More

    ಧೈರ್ಯವೇ ಈ ರೋಗಕ್ಕೆ ರಾಮಬಾಣ

    ಹಾವೇರಿ: ಕರೊನಾಕ್ಕೆ ಮದ್ದಿಲ್ಲ ಎಂಬುದು ನಿಜ. ಆದರೆ, ಅದಕ್ಕೆ ಧೈರ್ಯವೇ ಟ್ರೀಟ್​ವೆುಂಟ್, ಕರೊನಾ ಅಂದ್ರೆ ಬರೀ ಕೆಮ್ಮು, ನೆಗಡಿ ಕಾಯಿಲೆ. ಇದಕ್ಕೆ ಹೆದರುವ ಅಗತ್ಯವೇ ಇಲ್ಲ…

    ಇದು ಕರೊನಾ ವಿರುದ್ಧ ಹೋರಾಡಿ ಗೆದ್ದು ಬಂದ ಬಂಕಾಪುರ ಪಟ್ಟಣದ ಬಟ್ಟೆ ವ್ಯಾಪಾರಿ 41 ವರ್ಷದ ದಿನೇಶ ಪಾರಸ್​ವುಲ್ ಜೈನ್ ಅವರ ಸ್ಪಷ್ಟ ಮಾತು.

    ಕರೊನಾ ವೈರಾಣು ವಿರುದ್ಧ ಹೋರಾಟ ಮಾಡಿ ಗೆದ್ದ ತಮ್ಮ ಅನುಭವವನ್ನು ಅವರು ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದು ಹೀಗೆ.

    ‘ಕರೊನಾ ವೈರಸ್ ಹರಡುವಿಕೆ ಆರಂಭಗೊಂಡಾಗಿನಿಂದ ಸಾಕಷ್ಟು ಸುರಕ್ಷತಾ ಕ್ರಮ ಕೈಗೊಂಡಿದ್ದೆ. ನನ್ನ ಸಂಬಂಧಿಕರ ಮದುವೆಯ ಕಾರಣಕ್ಕೆ ಬಟ್ಟೆಗಳನ್ನು ತರಲು ಬೆಂಗಳೂರಿಗೆ ಹೋಗಬೇಕಾಗಿ ಬಂತು. ಹೀಗಾಗಿ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಿಕೊಂಡೇ ಅಲ್ಲಿಗೆ ಹೋಗಿ ಬಂದೆ. ಆದರೆ, ಕರೊನಾ ಹೇಗೆ ಬಂತು ಅನ್ನೋದು ಗೊತ್ತಾಗಿಲ್ಲ.

    ಜೂ. 28ಕ್ಕೆ ಬೆಂಗಳೂರಿನಿಂದ ಬಂಕಾಪುರಕ್ಕೆ ಬಂದು ಅಲ್ಲಿಂದ ಮೈಸೂರಿನಲ್ಲಿಯ ಮದುವೆಗೆ ಹೋಗಿ ಜುಲೈ 1ಕ್ಕೆ ಮರಳಿ ಬಂದಾಗ ಸುಸ್ತು ಕಾಣಿಸಿಕೊಂಡಿತ್ತು. ಪ್ರವಾಸ ಮಾಡಿ ಬಂದಿದ್ದರಿಂದ ಹೀಗೆ ಆಗಿರಬಹುದು ಎಂದು ಕುಟುಂಬ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ಪಡೆದಿದ್ದೆ. ಜು. 5ರಂದು ಜ್ವರ, ಉಸಿರಾಟದ ತೊಂದರೆ, ಕೆಮ್ಮು ಕಾಣಿಸಿಕೊಂಡಿತು. ಜು. 6ರಂದು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದೆ. ಅಲ್ಲಿನ ವೈದ್ಯರು ಪರಿಶೀಲಿಸಿ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಿದರು. ಜು. 7ರಂದು ಸ್ವ್ಯಾಬ್ ಟೆಸ್ಟ್​ಗೆ ಒಯ್ದರು. 9ರಂದು ಪಾಸಿಟಿವ್ ವರದಿ ಬಂದಿತ್ತು. ಅಷ್ಟರಲ್ಲಾಗಲೇ ವೈದ್ಯರ ವಿಶೇಷ ಕಾಳಜಿಯಿಂದ ಉಸಿರಾಟ ಹಾಗೂ ಕೆಮ್ಮಿನಿಂದ ಗುಣವಾಗಿದ್ದೆ. ಹೀಗಾಗಿ, ಐಸಿಯುನಿಂದ ಕೋವಿಡ್ ಸಾಮಾನ್ಯ ವಾರ್ಡ್​ಗೆ ಶಿಫ್ಟ್ ಮಾಡಿದರು. ಆಸ್ಪತ್ರೆಯಲ್ಲಿ ಗುಣಮಟ್ಟದ ಆಹಾರ ಕೊಡುತ್ತಿದ್ದರು. ಆದರೆ, ನಾನು ವ್ರತದಲ್ಲಿದ್ದುದರಿಂದ ಊಟ ನಿರಾಕರಿಸಿದೆ. ವೈದ್ಯರ ವಿಶೇಷ ಅನುಮತಿ ಪಡೆದು ಹಾವೇರಿಯಲ್ಲಿನ ಸಂಬಂಧಿಕರ ಮನೆಯಿಂದ ಊಟ ತರಿಸಲು ಅವಕಾಶ ಕೊಟ್ಟರು. ಅವರ ಸೂಚನೆ ಮೇರೆಗೆ ಯೂಸ್ ಆಂಡ್ ಥ್ರೋ ಪ್ಲೇಟ್​ನಲ್ಲಿ ನಿತ್ಯ ಊಟ ಹಾಗೂ ತಿಂಡಿ ತರಿಸುತ್ತಿದ್ದೆ.

    ಆಸ್ಪತ್ರೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಕರೊನಾ ಬಂತೆಂದು ಭಯ ಬೀಳುವ ಬದಲು ಧೈರ್ಯದಿಂದ ಇದ್ದರೆ ಅದೇ ಅರ್ಧ ರೋಗವನ್ನು ಹೊಡೆದೋಡಿಸುತ್ತದೆ. ಇನ್ನರ್ಧ ವೈದ್ಯರು ನೀಡುವ ಟ್ರೀಟ್​ವೆುಂಟ್​ನಿಂದ ಗುಣವಾಗುತ್ತದೆ. ಮೊದಲಿಗೆ ಜ್ವರ, ಕೆಮ್ಮು, ಉಸಿರಾಟದ ತೊಂದರೆ ತೀವ್ರವಾಗಿದ್ದರಿಂದ ಹೈ ಎಂಟಿಬ್ಯಾಟಿಕ್ ಔಷಧ ನೀಡಿದ್ದರು. ನಂತರ ಎಂಟಿಬ್ಯಾಟಿಕ್ ಇಂಜೆಕ್ಷನ್ ನೀಡುತ್ತಿದ್ದರು. ಪ್ರತಿದಿನಕ್ಕೆ 2 ಬಾರಿ ವೈದ್ಯರು, ನಿಗದಿತ ಸಮಯಕ್ಕೆ ನರ್ಸ್​ಗಳು ಬಂದು ಆರೋಗ್ಯ ವಿಚಾರಿಸುತ್ತಿದ್ದರು. ಕೈತೊಳೆಯಲು ಸೋಪ್, ತಲೆಗೆ ಕೊಬ್ಬರಿ ಎಣ್ಣೆ ಸೇರಿ ವಿವಿಧ ವಸ್ತುಗಳ ಕಿಟ್​ಗಳನ್ನು ನೀಡಿದ್ದರು. ಪ್ರತಿದಿನಕ್ಕೆ ಒಂದರಂತೆ ಮಾಸ್ಕ್ ನೀಡುತ್ತಿದ್ದರು. ಕುಡಿಯಲು ಬಿಸಿನೀರು ಕೊಡುತ್ತಿದ್ದರು. ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಉತ್ತಮವಾಗಿ ಚಿಕಿತ್ಸೆ ನೀಡುವ ಜೊತೆಗೆ ಧೈರ್ಯ ಹೇಳುತ್ತಿದ್ದರು. ಜು. 16ರಂದು ಗುಣವಾಗಿ ಬಿಡುಗಡೆಗೊಂಡೆ. ಕರೊನಾ ಬಂದರೆ ಮುಜುಗರ, ಅಧೈರ್ಯ ಬೇಡವೇಬೇಡ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts