More

    ನಂಬರ್ ಗೇಮ್ ಮುಖವಾಡ!

    ಬೆಳಗಾವಿ: ‘ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು’ ಎಂಬಂತೆ ಸಂಚಾರ ಪೊಲೀಸರ ದಂಡದಿಂದ ಪಾರಾಗಲು ಪಡ್ಡೆ ಹುಡುಗರು ಅನುಸುತ್ತಿರುವ ನೋಂದಣಿ ಸಂಖ್ಯೆ ಬದಲಾಯಿಸುವ ವರಸೆ, ಅವರನ್ನೇ ಕಾನೂನಿನ ಕುಣಿಕೆಗೆ ತಳ್ಳುತ್ತಿದೆ.

    ನಗರ ಪ್ರದೇಶದಲ್ಲಿ ಪೊಲೀಸರ ಕಿರಿಕಿರಿ ತಪ್ಪಿಸಿಕೊಳ್ಳಲು ತಮ್ಮ ವಾಹನದ ನೋಂದಣಿ ಸಂಖ್ಯೆ ಮುಚ್ಚಿಡಲು, ಇನ್ನಾವುದೋ ನಂಬ ಅನ್ನು ಪ್ಲೇಟ್‌ಗೆ ಅಂಟಿಸಿಕೊಂಡು ಪೊಲೀಸರ ದಿಕ್ಕು ತಪ್ಪಿಸುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ತಪ್ಪೇ ಮಾಡದ, ಅಧಿಕೃತವಾಗಿ ಅದೇ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳ ಮಾಲೀಕರು ದಂಡ ತೆರುತ್ತಿದ್ದಾರೆ. ರಾಜ್ಯದಲ್ಲಿ ಇಂತಹ ಹಲವು ಪ್ರಕರಣಗಳು ವರದಿಯಾಗಿವೆ.

    ವಾಹನಗಳ ನಂಬರ್ ಬದಲಾಯಿಸಿ, ವಂಚಿಸುತ್ತಿರುವ ಪ್ರಕರಣಗಳ ಬೆನ್ನು ಹತ್ತಿರುವ ಪೊಲೀಸರಿಗೆ ಅಪ್ರಾಪ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಕೃತ್ಯ ಎಸಗುತ್ತಿರುವುದು ತನಿಖೆಯಿಂದ ಗೊತ್ತಾಗುತ್ತಿದ್ದು, ಹಲವು ಅಪ್ರಾಪ್ತರು ಈಗಾಗಲೇ ರಿಮ್ಯಾಂಡ್ ಹೋಮ್ ಸೇರಿದ್ದಾರೆ. ಇಂತಹದ್ದೇ ಒಂದು ಪ್ರಕರಣದಲ್ಲಿ ವಾಹನ ಮಾಲೀಕರೊಬ್ಬರಿಗೆ ಪೊಲೀಸರು ದಂಡದ ನೋಟಿಸ್ ಕಳುಹಿಸಿದ್ದರು. ಆ ದಿನ ವಾಹನ ಮನೆಯಲ್ಲೇ ಇದ್ದರೂ ನಿಯಮ ಉಲ್ಲಂಘನೆ ಹೇಗಾಯಿತು ಎಂಬ ಅನುಮಾನದಿಂದ ವಾಹನ ಮಾಲೀಕ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಈ ನಂಬರ್ ಗೇಮ್‌ನ ಅಸಲಿ ಮುಖವಾಡ ಬೆಳಕಿಗೆ ಬಂದಿದೆ.

    ಸರಗಳ್ಳತನ, ಪಿಕ್ ಪಾಕೆಟ್‌ಗೆ ಬಳಕೆ: ಹೆಲ್ಮೆಟ್ ಧರಿಸದಿರುವುದು ಸೇರಿ ಇನ್ನಿತರ ಸಂಚಾರ ನಿಯಮ ಉಲ್ಲಂಘಿಸುವುದು ಒಂದೆಡೆಯಾದರೆ, ಮತ್ತೊಂದೆಡೆ ಹೆಲ್ಮೆಟ್ ಧರಿಸಿ, ಸರಗಳ್ಳತನ, ಜೇಬು ಗಳ್ಳತನದಂಥ ಅಪರಾಧ ಕೃತ್ಯಗಳಲ್ಲಿಯೂ ಭಾಗಿಯಾಗುತ್ತಿರುವುದು ಕಂಡು ಬಂದಿದೆ. ಕಳ್ಳರು ಯಾರು? ವಿದ್ಯಾರ್ಥಿಗಳು ಯಾರು ಎಂಬುವುದನ್ನು ಗುರುತಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ವಾಹನಗಳ ಸಂಖ್ಯೆ ಬದಲಾಯಿಸಿಕೊಂಡು ತಿರುಗಾಡುವವರು ಸಾರ್ವಜನಿಕರಲ್ಲಿ ಅಡ್ರೆಸ್ ಕೇಳುವ ನೆಪದಲ್ಲಿ ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗುವುದು, ಪರ್ಸ್ ಹಾಗೂ ವ್ಯಾನಿಟಿ ಬ್ಯಾಗ್ ಎಗರಿಸುವ ಮೂಲಕ ಅಪರಾಧ ಕೃತ್ಯಗಳಿಗೂ ಬಳಕೆ ಮಾಡಲಾಗುತ್ತಿದೆ ಎನ್ನುತ್ತಿವೆ ಪೊಲೀಸ್ ಮೂಲಗಳು.

    ಐಪಿಸಿ 419, 420ರಡಿ ಪ್ರಕರಣ

    ನಂಬರ್ ಬದಲಾಯಿಸಿ ಸಂಚರಿಸುವ ವಿರುದ್ಧ ಬೆಳಗಾವಿ ನಗರದಲ್ಲೇ ಕಳೆದ ನಾಲ್ಕು ತಿಂಗಳಲ್ಲಿ 20 ಪ್ರಕರಣಗಳು ಬೆಳಕಿಗೆ ಬಂದಿವೆ. ಬೆಳಗಾವಿ ವಡಗಾವಿ ಆದರ್ಶ ನಗರದ ವಿಜಯಕುಮಾರ ಟಿ. ಅವರ ಮಾಲೀಕತ್ವದ ಹೋಂಡಾ ಕಂಪನಿಯ ಸ್ಪ್ಲೆಂಡರ್ ಬೈಕ್‌ನ ನೋಂದಾಯಿತ ವಾಹನ ಸಂಖ್ಯೆಯನ್ನು ಸುಜುಕಿ ಸ್ಕೂಟಿಗೆ ಅಳವಡಿಸಿಕೊಂಡು ಅಪರಾಧ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ 419 ಹಾಗೂ 420ರಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಆರೋಪಿ ಆಪ್ರಾಪ್ತನಾಗಿದ್ದರಿಂದ ರಿಮ್ಯಾಂಡ್ ಹೋಮ್‌ಗೆ ಕಳುಹಿಸಿದ್ದಾರೆ. ಇನ್ನುಳಿದ ಪ್ರಕರಣಗಳ ತನಿಖೆ ಮುಂದುವರಿದಿದೆ.

    ಮಕ್ಕಳಿಗೆ ಚೆಲ್ಲಾಟ, ಪಾಲಕರಿಗೆ ಸಂಕಟ

    ಕರ್ಕಶ ಶಬ್ಧಮಾಡುವ ಸೈಲೆನ್ಸರ್ ಅಳವಡಿಸಿಕೊಳ್ಳುವ ಯುವಕರು ಹೈಸ್ಕೂಲ್ ಹಾಗೂ ಕಾಲೇಜುಗಳಲ್ಲಿ ವಿಚಿತ್ರ ಖುಷಿಪಡುವುದುಂಟು. ಅದಕ್ಕೆ ಸಾರ್ವಜನಿಕರಿಂದ ಆಕ್ಷೇಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೊಲೀಸರು ಡಿಪೆಕ್ಟಿವ್ ಸೈಲೆನ್ಸರ್ ಹಾಗೂ ಫ್ಯಾನ್ಸಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿರುವ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಠ ಮಾಡುವ ಮಕ್ಕಳ ಪಾಲಕರನ್ನು ಠಾಣೆ ಕರೆಯಿಸಿ, ಅವರಿಂದಲೂ ತಿಳಿ ಹೇಳುವ ಕಾರ್ಯವನ್ನು ಖಾಕಿ ಪಡೆ ಮಾಡುತ್ತಿದೆ. ಆದರೆ, ಪೊಲೀಸ್ ಕಾರ್ಯಾಚರಣೆಯಿಂದ ಬಜಾವ್ ಆಗಲು ಕೆಲವರು ತಮ್ಮ ವಾಹನದ ಸಂಖ್ಯೆಯನ್ನೇ ಬದಲಾಯಿಸಿಕೊಂಡು ತಿರುಗುತ್ತಿರುವುದು ಪಾಲಕರನ್ನೂ ಇಕ್ಕಟ್ಟಿಗೆ ತಳ್ಳುತ್ತಿದೆ.

    ಮತ್ತೊಬ್ಬರ ವಾಹನಗಳ ನೋಂದಣಿ ಸಂಖ್ಯೆಯನ್ನು ದುರ್ಬಳಕೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ. ವಾಹನವು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದರೆ, ಕಾನೂನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಮಕ್ಕಳು ಹೀಗೆ ನಂಬರ್ ಬದಲಾಯಿಸಿ ವಾಹನ ಚಲಾಯಿಸುತ್ತಿದರೆ, ಸರಿಪಡಿಸಿಕೊಳ್ಳುವಂತೆ ಪಾಲಕರು ತಿಳಿಹೇಳಬೇಕು.
    | ಡಾ.ಎಂ.ಬಿ.ಬೋರಲಿಂಗಯ್ಯ ಪೊಲೀಸ್ ಆಯುಕ್ತ, ಬೆಳಗಾವಿ

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts