗಳು ನನ್ನ ತಲೆಯ ಮೇಲೆ ಬಂದು ಕೂತಿವೆ. ನಾನು ಈಗ ಜವಾಬ್ದಾರಿಯುತ ಸ್ಥಾನದಲ್ಲಿ ಇರುವುದರಿಂದ ಆದ್ಯತೆ ಮೇರೆಗೆ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ನನಗೆ ಕ್ಷೇತ್ರದ ಜನ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್(ಬಿಎಂಐಸಿ) ಯೋಜನೆಯನ್ನು ಹಿಂಪಡೆದರೆ, ಮದ್ದೂರು ಪುರಸಭೆಗೆ ಹೆಚ್ಚಿನ ಆದಾಯ ಬಂದು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಪುರಸಭೆ ವ್ಯಾಪ್ತಿಯಲ್ಲಿ ಅಸ್ತಿತ್ವದಲ್ಲಿರುವ ಬಿಎಂಐಸಿ ಹಿಂಪಡೆಯುವಂತೆ ಸಂಬಂಧಿಸಿದ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಮದ್ದೂರು ಪಟ್ಟಣ ಬಿಎಂಐಸಿಗೆ ಒಳಪಟ್ಟಿರುವುದರಿಂದ, ಸಾರ್ವಜನಿಕರು ಮನೆ, ಕಟ್ಟಡಗಳನ್ನು ನಿರ್ಮಾಣ ಮಾಡಲು ಪರವಾನಗಿ ಪಡೆದುಕೊಳ್ಳಲು ಕಷ್ಟವಾಗುತ್ತಿದ್ದು, ಅದನ್ನು ಹಿಂಪಡೆಯುವುದಕ್ಕೆ ಸಂಬಂಧಿಸಿದ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ತಿಳಿಸಿದರು.

    ಪಟ್ಟಣದ ಪೇಟೆ ಬೀದಿಯನ್ನು ವಿಸ್ತರಣೆ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಈಗಾಗಲೇ ಈ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಹಲವು ಬಾರಿ ಚರ್ಚೆ ನಡೆಸಿದ್ದೇನೆ. ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಪುರಸಭಾ ಸದಸ್ಯರಾದ ಸಚಿನ್, ಸಿದ್ದರಾಜು, ಮುಖಂಡರಾದ ಶಂಕರೇಗೌಡ, ಸಿಪಾಯಿ ಶ್ರೀನಿವಾಸ್, ಗೆಜ್ಜಲಗೆರೆ ಹರೀಶ್, ಕದಲೂರು ಕೆ.ಎಂ. ರವಿ ಸೇರಿದಂತೆ ಇತರರು ಇದ್ದರು.

    26 ರಂದು ಗ್ರಾಮಗಳ ಪ್ರವಾಸ : ಮದ್ದೂರು ಕ್ಷೇತ್ರದ ಬೆಸಗರಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಜು. 26 ರಂದು ಬೆಳಗ್ಗೆ 8.30 ಗಂಟೆಯಿಂದ ರಾತ್ರಿ 8.30 ಗಂಟೆವರೆಗೆ ಗ್ರಾಮಗಳ ಪ್ರವಾಸ ಮಾಡಿ ಜನರ ಕುಂದು ಕೊರತೆ ಆಲಿಸಲಾಗುವುದು ಎಂದು ಶಾಸಕ ಕೆ.ಎಂ. ಉದಯ್ ಹೇಳಿದರು. ಹಿಂದೆ ಕೆಸ್ತೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರವಾಸ ಮಾಡಿ ಜನರ ಸಮಸ್ಯೆ ಆಲಿಸಿದ್ದೆ. ಅವರ ಸಮಸ್ಯೆಗಳನ್ನು ಹಂತವಾಗಿ ಬಗೆಹರಿಸಲು ಪ್ರಯತ್ನಿಸುತ್ತಿದ್ದೇನೆ. ಈಗ ಬೆಸಗರಹಳ್ಳಿ ಜಿಪಂ ವ್ಯಾಪ್ತಿಯ ನಿಲುವಾಗಿಲು, ಕೋಡಿಹಳ್ಳಿ, ಹರಳಹಳ್ಳಿ, ರಾಂಪುರ, ಶಂಕರಪುರ, ಹೊಂಬಾಳೇಗೌಡನ ದೊಡ್ಡಿ, ಕೆರೆಮೇಗಳದೊಡ್ಡಿ, ಬೆಸಗರಹಳ್ಳಿ, ನಾಗನದೊಡ್ಡಿ, ಆನೆದೊಡ್ಡಿ ಸೇರಿದಂತೆ ಇತರ ಗ್ರಾಮಗಳಲ್ಲಿ ಪ್ರವಾಸ ಮಾಡಿ ಜನರ ಕುಂದು ಕೊರತೆಯನ್ನು ಆಲಿಸಿ ಅಧಿಕಾರಿಗಳಿಂದ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ. ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts